ಬೊಮ್ಮಾಯಿ ಹೇಳಿದ್ದೆ ವೇದ ವಾಕ್ಯನಾ? ಬೊಮ್ಮಾಯಿಗಿಂತ ಹಿರಿಯ ನಾನು: ಸಿದ್ದರಾಮಯ್ಯ

Public TV
2 Min Read

ಬೆಂಗಳೂರು: ಬೊಮ್ಮಾಯಿ ಹೇಳಿದ್ದೆ ವೇದ ವಾಕ್ಯನಾ? ಬೊಮ್ಮಾಯಿಗಿಂತ ನನಗೆ ಅನುಭವ ಹೆಚ್ಚಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ವಿರೋಧ ಪಕ್ಷಕ್ಕೆ ನೈತಿಕತೆ ಇಲ್ಲ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗೆ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೊಮ್ಮಾಯಿ ಏನು ವೇದಾಂತಿನಾ? ಬೊಮ್ಮಾಯಿಗಿಂತ ಹಿರಿಯ ನಾನು ನನಗೆ ಬೊಮ್ಮಾಯಿ ಅವರಿಗಿಂತ ಹೆಚ್ಚು ಹೋರಾಟದ ಅನುಭವವಿದೆ. ಬೊಮ್ಮಾಯಿ ಮಾತು ವೇದ ವಾಕ್ಯನಾ? ಸ್ವಾತಂತ್ರ್ಯ ಹೋರಾಟದ ತ್ಯಾಗ ಬಲಿದಾನ ನಮಗೆ ಗೊತ್ತಿದೆ. ಅವರಿಗೇನು ಗೊತ್ತಿದೆ ಇದೆಲ್ಲಾ. ಹೀಗಾಗಿ ರಾಷ್ಟ್ರ ಧ್ವಜಕ್ಕೆ ಮಾಡಿದ ಅವಮಾನವನ್ನು ಸಹಿಸಿಕೊಳ್ಳಿ ಎಂದು ಅವರು ಹೇಳಿದರೆ ನಾವು ಸಹಿಸಿಕೊಳ್ಳಲು ಸಿದ್ಧರಿಲ್ಲ. ಸದನದ ಒಳಗೆ ಮತ್ತು ಹೊರಗೆ ಹೋರಾಟ ಮಾಡುತ್ತೇವೆ ಎಂದಿದ್ದಾರೆ.

ಹಿಜಬ್ ವಿವಾದ: ಸಿಂಧೂರ ಇಡುವುದರಿಂದ ಯಾರಿಗೂ ತೊಂದರೆ ಇಲ್ಲ. ಹಾಗೆಯೇ ಹಿಜಬ್ ಧರಿಸುವುದರಿಂದಲೂ ಯಾರಿಗೂ ತೊಂದರೆ ಇಲ್ಲ. ಹಿಂದಿನಿಂದ ನಡೆದುಕೊಂಡು ಬಂದಿರುವ ನಂಬಿಕೆ, ಆಚರಣೆ, ಪರಂಪರೆಗೆ ತಕ್ಕಂತೆ ನಡೆದುಕೊಳ್ಳುವುದು ಯಾರಿಗೂ ತೊಂದರೆ ಇಲ್ಲ. ಯಾವುದೇ ಸಂಸ್ಕೃತಿಯನ್ನು ಬಲವಂತದಿಂದ ತಡೆಯುವುದು ತಪ್ಪು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹಿಜಬ್-ಕೇಸರಿ ವಿವಾದ ಬೆನ್ನಲ್ಲೇ ಶುರುವಾಯ್ತು ಸಿಂಧೂರ ಚಳುವಳಿ

ಹಿಜಬನ್ನು ಹಿಂದಿನಿಂದಲೂ ಧರಿಸಿಕೊಂಡು ಬರುತ್ತಿದ್ದರು. ಕೇಸರಿ ಶಾಲು ಹಿಂದಿನಿಂದ ಯಾರೂ ಹಾಕುತ್ತಿರಲಿಲ್ಲ. ಹಿಜಬ್ ಅನ್ನು ವಿರೋಧಿಸುವುದಕ್ಕೋಸ್ಕರವೇ ಕೇಸರಿ ಶಾಲು ಹಾಕಿಸುವುದು ಅತ್ಯಂತ ಸಣ್ಣತನ. ಇದು ಕೇಸರಿ ಶಾಲಿಗೂ ಮಾಡುವ ಅವಮಾನ. ಕೇಸರಿ ಶಾಲನ್ನು ಅಮಾನವೀಯ, ಅನಾಗರಿಕ ಕಾರಣಗಳಿಗೆ ಬಳಸಬಾರದು. ಬಿಜೆಪಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರೆ, ಅವರು ನಮ್ಮ ರಾಷ್ಟ್ರ ಧ್ವಜವನ್ನು ಹಿಡಿದು ಬ್ರಿಟಿಷರ ವಿರುದ್ಧ ಹೋರಾಡಿದ್ದರೆ, ಅವರಿಗೆ ನಮ್ಮ ರಾಷ್ಟ್ರ ಧ್ವಜ ಮತ್ತು ರಾಷ್ಟ್ರೀಯ ಲಾಂಛನಗಳ ಬಗ್ಗೆ ನಿಜವಾದ ಗೌರವ-ಭಕ್ತಿ ಇರುತ್ತಿತ್ತು ಎಂದಿದ್ದಾರೆ.

