ಮರು ಪರೀಕ್ಷೆ ನಡೆದರೆ ಜ್ಞಾನೇಂದ್ರರಂತಹ ಅಸಮರ್ಥರು ಪಿಎಸ್‍ಐಗಳಾಗಿ ನೇಮಕಗೊಂಡರೂ ಆಶ್ಚರ್ಯ ಇಲ್ಲ: ಸಿದ್ದು

Public TV
2 Min Read

ಬೆಂಗಳೂರು: ಆರಗ ಜ್ಞಾನೇಂದ್ರ ಅವರೇ ಗೃಹಸಚಿವರಾಗಿದ್ದು, ಪಿಎಸ್‍ಐ ನೇಮಕಾತಿ ಮರುಪರೀಕ್ಷೆ ನಡೆದರೆ ಜ್ಞಾನೇಂದ್ರರಂತಹ ಅಸಮರ್ಥ, ಅಪ್ರಾಮಾಣಿಕ, ನಿಷ್ಕ್ರಿಯರೇ ಪಿಎಸ್‍ಐಗಳಾಗಿ ನೇಮಕಗೊಂಡರೂ ಆಶ್ಚರ್ಯ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವಿಟ್ಟರ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?
ಪಿಎಸ್‍ಐ ನೇಮಕಾತಿ ಪರೀಕ್ಷೆಯನ್ನು ರದ್ದುಗೊಳಿಸುವ ಮೂಲಕ ನಡೆದಿರುವ ಅಕ್ರಮವನ್ನು ಒಪ್ಪಿಕೊಂಡ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಯಾವ ನೈತಿಕತೆ ಆಧಾರದಲ್ಲಿ ಗೃಹ ಸಚಿವ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯ?. ಹಗರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕಾದರೆ ಆರೋಪಿ ಅಧಿಕಾರಿಗಳಿಗೆ ರಕ್ಷಣೆ ನೀಡುತ್ತಿರುವ, ಸಾಲು ಸಾಲು ವೈಫಲ್ಯಗಳ ಸರದಾರ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಸಿಎಂ ಅವರು ತಕ್ಷಣ ಸಂಪುಟದಿಂದ ಕಿತ್ತುಹಾಕಬೇಕು. ಇದನ್ನೂ ಓದಿ: ಕೇವಲ ಮುಸ್ಲಿಮರನ್ನೇ ಯಾಕೆ ಟಾರ್ಗೆಟ್ ಮಾಡ್ತಿದ್ದೀರಾ – ಬಿಜೆಪಿಗೆ ಸಿದ್ದು ಪ್ರಶ್ನೆ

ಭ್ರಷ್ಟರು, ಕೊಲೆಗಡುಕರು, ರೇಪಿಸ್ಟ್‌ಗಳನ್ನು ಸಮರ್ಥಿಸುವುದೇ ತನ್ನ ಕರ್ತವ್ಯ ಎಂದು ಗೃಹ ಸಚಿವರು ತಿಳಿದುಕೊಂಡಂತಿದೆ. ಇಂತಹ ವಿಫಲ, ನಿಷ್ಕ್ರಿಯ ‘ಚೌಕಿದಾರ’ನಿಂದ ಪೊಲೀಸ್ ಇಲಾಖೆಯೇ ಸುರಕ್ಷಿತವಾಗಿ ಇರಲಾರದು. ಪಿಎಎಸ್‍ಐ ನೇಮಕಾತಿಗೆ ಬಿಜೆಪಿ ಸರ್ಕಾರ ಯಾವ ಆಧಾರದಲ್ಲಿ ಮರುಪರೀಕ್ಷೆ ನಡೆಸುವ ತೀರ್ಮಾನ ಕೈಗೊಂಡಿದೆ ಎನ್ನುವುದನ್ನು ಬೊಮ್ಮಾಯಿ ಅವರು ಸ್ಪಷ್ಟಪಡಿಸಬೇಕು. ಅಕ್ರಮ ನಡೆದಿರುವುದು ಸಿಐಡಿ ತನಿಖೆಯಿಂದ ಸಾಬೀತಾಗಿದೆಯೇ? ಹಾಗಿದ್ದರೆ ಆ ವರದಿ ಬಿಡುಗಡೆ ಮಾಡಿ. ಮರುಪರೀಕ್ಷೆಯ ನಿರ್ಧಾರ ಪ್ರಾಮಾಣಿಕ ಅಭ್ಯರ್ಥಿಗಳಿಗೆ ನ್ಯಾಯ ಕೊಡಿಸಲಿಕ್ಕಾಗಿಯೇ? ಇಲ್ಲವೇ ಹಗರಣವನ್ನು ಮುಚ್ಚಿಹಾಕಿ ದೊಡ್ಡ ತಲೆಗಳನ್ನು ಉಳಿಸಲಿಕ್ಕಾಗಿಯೇ? ಪಿಎಸ್‍ಐ ನೇಮಕಾತಿ ಹಗರಣದ ಸೂತ್ರಧಾರಿ ದಿವ್ಯಾ ಹಾಗರಗಿ ಬಂಧನವಾದ ತಕ್ಷಣ ಮರುಪರೀಕ್ಷೆಯ ನಿರ್ಧಾರದ ಹಿಂದಿನ ರಹಸ್ಯ ಏನು? ಆಕೆ ನೀಡಿರುವ ಹೇಳಿಕೆಯಲ್ಲಿ ಅಂತಹ ಸ್ಫೋಟಕ ಸಂಗತಿಗಳೇನಿದೆ?. ಇದನ್ನೂ ಓದಿ: ಶೀಘ್ರದಲ್ಲೇ ಪಿಎಸ್‍ಐ ಮರುಪರೀಕ್ಷೆ ದಿನಾಂಕ ಪ್ರಕಟ: ಆರಗ ಜ್ಞಾನೇಂದ್ರ

ಪಿಎಸ್‍ಐ ನೇಮಕಾತಿ ಹಗರಣವನ್ನು ನಮ್ಮ ಪಕ್ಷ ಬಯಲಿಗೆಳೆದಾಗ ಬಾಯಿಗೆ ಬಂದಂತೆ ತಲೆಗೊಬ್ಬರಂತೆ ಮಾತನಾಡಿದ್ದ ಬಿಜೆಪಿ ನಾಯಕರು ಈಗ ಯಾವ ಬಿಲದಲ್ಲಿ ಅಡಗಿದ್ದಾರೆ?. ರಾಜ್ಯ ಸರ್ಕಾರವೇ ಅಡಿಯಿಂದ ಮುಡಿವರೆಗೆ ಭ್ರಷ್ಟಗೊಂಡಿರುವಾಗ ಪಿಎಸ್‍ಐ ನೇಮಕಾತಿ ಹಗರಣದ ಸಿಐಡಿ ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಾರದು. ಹೈಕೋರ್ಟ್ ನ್ಯಾಯಾಧೀಶರ ಮೇಲುಸ್ತುವಾರಿಯ ತನಿಖೆಯೊಂದೇ ಪರಿಹಾರ. ಭ್ರಷ್ಟಾಚಾರ, ಅಪ್ರಾಮಾಣಿಕತೆ ಮತ್ತು ನಿಷ್ಕ್ರಿಯತೆಯನ್ನು ಪ್ರಶ್ನಿಸದೆ ಇದ್ದರೆ ಕೊನೆಗೆ ಈ ಪಿಡುಗಿಗೆ ಬಹುಸಂಖ್ಯೆಯಲ್ಲಿರುವ ಪ್ರಾಮಾಣಿಕರೇ ಕಷ್ಟ-ನಷ್ಟ ಅನುಭವಿಸಬೇಕಾಗುತ್ತದೆ ಎನ್ನುವುದಕ್ಕೆ ಪಿಎಸ್‍ಐ ನೇಮಕಾತಿ ಅಕ್ರಮ ಸಾಕ್ಷಿ.

Share This Article
Leave a Comment

Leave a Reply

Your email address will not be published. Required fields are marked *