‘ಹಳ್ಳಿಹಕ್ಕಿ’ ಪುಸ್ತಕದ ಬಗ್ಗೆ ಸಿದ್ದರಾಮಯ್ಯ ವ್ಯಂಗ್ಯ

Public TV
1 Min Read

ಮೈಸೂರು: ಆಪರೇಷನ್ ಕಮಲದ ಬಗ್ಗೆ ಎಚ್.ವಿಶ್ವನಾಥ್ ಪುಸ್ತಕ ಬರೆಯುವ ವಿಚಾರದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ವಿಶ್ವನಾಥ್ ಅವರು ಪುಸ್ತಕ ಬರೆಯಲಿ ಬಿಡಿ, ದೊಡ್ಡ ಬರಹಗಾರರು. ಅವರು ಪುಸ್ತಕ ಬರೆದರೆ ನಾವು ಓದೋಣ ಎಂದು ವ್ಯಂಗ್ಯವಾಡಿದರು.

ಪುಣ್ಯಾತ್ಮ ಪಕ್ಷ ಬಿಟ್ಟು ಹೋಗಿ ಇವನೇನು ಪುಸ್ತಕ ಬರೆಯೋದು. ನೀನು ಶುದ್ಧವಾಗಿದ್ದರೆ ಇನ್ನೋಬ್ಬರ ಬಗ್ಗೆ ಆರೋಪ ಮಾಡಬಹುದು. ಇವರೇ ಸರಿಯಿಲ್ಲ ಅಂದರೆ ಏನ್ ಬರೆಯೋದು ಎಂದು ಪ್ರಶ್ನಿಸಿದರು. ಅಲ್ಲದೇ ಬರೆಯೋವಾಗ ಯಾರ್ಯಾರು ಎಷ್ಟು ದುಡ್ಡು ತಗೊಂಡಿದ್ದೀರಿ ಅಂತಾನು ಎಂದು ಬರೆಯಲು ಹೇಳಿ ಎಂದರು.

ಇದೇ ವೇಳೆ ಸಂಸದ ಅನಂತ್‍ಕುಮಾರ್ ಹೆಗ್ಡೆ ಅವರು ಮಹಾತ್ಮ ಗಾಂಧೀಜಿ ಅವರ ಕುರಿತಂತೆ ನೀಡಿರುವ ವಿವಾದಾತ್ಮಕ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, ಗೂಡ್ಸೆ, ಸಾರ್ವಕರ್ ಪೂಜೆ ಮಾಡುವವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ. ಕ್ರೂರತ್ವ ಮನೋಭಾವದವರಿಗೆ ಸತ್ಯ, ಅಹಿಂಸೆ ಅರ್ಥ ಆಗುವುದಿಲ್ಲ. ಅನಂತ್ ಕುಮಾರ್ ಹೆಗ್ಡೆಗೆ ಎಷ್ಟು ವರ್ಷ? ಇವನು ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿದ್ನಾ? ಸ್ವಾತಂತ್ರ್ಯ ಹೋರಾಟದ ಬಗ್ಗೆ ಇವನಿಗೇನು ಗೊತ್ತು? ನಾನು ಆಗಸ್ಟ್ 3, 1947ರಂದು ಹುಟ್ಟಿದ್ದೇನೆ. ನಾನು ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿದ್ದೇನೆ. ಹೆಗಡೆ ಸ್ವಾತಂತ್ರ್ಯ ಹೋರಾಟದಲ್ಲಿ ಬಲಿದಾನ ಆದವರ ಹೆಸರು ಹೇಳಲಿ ನೋಡೋಣ ಎಂದು ಸವಾಲು ಎಸೆದರು.

ಮಹಾತ್ಮ ಗಾಂಧಿ ಎಷ್ಟು ಜೈಲಿನಲ್ಲಿ ಇದ್ರು ಗೊತ್ತಾ? ಗಾಂಧಿ ಕೊಂದಿದ್ದು ದೇಶದ್ರೋಹಾನ, ದೇಶ ಭಕ್ತಿನಾ? ವಲ್ಲಭಾಯಿ ಪಟೇಲ್ ಪ್ರತಿಮೆ ಮಾಡಿದ್ದು ಯಾರು? ಅದೇ ಪಟೇಲರು ಆರ್.ಎಸ್.ಎಸ್ ಬ್ಯಾನ್ ಮಾಡಿದ್ದರು. ಈ ಬಗ್ಗೆ ಇವನಿಗೆ ಗೊತ್ತಾ? ಜಗತ್ತಿನಲ್ಲಿ ರಕ್ತಪಾತ ಇಲ್ಲದೆ ಸ್ವಾತಂತ್ರ್ಯ ಪಡೆದ ದೇಶ ಭಾರತ ದೇಶ. ಇದರ ಇತಿಹಾಸದ ಅನಂತ್ ಕುಮಾರ್ ಹೆಗ್ಡೆಗೆ ಏನ್ ಗೊತ್ತು? ಇತಿಹಾಸ ಗೊತ್ತಿಲ್ಲ ಎಂದರೇ ಹಿರಿಯರಿಂದ ಕೇಳಿ ತಿಳಿದುಕೊಳ್ಳಲಿ ಎಂದು ತಿರುಗೇಟು ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *