ಕೊಪ್ಪಳ: ಪಕ್ಷದ ಕಾರ್ಯಕರ್ತರು ರೆಸಾರ್ಟಿನಲ್ಲಿ ತಂಗಿದ್ದ ವೇಳೆ ರಾತ್ರಿ ಸ್ವಲ್ಪ ಜಗಳ ನಡೆದಿದೆ ಎಂಬ ಮಾಹಿತಿ ಲಭಿಸಿದೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ರೆಸಾರ್ಟಿನಲ್ಲಿ ರಾತ್ರಿ ಇರಲಿಲ್ಲ. ಆದ್ದರಿಂದ ನನಗೆ ಗೊತ್ತಿಲ್ಲ. ಆದರೆ ರಾತ್ರಿ ಗಲಾಟೆ ಆಗಿರುವ ಬಗ್ಗೆ ಮಾಹಿತಿ ಬಂದಿದೆ. ಮಾಧ್ಯಮಗಳ ಮೂಲಕವೂ ಮಾಹಿತಿ ಬಂದಿದೆ. ಈಗ ಅಲ್ಲಿಗೆ ತೆರಳುತ್ತಿದ್ದು, ಯಾವ ಸಂದರ್ಭದಲ್ಲಿ ಏನಾಗಿದೆ ಎನ್ನುವುದು ಅಲ್ಲಿಗೆ ಹೋದ ನಂತರವೇ ಗೊತ್ತಾಗಲಿದೆ ಎಂದರು.
ಯಾವುದೇ ಖಚಿತ ಮಾಹಿತಿ ಇಲ್ಲದೇ ನಾನು ಈ ಬಗ್ಗೆ ಮಾತನಾಡುವುದು ಸರಿಯಲ್ಲ. ನೇರ ಅಲ್ಲಿಗೆ ತೆರಳುತ್ತಿದ್ದು, ಆನಂದ್ ಸಿಂಗ್, ಗಣೇಶ್, ಭೀಮಾನಾಯ್ಕ್ ನಡುವೆ ಗಲಾಟೆ ನಡೆದಿದೆ ಎಂದು ಮಾಧ್ಯಮಗಳಿಂದ ತಿಳಿದಿದೆ. ಗಲಾಟೆ ಆಗಿದ್ದರೆ ಯಾವ ಸಂದರ್ಭದಲ್ಲಿ ಆಗಿದೆ? ಯಾವ ಕಾರಣಕ್ಕೆ ಆಗಿದೆ ಎನ್ನುವುದನ್ನು ತಿಳಿದುಕೊಳ್ಳಬೇಕಿದೆ. ಈ ಬಗ್ಗೆ ಶಾಸಕರನ್ನು ಸಂಪರ್ಕ ಮಾಡಲು ಸಾಧ್ಯವಾಗಲಿಲ್ಲ. ಅಲ್ಲಿಗೆ ತೆರಳಿ ನಿಮಗೆ ಹೆಚ್ಚಿನ ಮಾಹಿತಿ ತಿಳಿಸುತ್ತೇನೆ ಎಂದರು. ಇದನ್ನು ಓದಿ: ಡಿಕೆಶಿಗೆ ಭಾರೀ ಮುಖಭಂಗ – ಶಾಸಕರನ್ನು ರಕ್ಷಿಸಲು ಸುಳ್ಳು ಹೇಳಿ ಭಾರೀ ಟೀಕೆಗೆ ಗುರಿಯಾದ್ರು ಡಿಕೆ ಬ್ರದರ್ಸ್!
ಇದೇ ವೇಳೆ ಸಿಎಂ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕೆಂದು 20 ಶಾಸಕರು ಬೇಡಿಕೆ ಇಟ್ಟಿದ್ದಾರೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಎಚ್‍ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾರೆ. ಈಗ ಯಾವುದೇ ಶಾಸಕರು ಸಿಎಂ ಆಗುವ ಬಗ್ಗೆ ಹೇಳಿಲ್ಲ. ಸಮ್ಮಿಶ್ರ ಸರ್ಕಾರ ಸುಗಮವಾಗಿ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದ್ದರು.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಹೇಗಾದ್ರೂ ಮಾಡಿ, ಸಿಎಂ ಆಗಬೇಕು ಅಂದುಕೊಂಡಿದ್ದಾರೆ. ಆದರೆ ಅದು ಸಾಧ್ಯವಾಗುವುದಿಲ್ಲ. ಪದೇ ಪದೇ ಯಡಿಯೂರಪ್ಪ, ಈಶ್ವರಪ್ಪ ಕೆಟ್ಟ ಪದ ಬಳಕೆ ಮಾಡುತ್ತಾರೆ. ಈಶ್ವರಪ್ಪನಿಗೆ ಒಳ್ಳೆಯ ಭಾಷೆಯೇ ಗೊತ್ತಿಲ್ಲ, ಅನಂತ್ ಕುಮಾರ್ ಹೆಗ್ಡೆ ಕೂಡ ಹಾಗೆಯೇ. ಅವರೇ ಮಕ್ಕಳ ಕಳ್ಳರು ಎಂದು ಹೇಳುತ್ತಾರೆ. ಆದರೆ ಮಾಧ್ಯಮಗಳು ಅವರನ್ನು ಪ್ರಶ್ನೆ ಮಾಡಲ್ಲ ಎಂದರು.
https://www.youtube.com/watch?v=9xgPiNXdmxU
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv