ಕೋವಿಡ್ ಹಗರಣ – ಎಸ್‍ಐಟಿ ಮುಖ್ಯಸ್ಥರ ನೇಮಕ ಪರಮೇಶ್ವರ್ ಹೆಗಲಿಗೆ

Public TV
2 Min Read

– ಸಿಎಂ ಸಭೆಯಲ್ಲಿ ಮಹತ್ವದ ನಿರ್ಧಾರ

ಬೆಂಗಳೂರು: ಹಿರಿಯ ಸಚಿವರ ಜೊತೆ ಸಿಎಂ ಸಿದ್ದರಾಮಯ್ಯ ಕಾವೇರಿ ನಿವಾಸದಲ್ಲಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಮಹತ್ವದ ವಿಚಾರಗಳನ್ನು ಚರ್ಚಿಸಿದ್ದಾರೆ.

ಸಭೆಯಲ್ಲಿ ರೇಷನ್ ಕಾರ್ಡ್ ಗೊಂದಲ ನಿವಾರಣೆ ಮಾಡುವಂತೆ ಸಚಿವ ಮುನಿಯಪ್ಪಗೆ ಸಿಎಂ ಸೂಚನೆ ನೀಡಿದ್ದಾರೆ. ಬಿಪಿಎಲ್ ಕಾರ್ಡ್ ರದ್ದಾಗಿದೆ ಎಂದು ವಿಪಕ್ಷಗಳು ವಿವಾದ ಮಾಡುತ್ತಿವೆ. ಇದಕ್ಕೆ ಅಂಕಿಅಂಶಗಳ ಸಮೇತ ಉತ್ತರ ಕೊಡಬೇಕು ಎಂದು ಸಿಎಂ ಸೂಚಿಸಿದ್ದಾರೆ.

ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಯಾವುದು ರದ್ದಾಗಿಲ್ಲ. ಆದಾಯ ತೆರಿಗೆ ಪಾವತಿ ಮಾಡೋರು ಮತ್ತು ಸರ್ಕಾರಿ ನೌಕರರಿಗೆ ಮಾತ್ರ ಕಡಿತ ಮಾಡಿದ್ದೇವೆ ಎಂದು ಸಿಎಂಗೆ ಸಚಿವ ಮುನಿಯಪ್ಪ ಮಾಹಿತಿ ನೀಡಿದ್ದಾರೆ.

ಕೋವಿಡ್ ಅಕ್ರಮ ಎಸ್‍ಐಟಿ ರಚನೆ ಬಗ್ಗೆ ಯಾರ ನೇತೃತ್ವದಲ್ಲಿ ತನಿಖೆ ಮಾಡಿಸಬೇಕು ಎಂಬುದು ಸಭೆಯಲ್ಲಿ ಚರ್ಚೆಯಾಗಿದೆ. ಎಸ್‍ಐಟಿ ಮುಖ್ಯಸ್ಥರ ನೇಮಕವನ್ನ ಪರಮೇಶ್ವರ್‌ಗೆ ಬಿಡಲಾಗಿದೆ. ಕೋವಿಡ್ ಹಗರಣವನ್ನು ದೊಡ್ಡದಾಗಿ ಬಿಂಬಿಸಬೇಕು. ಯಾವುದೇ ಕಾರಣಕ್ಕೂ ಇದನ್ನ ಕೈ ಬಿಡೋದು ಬೇಡ. ಬಿಜೆಪಿ ವಿರುದ್ಧ ಕೋವಿಡ್ ಹಗರಣದ ವಿರುದ್ಧ ಮತ್ತಷ್ಟು ತೀವ್ರವಾಗಿ ಮಾತನಾಡಲು ಸಿಎಂ ಸಭೆಯಲ್ಲಿ ಸಚಿವರಿಗೆ ಸೂಚನೆ ನೀಡಿದ್ದಾರೆ.

ವಕ್ಪ್ ವಿಚಾರದಲ್ಲಿ ಬಿಜೆಪಿ ರಾಜ್ಯಾದ್ಯಂತ ಜನಜಾಗೃತಿ ಅಭಿಯಾನ ಹಿನ್ನಲೆ ಸರ್ಕಾರದಿಂದ ಕೌಂಟರ್‌ಗೆ ಪ್ಲಾನ್ ರಚಿಸಲಾಗಿದೆ. ಈ ಬಗ್ಗೆ ಸಚಿವರಿಗೆ ಸೂಚನೆ ನೀಡಲಾಗಿದೆ. 40% ಕಮಿಷನ್ ಆರೋಪಕ್ಕೆ ಲೋಕಾಯುಕ್ತ ಕ್ಲೀನ್ ಚಿಟ್ ವಿಚಾರವಾಗಿ, ಮುಂದೆ ಏನು ಮಾಡಬೇಕು ಎಂದು ಸಭೆಯಲ್ಲಿ ಚರ್ಚೆಯಾಗಿದೆ.

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಬೇಕಿರುವ ವಿಧೇಯಕಗಳ ಬಗ್ಗೆಯೂ ಚರ್ಚೆಯಾಗಿದೆ. ಹಲವು ವಿಧೇಯಕಗಳನ್ನ ಮಂಡನೆ ಮಾಡಲು ಸರ್ಕಾರ ಸಿದ್ಧತೆ ಮಾಡಿದೆ.

ನಬಾರ್ಡ್ ಅನುದಾನ ಕಡಿತ ಮಾಡಿರೋ ಕೇಂದ್ರ ಸರ್ಕಾರದ ವಿರುದ್ಧ ಸಚಿವರು ಮಾತಾಡುವಂತೆ ಸಿಎಂ ಸೂಚನೆ ನೀಡಿದ್ದಾರೆ. ಈ ಬಗ್ಗೆ ಮಂಗಳವಾರ ಸಚಿವ ರಾಜಣ್ಣ, ಚೆಲುವರಾಯಸ್ವಾಮಿ ಸುದ್ದಿಗೋಷ್ಟಿ ನಡೆಸಲಿದ್ದಾರೆ.

Share This Article