ರಾಖಿ ಕಟ್ಟಿಸಿಕೊಂಡು ಕುಂಕುಮ ಹಚ್ಚೋದನ್ನು ತಡೆದ ಸಿದ್ದರಾಮಯ್ಯ

Public TV
2 Min Read

ಬಾಗಲಕೋಟೆ: ಬ್ರಹ್ಮಕುಮಾರಿ ಈಶ್ವರಿ ಆಶ್ರಮದ ಸನ್ಯಾಸಿನಿಯರಿಂದ ರಾಖಿ ಕಟ್ಟಿಸಿಕೊಂಡ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕುಂಕುಮ ಹಚ್ಚಲು ಬಂದಾಗ ತಡೆದು ಮತ್ತೆ ಚರ್ಚೆಯ ವಿಷಯವಾಗಿದ್ದಾರೆ.

ಬಾದಾಮಿಯ ಕೃಷ್ಣಾ ಹೆರಿಟೇಜ್ ಹೊಟೆಲ್ ಬಳಿ ಸನ್ಯಾಸಿನಿ ಸಿದ್ದರಾಮಯ್ಯ ಅವರಿಗೆ ರಾಖಿ ಕಟ್ಟಿದರು. ಈ ವೇಳೆ ಕುಂಕುಮ ಇಡಲು ಬಂದಾಗ ಬೇಡ ಎಂದು ಹೇಳಿ ಸಿದ್ದರಾಮಯ್ಯ ಅವರು ನಿರಾಕರಿಸಿದ್ದಾರೆ. ಬಳಿಕ ಅವರ ಸಮಸ್ಯೆಯನ್ನು ಆಲಿಸಿ ಬಗೆಹರಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಈ ಹಿಂದೆ ಕುಂಕುಮ ವಿಚಾರವಾಗಿ ವಿವಾದಾತ್ಮಕ ಹೇಳಿಕೆ ಕೊಟ್ಟು ಸಿದ್ದರಾಮಯ್ಯ ಅವರು ಭಾರೀ ಚರ್ಚೆಗೆ ಗ್ರಾಸವಾಗಿದ್ದರು. ಅವರ ಹೇಳಿಕೆಗೆ ಬಿಜೆಪಿ ನಾಯಕರು ಹಾಗೂ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಸಿಡಿದೆದ್ದಿದ್ದರು. ಟ್ವೀಟ್ ಮಾಡಿ, ಬಿಜೆಪಿಯಯವರು ಕುಂಕುಮ ನಾಮ, ಕಾವಿ ಬಟ್ಟೆಗಳನ್ನು ದುರುಪಯೋಗ ಮಾಡಿಕೊಂಡಿದ್ದರಿಂದ ಸಾಮಾನ್ಯ ಜನರು ಕುಂಕುಮಧಾರಿಯನ್ನು ನೋಡಿದಾಗ ಭಯ ಹುಟ್ಟದೆ, ಗೌರವ ಹುಟ್ಟುತ್ತಾ ಎಂದು ಟ್ಟಿಟ್ಟರ್ ನಲ್ಲಿ ಪ್ರಶ್ನೆ ಮಾಡಿದ್ದರು.

ಕುಂಕುಮ ನಾಮ, ಕಾವಿ ಬಟ್ಟೆಗಳೆಲ್ಲ ಭಾರತೀಯ ಧಾರ್ಮಿಕ ಪರಂಪರೆಯ ಭಾಗ, ಅದಕ್ಕೊಂದು ಪಾವಿತ್ರ್ಯ ಇತ್ತು. ಆದರೆ ಯಾವಾಗ ಬಿಜೆಪಿ ನಾಯಕರೆಲ್ಲ ಇವುಗಳನ್ನೆಲ್ಲ ರಾಜಕೀಯಕ್ಕೆ ದುರುಪಯೋಗ ಮಾಡಿಕೊಳ್ಳಲು ಹೊರಟರೋ, ಅದ ನಂತರ ಕುಂಕುಮ, ಕಾವಿ ಹಾಕಿಕೊಂಡವರನ್ನು ಜನತೆ ಸಂಶಯ-ಭಯದಿಂದ ನೋಡುವಂತಾಗಿದೆ. ಉತ್ತರ ಪ್ರದೇಶದಲ್ಲೊಬ್ಬರು ಬಿಜೆಪಿ ಮುಖ್ಯಮಂತ್ರಿ ಇದ್ದಾರೆ. ಮೈತುಂಬಾ ಕಾವಿ ಬಟ್ಟೆ, ಮುಖತುಂಬಾ ಕುಂಕುಮ ಬಳಿದುಕೊಳ್ಳುತ್ತಾರೆ. ಆದರೆ ಅವರ ವಿರುದ್ಧ ಹತ್ತಾರು ಕ್ರಿಮಿನಲ್ ಕೇಸ್ ಗಳಿವೆ. ಈ ಕುಂಕುಮಧಾರಿಯನ್ನು ನೋಡಿದಾಗ ಜನರಿಗೆ ಭಯ ಹುಟ್ಟದೆ, ಗೌರವ ಹುಟ್ಟುತ್ತಾ ಎಂದು ಪ್ರಶ್ನಿಸಿದ್ದರು.

ಹೌದು, ತಿಲಕ ಇಟ್ಟುಕೊಂಡವರನ್ನು ನೋಡಿದರೆ ಭಯವಾಗುತ್ತೆ ಎಂದು ಹೇಳಿರುವುದು ನಿಜ. ಬಹಳಷ್ಟು ಕ್ರಿಮಿನಲ್ ಗಳು ತಮ್ಮ ರಕ್ಷಣೆಗಾಗಿ ತಿಲಕ ಧರಿಸಿ ಮೆರೆದಾಡುತ್ತಿದ್ದಾರೆ. ಇವರು ಧರ್ಮದ್ರೋಹಿಗಳು ಮಾತ್ರವಲ್ಲ, ಸಮಾಜ ದ್ರೋಹಿಗಳು ಕೂಡಾ. ಅವರನ್ನು ದೃಷ್ಟಿಯಲ್ಲಿಟ್ಟುಕೊಂಡೇ ಹೇಳಿದ್ದು. ಏನಿವಾಗ? ನಾನು ಬಿಜೆಪಿ ನಾಯಕರಿಗಿಂತ ಒಳ್ಳೆಯ ಹಿಂದೂ. ನಾನೆಂದೂ ಅವರಂತೆ ತಿಲಕ, ಕಾವಿ, ಧರ್ಮಗಳನ್ನು ರಾಜಕೀಯಕ್ಕೆ ದುರುಪಯೋಗ ಪಡಿಸಿಕೊಂಡಿಲ್ಲ. ನನ್ನದು ಜನಪರ ರಾಜಕಾರಣ, ದೇವರು, ಧರ್ಮ ಎಲ್ಲ ನನ್ನ ಮನೆಯೊಳಗಿನ ನಂಬಿಕೆ ಎಂದು ಹೇಳಿ ಬಿಜೆಪಿ ವಿರುದ್ಧ ಕಿಡಿಕಾರಿದ್ದರು.

Share This Article
Leave a Comment

Leave a Reply

Your email address will not be published. Required fields are marked *