ಇವರು ಸ್ವಾತಂತ್ರ್ಯ ಹೋರಾಟದಲ್ಲೂ ಭಾಗವಹಿಸಲಿಲ್ಲ. ರಾಷ್ಟ್ರ ಧ್ವಜವನ್ನೂ ಬ್ರಿಟಿಷರ ವಿರುದ್ಧ ಹಿಡಿಯಲಿಲ್ಲ. ಹೀಗಾಗಿ ಇವರ ಮನಸ್ಥಿತಿಯೇ ರಾಷ್ಟ್ರ ಧ್ವಜದ ವಿರುದ್ಧ ಇದೆ. ರಾಷ್ಟ್ರಧ್ವಜ ಮತ್ತು ಈಶ್ವರಪ್ಪ ಅವರ ಸಚಿವ ಸ್ಥಾನ ಇವೆರಡರಲ್ಲಿ ನಿಮಗೆ ಯಾವುದು ಮುಖ್ಯ ಎನ್ನುವ ಪ್ರಶ್ನೆಯನ್ನು ನಾವು ಬಿಜೆಪಿ ಮುಂದಿಟ್ಟೆವು. ಬಿಜೆಪಿ ರಾಷ್ಟ್ರ ಧ್ವಜಕ್ಕಿಂತ ಸಚಿವ ಸ್ಥಾನವೇ ಮುಖ್ಯ ಎಂದು ಹಠ ಹಿಡಿದು ಕುಳಿತಿದೆ. ರಾಷ್ಟ್ರೀಯ ಲಾಂಛನಗಳಿಗೆ ಅವಮಾನ ಮಾಡುವುದು ರಾಷ್ಟ್ರದ್ರೋಹ ಮತ್ತು ಸ್ಪಷ್ಟ ಕಾನೂನಿನ ಉಲ್ಲಂಘನೆ. ನಾವು ರಾಷ್ಟ್ರ ಧ್ವಜಕ್ಕಾದರೂ ಅವಮಾನ ಮಡುತ್ತೇವೆ, ಕಾನೂನನ್ನೂ ಉಲ್ಲಂಘಿಸುತ್ತೇವೆ. ಯಾರೂ ಪ್ರಶ್ನಿಸಬಾರದು ಎನ್ನುವ ಬಿಜೆಪಿ ಧೋರಣೆಯನ್ನು ನಾವು ಪ್ರತಿಭಟಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಿಜಬ್ ಆಯ್ಕೆಯಲ್ಲ, ನಾವು ಪ್ರೀತಿಸುವ ದೇವರು ವಿಧಿಸಿರುವ ಶಿಷ್ಟಾಚಾರ: ಝೈರಾ ವಾಸಿಮ್

ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡುವುದು ಬಿಜೆಪಿಯವರಿಗೆ ಸಣ್ಣ ವಿಷಯ ಇರಬಹುದು. ಆದರೆ ನಮಗೆ ಇದು ಬಹಳ ಗಂಭೀರವಾದ ಸಂಗತಿ. ರಾಷ್ಟ್ರ ಧ್ವಜ ಹಿಡಿದು ಲಕ್ಷಾಂತರ ಮಂದಿ ಪ್ರಾಣ ತ್ಯಾಗ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟದ ಮೌಲ್ಯ ಬಿಜೆಪಿಯವರಿಗೆ ಗೊತ್ತಿಲ್ಲವಾದ್ದರಿಂದ ಅವರಿಗೆ ಹುತಾತ್ಮರ ಬೆಲೆ ಕೂಡ ಗೊತ್ತಿಲ್ಲ. ಹುತಾತ್ಮರು ಹಿಡಿದ ರಾಷ್ಟ್ರ ಧ್ವಜದ ಬೆಲೆಯೂ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂಬರಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚರ್ಚಿಸುವ ಉದ್ದೇಶದಿಂದ ಹೈಕಮಾಂಡ್ ನನ್ನನ್ನು ಕರೆದಿದೆ. ಅದಕ್ಕೆ ದೆಹಲಿಗೆ ಹೋಗುತ್ತಿದ್ದೇನೆ. ಎಐಸಿಸಿ ವರಿಷ್ಠರಾದ ರಾಹುಲ್ ಗಾಂಧಿಯವರ ಸಾರಥ್ಯದಲ್ಲಿ ಸಭೆ ನಡೆಯಲಿದೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *