ಮೈಸೂರು: ಬಾಯಿ ಬೊಂಬಾಯಿ, ಅಭಿವೃದ್ಧಿ ಶೂನ್ಯ ಆಗಿದ್ದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಚಾಮುಂಡೇಶ್ವರಿಯ ಜನ ಬಾದಾಮಿಗೆ ಕಳುಹಿಸಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ತಿರುಗೇಟು ಕೊಟ್ಟಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತಮ್ಮ ಬಗ್ಗೆ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿದರು. ಬಾಯಿ ಬೊಂಬಾಯಿ, ಅಭಿವೃದ್ಧಿ ಶೂನ್ಯ ಯಾರು ಎಂಬುದು ಜನರಿಗೆ ಗೊತ್ತಾಗಿದೆ. ಆದ್ದರಿಂದಲೇ ಜನ ಸಿದ್ದರಾಮಯ್ಯ ಅವರನ್ನು ಚಾಮುಂಡೇಶ್ವರಿಯಿಂದ ಬಾದಾಮಿಗೆ ಕಳುಹಿಸಿದ್ದಾರೆ. ಎಲ್ಲಿದೆ ಮೈತ್ರಿ? ರಾಜ್ಯದಲ್ಲಿ ಮೈತ್ರಿ ಎಂಬುದೇ ಇಲ್ಲ. ಮಂಡ್ಯದಲ್ಲಿ ಸುಮಲತಾ ಅವರನ್ನು ಅಭ್ಯರ್ಥಿ ಮಾಡಿರುವುದು, ತುಮಕೂರಿನಲ್ಲಿ ಮುದ್ದಹನುಮೇಗೌಡರನ್ನು ಎತ್ತಿಕಟ್ಟಿರುವುದು, ಹಾಸನದಲ್ಲಿ ವಿರೋಧ ಮಾಡುತ್ತಿರುವ ಸಿದ್ದರಾಮಯ್ಯ ಅವರ ಒಳಸಂಚು. ಇದೆಲ್ಲವೂ ಜೆಡಿಎಸ್‍ನವರಿಗೆ ಗೊತ್ತಾಗುತ್ತಿದೆ ಎಂದು ಕಿಡಿಕಾರಿದರು.
ಇಂದು ಬೆಳಗ್ಗೆ 5.30ರಿಂದ ಕೃಷ್ಣರಾಜೇಂದ್ರ ಕ್ಷೇತ್ರದಿಂದ ಪಾದಯಾತ್ರೆ ಮೂಲಕ ಪ್ರಚಾರ ಆರಂಭಿಸಿದ್ದೇವೆ. ಈಗ ರ್ಯಾಲಿಯನ್ನು ಮಾಡುತ್ತಿದ್ದೇವೆ. ಮೋದಿ ಅವರು ಮೈಸೂರಿಗೆ ಬರುವವರೆಗೂ ಜನರಲ್ಲಿ ಗೊಂದಲವಿತ್ತು. ಆದ್ರೆ ಈಗ ಅದು ದೂರವಾಗಿದೆ. ಎಲ್ಲೆಡೆ ಮೋದಿ ಅವರಿಗೆ ಹಾಗೂ ಬಿಜೆಪಿಗೆ ಜನರು ಬೆಂಬಲ ನೀಡುತ್ತಿದ್ದಾರೆ ಅಂತ ಪ್ರತಾಪ್ ಸಿಂಹ ತಿಳಿಸಿದರು.