ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ವಾತಾವರಣ ನಿರ್ಮಾಣವಾಗುತ್ತಿದೆ: ಸಿದ್ದರಾಮಯ್ಯ

Public TV
3 Min Read

– ಈಶ್ವರಪ್ಪಗೆ ರಾಷ್ಟ್ರ ಧ್ವಜ ಅಂದ್ರೆ ಗೊತ್ತಿಲ್ಲ
– ಬಿಜೆಪಿ ಭಿನ್ನಬಿಪ್ರಾಯಗಳಿದೆಯೆಂದು ತೋರಿಸುತ್ತಿದೆ, ನಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ

ನವದೆಹಲಿ: ರಾಹುಲ್ ಗಾಂಧಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇನ್ನಿತರ ನಾಯಕರೊಂದಿಗೆ ಸಭೆ ಮಾಡಿದ್ದಾರೆ.ನಂತರ ದೆಹಲಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆಶಿ, ಸಿದ್ದರಾಮಯ್ಯ ಅವರು ಕೆಲವು ಚುನಾವಣಾ ತಂತ್ರಗಳ ಕುರಿತಾಗಿ ಪ್ರತಿಕ್ರಿಯಿಸಿದ್ದಾರೆ.

ಚುನಾವಣೆಗೆ ಮುಂದೆ ಒಂದು ವರ್ಷ ಸಮಯ ಇದೆ. ಜನರ ಸಮಸ್ಯೆಗಳನ್ನು ಆಧರಿಸಿ ಮುಂದೆ ಹೋರಾಟ ಮಾಡಲು ಹೈಕಮಾಂಡ್ ಸೂಚಿಸಿದೆ. ಜನರ ನಡುವೆ ಇರುವಂತೆ ರಾಹುಲ್ ಗಾಂಧಿ ಕರೆ ಕೊಟ್ಟಿದ್ದಾರೆ. ಇದನ್ನೂ ಓದಿ: ಹಿಜಬ್‌ ಹೆಸರಲ್ಲಿ ಧ್ರುವೀಕರಣ ಮಾಡುವ ಬಿಜೆಪಿ ಬಲೆಗೆ ಬೀಳಬೇಡಿ: ರಾಹುಲ್ ಗಾಂಧಿ

ಡಿ.ಕೆ ಶಿವಕುಮಾರ್ ಮಾತನಾಡಿ, ಮೇಕೆದಾಟು ಪಾದಯಾತ್ರೆ ಪುನಾರಂಭ ಮಾಡುತ್ತಿದ್ದೇವೆ. ಫೆ.27 ರಿಂದ ನೀರಿಗಾಗಿ ನಡಿಗೆ ಆರಂಭ ಮಾಡುತ್ತಿದ್ದೇವೆ. ಪಾದಯಾತ್ರೆ ನಿಲ್ಲಿಸಿದ ಸ್ಥಳದಿಂದ ಪಾದಯಾತ್ರೆ ಮತ್ತೆ ಆರಂಭವಾಗಲಿದೆ. ಬಹಳಷ್ಟು ಸಂಘಟನೆಗಳು ಹೋರಾಟಕ್ಕೆ ಬೆಂಬಲ ಘೋಷಿಸುವುದಾಗಿ ಹೇಳಿದ್ದವು. ಎಲ್ಲ ಕಲಾವಿದರಿಗೆ ಮನವಿ ಮಾಡುತ್ತಿದ್ದೇನೆ. ಕುಡಿಯುವ ನೀರಿನ ಹೋರಾಟದಲ್ಲಿ ಭಾಗಿಯಾಗಬೇಕು ಎಂದು ಕಾಂಗ್ರೆಸ್ ಪರವಾಗಿ ಮನವಿ ಮಾಡುತ್ತೇನೆ. ರಾಜ್ಯದ ಹಿತಕ್ಕೆ ಎಲ್ಲರೂ ಒಂದಾಗಬೇಕು ಎಂದಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಸಿಲುಕಿದ್ದಾರೆ 10 ಮಂದಿ ಕರ್ನಾಟಕ ವಿದ್ಯಾರ್ಥಿಗಳು!

