ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಪರಸ್ಪರರನ್ನು ಹಾಡಿ ಹೊಗಳಿಕೊಂಡ ಸಿದ್ದು-ಜಿಟಿಡಿ

Public TV
2 Min Read

ಮೈಸೂರು: 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಇಡೀ ರಾಜ್ಯದ ಗಮನ ಚಾಮುಂಡೇಶ್ವರಿ ಕ್ಷೇತ್ರದ ಕಡೆಗೆ ಕೇಂದ್ರೀಕೃತವಾಗಿತ್ತು. ಸ್ಪರ್ಧಿಗಳಾಗಿದ್ದ ಸಿದ್ದರಾಮಯ್ಯ ಹಾಗೂ ಜಿ.ಟಿ.ದೇವೇಗೌಡ ಈ ಕ್ಷೇತ್ರದ ಗೆಲುವಿಗಾಗಿ ಕಾದಾಡಿದ್ದರು. ಕೊನೆಗೂ ಜಿ.ಟಿ.ದೇವೇಗೌಡ ಗೆಲುವಿನ ನಗೆ ಬೀರಿದ್ದರು. ಆಗ ಪರಸ್ಪರ ಎದುರಾಳಿಗಳಾಗಿದ್ದ ಸಿದ್ದು ಮತ್ತು ಜಿಟಿಡಿ ಈಗ ಒಂದಾಗಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಪರಸ್ಪರರನ್ನು ಹಾಡಿ ಹೊಗಳಿದ್ದಾರೆ. ಆ ಮೂಲಕ ರಾಜಕೀಯ ವಲಯದಲ್ಲಿ ಬದಲಾವಣೆಯ ಸೂಚನೆ ನೀಡಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದ ಕೂರ್ಗಳ್ಳಿಯಲ್ಲಿ ಟ್ರಸ್ಟ್‌ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಈ ವೇಳೆ ಇಬ್ಬರೂ ನಾಯಕರಿಗೆ ಜೆಸಿಬಿಯಲ್ಲಿ ಹೂ ಮಳೆ ಸುರಿಸಿ ಅದ್ದೂರಿ ಸ್ವಾಗತ ಕೋರಲಾಯಿತು. ಕಾರ್ಯಕ್ರಮದಲ್ಲಿ ಜಿ.ಟಿ.ದೇವೇಗೌಡ ಅವರು ತಮ್ಮ ಭಾಷಣದುದ್ದಕ್ಕೂ ಸಿದ್ದರಾಮಯ್ಯರ ಗುಣಗಾನ ಮಾಡಿದರು. ಇದನ್ನೂ ಓದಿ: ಮುಂಬರುವ ಚುನಾವಣೆಗೆ ಪಕ್ಷ ಬಲಪಡಿವುದಕ್ಕೆ ಜನ ಸ್ವರಾಜ್ ಯಾತ್ರೆ: ಬಿ.ಸಿ ಪಾಟೀಲ್

ಹಾನಗಲ್‍ನಲ್ಲಿ ಕಾಂಗ್ರೆಸ್ ಒಗ್ಗಟ್ಟಾಗಿ ಹೋರಾಡಿ ಈ ರಾಜ್ಯಕ್ಕೆ ಒಂದು ಸಂದೇಶ ಕೊಟ್ಟಿದೆ. 1983 ರಿಂದ ನಿರಂತರವಾಗಿ ನಾನು – ಸಿದ್ದರಾಮಯ್ಯ ಜೊತೆಯಾಗಿ ಬೆಳೆದಿದ್ದೇವೆ. ಜೆಡಿಎಸ್‌ ಅನ್ನು ನೆಲದಿಂದ ಜೊತೆಯಾಗಿ ಕಟ್ಟಿದ್ದೇವೆ. ನಂತರದ ಘಟನಾವಳಿಗಳಿಂದ ಸಿದ್ದರಾಮಯ್ಯ ಜೆಡಿಎಸ್ ತೊರೆದರು. ಕಾಂಗ್ರೆಸ್‍ಗೆ ಹೋಗಿ ಸಿದ್ದರಾಮಯ್ಯ ಸಿಎಂ ಆದರು. ಸಿದ್ದರಾಮಯ್ಯ ಅವರು ಕೊಟ್ಟ ಅನ್ನಭಾಗ್ಯ ಬಹಳ ಮುಖ್ಯವಾದ ಯೋಜನೆ. ಅವರಿಗೆ ಹಸಿವಿನ ಕಷ್ಟ ಗೊತ್ತಿದೆ. ಸಿದ್ದರಾಮಯ್ಯ ಎಲ್ಲಾ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದು ಹೊಗಳಿದರು.

ಡಾ. ಎಚ್.ಸಿ.ಮಹದೇವಪ್ಪ ಎಂಬ ದಲಿತ ನಾಯಕನನ್ನು ದೊಡ್ಡದಾಗಿ ಬೆಳೆಸಿದ್ದು ಸಿದ್ದರಾಮಯ್ಯ. ಸಿದ್ದರಾಮಯ್ಯನನ್ನು ವೀರಶೈವ ವಿರೋಧಿ ಎಂಬ ಪಟ್ಟ ಕಟ್ಟಿದ್ದರು. ಹಲವು ವೀರಶೈವ ಮುಖಂಡರನ್ನು ಮೈಸೂರು ಭಾಗದಲ್ಲಿ ಬೆಳೆಸಿದ್ದು ಸಿದ್ದರಾಮಯ್ಯ. ದಲಿತರು, ಒಕ್ಕಲಿಗರು, ನಾಯಕರು, ವೀರಶೈವರು ಎಲ್ಲಾ ಸಮುದಾಯವನ್ನು ಸಿದ್ದರಾಮಯ್ಯ ಪ್ರೀತಿಸುತ್ತಾರೆ. ಸಿದ್ದರಾಮಯ್ಯ-ಜಿ.ಟಿ.ದೇವೇಗೌಡ ಯಾಕೆ ಬೇರೆಯಾದರು ಎಂಬ ಕೊರಗು ಜಿಲ್ಲೆಯ ಜನರಿಗೆ ಇತ್ತು. ನಾನು ಯಾವತ್ತೂ ಸಿದ್ದರಾಮಯ್ಯ ಅವರ ವಿರುದ್ಧ ಹಿಂದೆ ಮುಂದೆ ಯಾವುದೇ ಮಾತನಾಡಿಲ್ಲ. ಸಿದ್ದರಾಮಯ್ಯ ಸೋಲಲಿ, ಗೆಲ್ಲಲಿ ಚಾಮುಂಡೇಶ್ವರಿ ಕ್ಷೇತ್ರದ ಜನರು ಅವರನ್ನು ಪ್ರೀತಿಸುತ್ತಾರೆ. ಇಂತಹ ನಾಯಕನನ್ನು ಕೊಟ್ಟ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಅಭಿನಂದನೆ ಎಂದು ಹೇಳಿದರು. ಇದನ್ನೂ ಓದಿ: ಕೊಳ್ಳೇಗಾಲ ಪಟ್ಟಣದ ರಸ್ತೆಗೆ ಪುನೀತ್ ರಾಜ್‍ಕುಮಾರ್ ಹೆಸರು ನಾಮಕರಣ

ನಂತರ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ನನಗೆ ರಾಜಕೀಯವಾಗಿ ಶಕ್ತಿ ಕೊಟ್ಟಿದ್ದು ಚಾಮುಂಡೇಶ್ವರಿ ಕ್ಷೇತ್ರ. ಚುನಾವಣೆಯಲ್ಲಿ ಸೋಲು – ಗೆಲವು ಇದ್ದದ್ದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆದ್ದಿದ್ದೇನೆ, ಸೋತಿದ್ದೇನೆ. ಚುನಾವಣೆ ಆದ ಮೇಲೆ ಬೇಸರವಾಗಿತ್ತು. ಆದ್ದರಿಂದ ಕ್ಷೇತ್ರದ ಕಡೆ ಬಂದಿರಲಿಲ್ಲ. ರಾಜಕೀಯದಲ್ಲಿ ಮುನಿಸು ಶಾಶ್ವತವಾಗಿ ಇರುವುದಿಲ್ಲ. ಕೆರೆ ಜೊತೆ ಮುನಿಸಿಕೊಂಡರೆ ನಮಗೇನೆ ತೊಂದರೆ ಎಂದರು.

ನಾನು ಜಿಟಿಡಿ ಪರಸ್ಪರ ಸ್ಪರ್ಧೆ ಮಾಡಿದ್ದೆವು. ಈ ಗಿರಾಕಿ ಚುನಾವಣೆಯಲ್ಲಿ ನನ್ನನ್ನೇ ಸೋಲಿಸಿದ್ದಾನೆ. ಹೀಗಾಗಿ, ನಾವಿಬ್ಬರು ಒಂದೇ ವೇದಿಕೆಗೆ ಬಂದಿರುವುದಕ್ಕೆ ಮಾಧ್ಯಮದವರಿಗೆ ಕೂತುಹಲ. ಜಿಟಿಡಿ ತಮ್ಮ ಭಾಷಣದಲ್ಲಿ ಹೇಳಿದ್ದು ಸತ್ಯ. ಜಿಟಿಡಿ ಕಾಂಗ್ರೆಸ್‌ಗೆ ಬರುತ್ತಾನೆ ಎಂಬ ಊಹಾಪೋಹ ಹರಡಿದೆ. ಅವರಿಗೆ ಕಾಂಗ್ರೆಸ್‍ಗೆ ಬರಲು ಮನಸ್ಸು ಇರುವುದು ನಿಜ. ಎಚ್‌.ಡಿ.ದೇವೇಗೌಡರು, ಎಚ್‌.ಡಿ.ಕುಮಾರಸ್ವಾಮಿ ಜಿಟಿಡಿಯನ್ನು ಅಲ್ಲೇ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್‍ಗೆ ಬರುವುದು ಬಿಡುವುದು ಜಿಟಿಡಿಗೆ ಬಿಟ್ಟಿದ್ದು. ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಯಾರೇ ಪಕ್ಷಕ್ಕೆ ಬಂದರೂ ಸ್ವಾಗತ. ಜಿಟಿಡಿ ಬಂದರೂ ಸ್ವಾಗತ. ಜಿಟಿಡಿ ನನ್ನ ರಾಜಕೀಯ ಎದುರಾಳಿ ಹೊರತು ವೈರಿ ಅಲ್ಲ. ನನಗೂ ಜಿಟಿಡಿಗೂ ವೈಯಕ್ತಿಕ ದ್ವೇಷ ಇಲ್ಲ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *