ಡಿಕೆಶಿ ಸಿಎಂ ಕನಸಿಗೆ ಎಳ್ಳು ನೀರು ಬಿಡಲು ಸಿದ್ದರಾಮಯ್ಯ ಸಿದ್ಧ: ಬಿಜೆಪಿ ವ್ಯಂಗ್ಯ

Public TV
3 Min Read

ಬೆಂಗಳೂರು: ಡಿ.ಕೆ.ಶಿವಕುಮಾರ್ ಅವರೇ, ಸಿದ್ದರಾಮಯ್ಯ ಮತ್ತೆ ತಮ್ಮ ವರಸೆ ಶುರು ಮಾಡಿದ್ದಾರೆ. ನೀವು ಎಷ್ಟೇ ತಂತ್ರಗಾರಿಕೆ ನಡೆಸಿದರೂ ಪ್ರಯೋಜನವಿಲ್ಲ. ನಿಮ್ಮ ಮುಖ್ಯಮಂತ್ರಿ ಕನಸಿಗೆ ಎಳ್ಳು ನೀರು ಬಿಡಲು ಸಿದ್ದರಾಮಯ್ಯ ಸಿದ್ಧರಾಗಿದ್ದಾರೆ. ನಿಮ್ಮದೀಗ ‘ಬಗಲ್ ಮೆ ದುಷ್ಮನ್ ಪರಿಸ್ಥಿತಿ’ ಎಂದು ರಾಜ್ಯ ಬಿಜೆಪಿ ವ್ಯಂಗ್ಯವಾಡಿದೆ.

ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದರೆ ಹಲವು ಉಚಿತ ಪಡಿತರ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡಲಾಗುವುದು ಎಂಬ ಸಿದ್ದರಾಮಯ್ಯ ಆಶ್ವಾಸನೆಗೆ, ಸರಣಿ ಟ್ವೀಟ್ ಮೂಲಕ ಬಿಜೆಪಿ ಟಾಂಗ್ ನೀಡಿದೆ. “ಡಿಕೆಶಿ ಕಾಸು-ಸಿದ್ದರಾಮಯ್ಯ ಬಾಸು” ಎಂಬಂತಾಗಿದೆ ಕರ್ನಾಟಕ ಕಾಂಗ್ರೆಸ್ ಪರಿಸ್ಥಿತಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಏನೇನು ಮಾಡುತ್ತೇವೆ ಎಂದು ಆಶ್ವಾಸನೆ ನೀಡುತ್ತಲೇ ಸಾಗುತ್ತಿರುವ ಸಿದ್ದರಾಮಯ್ಯ, ಪರೋಕ್ಷವಾಗಿ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಡಿಕೆಶಿಯವರದ್ದು ಬರೇ ಕನಸೇ? ಎಂದು ಬಿಜೆಪಿ ಕುಟುಕಿದೆ.

siddaramaiah

ಟ್ವೀಟ್‍ನಲ್ಲೇನಿದೆ..?
ಬಿಜೆಪಿ ಜಾತಿವಾರು ಸಮಾವೇಶಗಳನ್ನು ನಡೆಸಿ ವೋಟುಗಳಿಸಲು ತಂತ್ರ ರೂಪಿಸಿದೆ ಎಂಬ ಸಿದ್ದರಾಮಯ್ಯ ಟೀಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಅಲ್ಪಸಂಖ್ಯಾತರಿಗೆ 3 ಸಾವಿರ ಕೋಟಿ, ಕಸೂತಿಗೆ 100 ಕೋಟಿ. ಅದಕ್ಕಿಷ್ಟು, ಇದಕ್ಕಿಷ್ಟು, ಸಂಪುಟದಲ್ಲಿ ಇಂತಿಂಥವರೇ ಇರುತ್ತಾರೆ. ಈ ರೀತಿ ಸಿದ್ದರಾಮಯ್ಯ ಸ್ವಯಂ ಘೋಷಣೆ ಮಾಡುತ್ತಲೇ ಇದ್ದಾರೆ. ಅಂದರೆ ತಾವೇ ಮುಂದಿನ ಸಿಎಂ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಹಾಗಾದರೆ ನಿಮ್ಮ ಕಥೆಯೇನು ಡಿಕೆಶಿ ಎಂದು ಪ್ರಶ್ನಿಸಿದೆ.

ಯಡಿಯೂರಪ್ಪನವರು ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಮಠಾಧೀಶರನ್ನು ಮನೆಗೆ ಕರೆಸಿ ದುಡ್ಡು ಹಂಚಿದರು ಎನ್ನುವ ಮೂಲಕ ಸಿದ್ದರಾಮಯ್ಯ ಮಠಾಧೀಶರಿಗೆ ಅವಮಾನ ಮಾಡಿದ್ದಾರೆ. ಒಂದು ಸಮುದಾಯವನ್ನು ತಮ್ಮ ರಾಜಕೀಯ ಹಿತಾಸಕ್ತಿಗಾಗಿ ನಿಂದಿಸುವುದು ಹಾಗೂ ಒಡೆಯುವುದು ಸಿದ್ದರಾಮಯ್ಯ ಅವರಿಗೆ ಚಾಳಿಯಾಗಿಬಿಟ್ಟಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ. ಇದನ್ನೂ ಓದಿ: ಸಮ್ಮಿಶ್ರ ಸರ್ಕಾರ ಪತನಗೊಂಡ ರಹಸ್ಯ ಬಿಚ್ಚಿಟ್ಟ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ

ಜಾತಿ ರಹಿತ, ವರ್ಗ ರಹಿತ ಸಮಾಜ ಸ್ಥಾಪನೆಯೇ ಬಿಜೆಪಿಯ ಉದ್ದೇಶ. ಆದರೆ ಹಾಲಿನಂಥ ಸಮಾಜವನ್ನು ಒಡೆಯುವುದು ಜಾತಿವಾದಿ ಸಿದ್ದರಾಮಯ್ಯ ಅವರ ಗುರಿ. ಗಡಿಗೆಯಲ್ಲಿ ತುಂಬಿರುವ ಹಾಲನ್ನು ಕೆಡಿಸುವುದಕ್ಕೆ ಒಂದು ಹನಿ ಹುಳಿ ಸಾಕಲ್ಲವೇ ? ಹಾಗೆಯೇ ಸಮಾಜ ವಿಭಜನೆಗೆ ಸಿದ್ದರಾಮಯ್ಯ ಅವರ ದ್ವೇಷದ ನುಡಿ ಸಾಕು ಎಂದು ಟೀಕಿಸಿದೆ.

bjp - congress

ರಾಜಕೀಯ ಏಳಿಗೆಗಾಗಿ ಸಿದ್ದರಾಮಯ್ಯ ಹಿಂದೂ ಧರ್ಮ ಒಡೆಯುವ ಪ್ರಯತ್ನ ನಡೆಸಿದರು. ಲಿಂಗಾಯತ ಪ್ರತ್ಯೇಕ ಧರ್ಮದ ಅಸ್ತ್ರ ಪ್ರಯೋಗಿಸಿ ಎಂ.ಬಿ.ಪಾಟೀಲರನ್ನು ಬಲಿಪಶುವಾಗಿಸಿದರು. ಸಿದ್ದರಾಮಯ್ಯನವರೇ, ವೀರಶೈವ- ಲಿಂಗಾಯಿತ ಸಮುದಾಯ ಬಿಜೆಪಿ ಜೊತೆ ನಿಲ್ಲುವುದನ್ನು ತಡೆಯುವುದಕ್ಕಾಗಿ ಧರ್ಮ ವಿಭಜನೆಗೆ ಮುಂದಾಗಿದ್ದಲ್ಲವೇ?

ವೀರಶೈವ- ಲಿಂಗಾಯತ ಸಮುದಾಯದ ಸ್ವಾಮೀಜಿಗಳ ಬಗ್ಗೆ ಸಿದ್ದರಾಮಯ್ಯ ಎಂದಾದರೂ ಗೌರವ ವ್ಯಕ್ತಪಡಿಸಿದ ಉದಾಹರಣೆ ಇದೆಯೇ? ಧರ್ಮ ವಿಭಜನೆಯ ಪ್ರಯತ್ನ ಮಾಡುವಾಗ “ಲಿಂಗಾಯತ ಸ್ವಾಮೀಜಿಗಳು ನೀಡಿದ ಮನವಿ” ಪ್ರಕಾರ ಪ್ರತ್ಯೇಕ ಧರ್ಮದ ಪ್ರಸ್ತಾಪವನ್ನು ಕೇಂದ್ರಕ್ಕೆ ಕಳುಹಿಸಿದ್ದೆ ಎಂದು ಜಾರಿಕೊಂಡಿದ್ದು ನೆನಪಿಲ್ಲವೇ ಎಂದು ಪ್ರಶ್ನಿಸಿದೆ.

ಬೊಮ್ಮಾಯಿ ಜಾತಿಯವರು ಕಂಬಳಿ ನೇಯ್ತಾರಾ? ಕಾಗೇರಿ ಜಾತಿಯವರು ಕುರಿ ಕಾಯ್ತಾರಾ? ಎಂದು ಪ್ರಶ್ನಿಸುವ ಮೂಲಕ ಸಮಾಜವನ್ನು ಯಾವ ದಿಕ್ಕಿನತ್ತ ಕೊಂಡೊಯ್ಯುತ್ತಿದ್ದೀರಿ ಸಿದ್ದರಾಮಯ್ಯ? ಹಾಲಿನಂಥ ಸಮಾಜದಲ್ಲಿ ಜಾತಿ ಹುಳಿ ಹಿಂಡಿ ಒಡೆಯುವುದೇ ನಿಮ್ಮ ರಾಜಕೀಯ ಧರ್ಮ. ಸಮಾಜ ಒಟ್ಟಾಗಿದ್ದರೆ ಈ ಮಜವಾದಿಗೆ ಸಂಕಟವಾಗುತ್ತದೆ. ಸಿದ್ದರಾಮಯ್ಯ ಅವರೇ, ವೀರಶೈವ – ಲಿಂಗಾಯತ ಸಮುದಾಯದ ಮೇಲೆ ನಿಮಗೇಕೆ ದ್ವೇಷ? ಹಿಂದೆ ಧರ್ಮ ಒಡೆಯಲು ಹೋಗಿ ಆ ಸಮುದಾಯದ ಭಾವನೆ ಕೆರಳಿಸಿದಿರಿ. ಈಗ ಬೊಮ್ಮಾಯಿ ಜಾತಿಯವರು ಕಂಬಳಿ ನೇಯುತ್ತಾರಾ ಎಂದು ಪ್ರಶ್ನಿಸುವ ಮೂಲಕ ಕಾಯಕ ಧರ್ಮವನ್ನು ಅಪಮಾನ ಮಾಡುತ್ತಿದ್ದೀರಿ. ಇದನ್ನೂ ಓದಿ: ರಾಜ್ಯದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೇ ಸಿದ್ದರಾಮಯ್ಯ: ಬಿಜೆಪಿ ವಾಗ್ದಾಳಿ

ಸಮಾಜವಾದದ ಹೆಸರಿನಲ್ಲಿ ಜಾತಿವಾದ ನಡೆಸುತ್ತಿರುವ ಸಿದ್ದರಾಮಯ್ಯ ಅವರಿಗೆ ಈಗ ರಾಜ್ಯದ ಯಾವ ಕ್ಷೇತ್ರದಲ್ಲೂ ನೆಲೆಯಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯ ಹೊತ್ತಿಗೆ ಚಾಮರಾಜಪೇಟೆಗೆ ವಲಸೆ ಹೋಗಲು ಸಿದ್ದತೆ ನಡೆಸಿರುವ ಸಿದ್ದರಾಮಯ್ಯ ಈಗ ಒಂದು ವರ್ಗದ ಓಲೈಕೆಗಾಗಿ ಹಿಂದೂ ಧರ್ಮದ ಅವಹೇಳನಕ್ಕೆ ಮುಂದಾಗಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದೆ.

Share This Article
Leave a Comment

Leave a Reply

Your email address will not be published. Required fields are marked *