ಸಿದ್ದರಾಮಯ್ಯ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ವಾತಾವರಣ ನಿರ್ಮಾಣವಾಗುತ್ತಿದೆ. ಆಪರೇಷನ್ ಮೂಲಕ ಅಧಿಕಾರಕ್ಕೆ ಬಂದರೂ ಬಿಜೆಪಿ ಯಾವ ಅಭಿವೃದ್ಧಿ ಕೆಲಸವನ್ನು ಮಾಡಿಲ್ಲ. ರಾಜ್ಯದ ಜನರು ಶಾಪ ಹಾಕುತ್ತಾ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಕೊರೊನಾವನ್ನು ಸರಿಯಾಗಿ ನಿಭಾಯಿಸದ ಬಿಜೆಪಿ ಸರ್ಕಾರ ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಿದೆ. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ರಾಜ್ಯದ ನಾಯಕರ ಜೊತೆಗೆ ಸಭೆ ನಡೆಸಿದ್ದು, ರಾಜ್ಯದ ಪರಿಸ್ಥಿತಿಗಳ ಬಗ್ಗೆ ಚರ್ಚೆ ಮಾಡಿದರು. ಚುನಾವಣೆ ತಂತ್ರಗಳನ್ನು ಮಾಡುವ ಬಗ್ಗೆ ಸಮಾಲೋಚನೆ ನಡೆಸಿದರು. ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಹೈಕಮಾಂಡ್ ಬೆಂಬಲ ನೀಡುವುದಾಗಿ ಹೇಳಿದ್ದಾರೆ ಎಂದಿದ್ದಾರೆ.

ರಾಹುಲ್ ಗಾಂಧಿ ಅವರಿಗೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದ್ದಾರೆ ಎನ್ನುವ ಸಂದೇಶ ಸಿಕ್ಕಿದೆ. ನಾವು ಒಗ್ಗಟ್ಟಾಗಿ ಹೋರಾಡುತ್ತಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಬಿಜೆಪಿ ಭಿನ್ನಬಿಪ್ರಾಯಗಳಿದೆ ಎಂದು ತೋರಿಸುತ್ತಿದೆ. ನಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ಹೀಗಾಗಿ ಸಣ್ಣಪುಟ್ಟ ವ್ಯತ್ಯಾಸಗಳಿರುತ್ತದೆ. ಬಿಜೆಪಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲ. ಈಶ್ವರಪ್ಪ ರಾಷ್ಟ್ರ ಧ್ವಜದ ಬಗ್ಗೆ ಮಾತನಾಡಿದ್ರೆ ಅದನ್ನು ಬಿಜೆಪಿ ನಾಯಕರು ಬೆಂಬಲಿಸುತ್ತಾರೆ. ಆದರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ತಪ್ಪು ಎಂದು ಹೇಳಿದ್ದಾರೆ. ಇಷ್ಟೆಲ್ಲ ಆದರೂ ಸಿಎಂ, ರಾಜ್ಯಧ್ಯಕ್ಷರು ಈಶ್ವರಪ್ಪ ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧವಾಗಿ ಕಿಡಿಕಾರಿದ್ದಾರೆ.

ಈಶ್ವರಪ್ಪ, ಶವ ಇಟ್ಟುಕೊಂಡು ರಾಜಕೀಯ ಮಾಡಿದ್ದಾರೆ. 144 ಸೆಕ್ಷನ್ ಜಾರಿ ಇದ್ದರೂ ಶವಯಾತ್ರೆಯಲ್ಲಿ ಭಾಗಿಯಾಗಿ ಕಾನೂನು ಉಲ್ಲಂಘಿಸಿದ್ದಾರೆ. ಅದಕ್ಕೂ ಕ್ರಮ ತೆಗೆದುಕೊಳ್ಳಬೇಕಿತ್ತು. ಕ್ರಮ ಕೈಗೊಳ್ಳದ ಹಿನ್ನೆಲೆ ರಾಜ್ಯಪಾಲರನ್ನು ಭೇಟಿ ಮಾಡಿ ಈಶ್ವರಪ್ಪ ವಜಾ ಮಾಡಲು ಮನವಿ ಮಾಡಿದ್ದೇವೆ. ಈಶ್ವರಪ್ಪಗೆ ರಾಷ್ಟ್ರ ಧ್ವಜ ಎಂದರೆ ಗೊತ್ತಿಲ್ಲ. ಅವರು ಸ್ವತಂತ್ರ ಹೋರಾಟದಲ್ಲಿ ಭಾಗಿ ಯಾಗಿಲ್ಲ. ಈಶ್ವರಪ್ಪಗೆ ರಾಷ್ಟ್ರದ್ವಜ ಯಾವಾಗ ಹುಟ್ಟಿದೆಯೆಂದು ಗೊತ್ತಿಲ್ಲ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *