ಮಂಡ್ಯ: ಸಿದ್ದರಾಮಯ್ಯ (Siddaramaiah) ಲಾಟರಿ ಹೊಡೆದು ಮುಖ್ಯಮಂತ್ರಿ ಆಗಿದ್ದಾರೆ ಎಂಬ ಹೇಳಿಕೆಯನ್ನು ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ (BR Patil) ಸಮರ್ಥಿಸಿಕೊಂಡಿದ್ದಾರೆ.
ಕೆಆರ್ ಪೇಟೆಯಲ್ಲಿ ಮಾತನಾಡಿದ ಅವರು, ಜೆಡಿಎಸ್‌ನಿಂದ (JDS) ಬಿಟ್ಟು ಬಂದ 8 ಶಾಸಕರಲ್ಲಿ ನಾನು ಒಬ್ಬ. ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ (Congress) ಸೇರಿದ್ದೇವೆ. ಈ ಪೈಕಿ ಕೆಲವರು ಮಂತ್ರಿಗಳಾಗಿದ್ದಾರೆ. ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದು ಮುಖ್ಯಮಂತ್ರಿ ಆಗಿದ್ದಾರೆ ಎಂದರು.
ರಾಜ್ಯದಲ್ಲಿ ಅಪಸ್ವರ ಎದ್ದಿದ್ದಕ್ಕೆ ಸುರ್ಜೇವಾಲಾ ಬಂದಿದ್ದರು. ಶಾಸಕರ ನೋವು ಏನಿದೆ ಎಂದು ತಿಳಿದುಕೊಳ್ಳಲು ನನ್ನನ್ನು ಕರೆಸಿದ್ದರು. ನಾನು 45 ನಿಮಿಷ ಮಾತನಾಡಿ ಎಲ್ಲಾ ವಿವರ ನೀಡಿದ್ದೇನೆ. ನನ್ನ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿದ್ದಾರೆ. ಮುಂದೆ ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತಾರೆ ಎನ್ನುವುದು ಅವರಿಗೆ ಬಿಟ್ಟದ್ದು ಎಂದರು. ಇದನ್ನೂ ಓದಿ: ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ, ಸಿಎಂ ಆಗ್ಬಿಟ್ಟ – ಬಿ.ಆರ್ ಪಾಟೀಲ್
ನಾನು ಸಿದ್ದರಾಮಯ್ಯ ರೈತ ಚಳುವಳಿ ಮೂಲಕ ಬಂದಿದ್ದೇವೆ. ನಂಜುಂಡಸ್ವಾಮಿ ಅವರು ಹುರಿದುಂಬಿಸಲಿಲ್ಲ ಎಂದರೆ ಸಿದ್ದರಾಮಯ್ಯ ರಾಜಕೀಯಕ್ಕೆ ಬರುತ್ತಿರಲಿಲ್ಲ. ಕೆಲವರಿಗೆ ಗಾಡ್ ಇದ್ದರೆ ಕೆಲವರಿಗೆ ಗಾಡ್‌ಫಾದರ್ ಇದ್ದಾರೆ. ನನಗೆ ಗಾಡ್ ಇಲ್ಲ, ಗಾಡ್‌ಫಾದರ್ ಇಲ್ಲ, ಸಿದ್ದಾಂತವೇ ನನ್ನ ಗಾಡ್‌ಫಾದರ್ ಎಂದು ವಂಗ್ಯವಾಡಿದರು.
ಸಿಎಂ ಬದಲಾವಣೆ ಬಗ್ಗೆ ಮಾತನಾಡುವ ಶಕ್ತಿ ನನಗೆ ಇಲ್ಲ. ಸಿಎಂ ಬದಲಾವಣೆ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಡಿಕೆ ಶಿವಕುಮಾರ್ ಸಿಎಂ ಆಗುವುದು ನನಗೆ ಗೊತ್ತಿಲ್ಲ ಎಂದು ಹೇಳಿದರು.
ನಾಯಕತ್ವದ ವಿಚಾರದ ಬಗ್ಗೆ ಸುರ್ಜೇವಾಲಾ ಮಾತಾಡಿಲ್ಲ. ಸಿದ್ದರಾಮಯ್ಯ ಮೇಲೆ ಕೆಲ ವಿಚಾರ ಅದರಲ್ಲೂ ಅನುದಾನ ನೀಡುವ ವಿಚಾರದಲ್ಲಿ ನನಗೆ ಬೇಸರ ಇದೆ.ಇದನ್ನು ಹೈಕಮಾಂಡ್ ಬಳಿಯೂ ಹೇಳಿಕೊಂಡಿದ್ದೇವೆ ಎಂದರು.