ನೀವಿಬ್ಬರೂ ಒಂದಾಗಿ ನಮ್ಮ ಕ್ಷೇತ್ರಗಳಿಗೆ ಬಂದ್ರೆ ಚುನಾವಣೆ ಗೆಲ್ಲಬಹುದು: ಡಿಕೆಶಿ, ಸಿದ್ದರಾಮಯ್ಯಗೆ ಕೈ ಶಾಸಕರ ಮನವಿ

Public TV
2 Min Read

ಬೆಂಗಳೂರು: ಕಾಂಗ್ರೆಸ್ ಅಹೋರಾತ್ರಿ ಧರಣಿಯಲ್ಲಿ ಕಾಂಗ್ರೆಸ್ ನಾಯಕರ ನಡುವೆ ಚಿಂತನ ಮಂಥನ ನಡೆದಿದೆ. ರಾತ್ರಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಶಾಸಕರಿಗೆ ಹಲವು ಸಲಹೆಗಳನ್ನು ನೀಡಿದ್ದಾರೆ. ಈ ವೇಳೆ ಶಾಸಕರು ಕೂಡಾ ಇಬ್ಬರೂ ನಾಯಕರಿಗೆ ನೀವಿಬ್ಬರೂ ಜೊತೆಯಾಗಿದ್ದರೆ ಚುನಾವಣೆ ಗೆಲ್ಲಬಹುದು ಅಂತಾ ಹೇಳಿರುವ ಮಾಹಿತಿ ಪಬ್ಲಿಕ್‌ ಟಿವಿಗೆ ಲಭ್ಯವಾಗಿದೆ.

ಮತದಾರನ ಮನೆ ಬಾಗಿಲಿಗೆ ಹೋಗಿ.. ನಿನ್ನೆ ರಾತ್ರಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌, ಚುನಾವಣೆಗೆ ಇನ್ನೊಂದು ವರ್ಷ ಮಾತ್ರ ಬಾಕಿಯಿದೆ. ಚುನಾವಣೆಗೆ ಇಂದಿನಿಂದಲೇ ಸಿದ್ಧತೆ ಶುರು ಮಾಡಿ. ಸರ್ಕಾರದ ಅನುದಾನ ತಾರತಮ್ಯ, ಈಶ್ವರಪ್ಪ ಕಾಂಟ್ರೋವರ್ಸಿ ಹೇಳಿಕೆ, ಕೋವಿಡ್ ಸಂದರ್ಭದಲ್ಲಿ ಸರ್ಕಾರ ನಡೆದುಕೊಂಡಿದ್ದನ್ನು ಜನರ ಗಮನಕ್ಕೆ ತನ್ನಿ. ಜನರು ನಿಮ್ಮ ಬಳಿ ಬರುವ ಸಮಯ ಮುಗಿದಿದೆ. ನೀವೇ ಜನರ ಬಳಿ ಹೋಗಬೇಕು. ನಮ್ಮ ಐದು ವರ್ಷಗಳ ಕಾಲ ಆಡಳಿತವನ್ನು ಜನರ ಗಮನಕ್ಕೆ ತನ್ನಿ. ಕ್ಷೇತ್ರ ಬಿಡಬೇಡಿ ಇನ್ನೊಂದು ವರ್ಷ ಕ್ಷೇತ್ರದಲ್ಲಿ ಸಂಚಾರ ಮಾಡಿ. ಮತದಾರನ ಮನೆ ಬಾಗಿಲಿಗೆ ನೀವು ಹೋಗಿ ಎಂದು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಸಮವಸ್ತ್ರ ಜಾರಿ ಸಿ.ಡಿ.ಸಿ ನಿರ್ಧಾರ ಅಂದ್ರು ಎಜಿ- ಸೋಮವಾರ ಹೈಕೋರ್ಟ್‍ಗೆ ಮಧ್ಯಂತರ ಅರ್ಜಿ

ನಾವು ಚುನಾವಣೆ ಗೆಲ್ಲಬಹುದು, ಆದ್ರೆ…!: ನಾಯಕರ ಮಾತುಗಳನ್ನು ಆಲಿಸಿದ ಕಾಂಗ್ರೆಸ್‌ ಶಾಸಕರು ಕೂಡಾ, ನಿಮ್ಮ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಿ, ಒಗ್ಗಟ್ಟಾಗಿ ಹೋಗಿ ಎಂದು ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ಸಲಹೆ ನೀಡಿದ್ದಾರೆ. 2023ರ ಚುನಾವಣೆ ಗೆಲ್ಲಲು ಹಲವು ಅಸ್ತ್ರಗಳು ನಮಗಿವೆ. ಸರ್ಕಾರದ ವೈಫಲ್ಯ, ಯಡಿಯೂರಪ್ಪ ಅನ್ಯಾಯ ಮಾಡಿದ್ದು, ಕೊರೊನಾ ಬೃಹತ್ ಭ್ರಷ್ಟಾಚಾರ ಈ ಆಸ್ತ್ರಗಳ ಜತೆಗೆ ನೀವಿಬ್ಬರು ಒಂದಾಗಿ ನಮ್ಮ ಕ್ಷೇತ್ರಗಳಿಗೆ ಬಂದ್ರೆ ಚುನಾವಣೆ ಗೆಲ್ಲಬಹುದು. ಆದ್ರೆ ನೀವಿಬ್ಬರು ಒಂದಾಗಿ ಹೋಗ್ತಿಲ್ಲ. ಇದು ಹೀಗೆಯೇ ಮುಂದುವರಿದರೆ ನಾವು ಗೆಲ್ಲೋದು ಕಷ್ಟ. ನೀವು ಇಬ್ಬರು ಒಂದಾಗಿ ಮತ್ತೆ ನಾವು ವಿಧಾನ ಸಭೆ ಬರುವ ರೀತಿ ಮಾಡಿ ಎಂದು ಶಾಸಕರು ಉಭಯ ನಾಯಕರಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿಗೆ ಶರ್ಟ್ ಬಿಚ್ಚಿಕೊಡಲು ಮುಂದಾದ ಕಾಫಿನಾಡಿನ ಸರ್ಕಲ್ ಇನ್ಸ್‌ಪೆಕ್ಟರ್

ಭಿನ್ನಾಭಿಪ್ರಾಯ ಮಾಧ್ಯಮ ಸೃಷ್ಟಿ!: ಶಾಸಕರ ಮಾತುಗಳನ್ನು ಕೇಳಿದ ಬಳಿಕ ಸಿದ್ದರಾಮಯ್ಯ, ಸರ್ಕಾರದ ವೈಫಲ್ಯಗಳಿಗಿಂತಲೂ ನಮ್ಮ ಇಬ್ಬರ ನಡುವಿನ ಭಿನ್ನಾಭಿಪ್ರಾಯಗಳೇ ಹೆಚ್ಚು ಸುದ್ದಿ ಆಗುತ್ತಿದೆ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾವು ಒಂದಾಗಿ ಹೋಗ್ತಿದ್ದೇವೆ. ಎಲ್ಲವೂ ಮಾಧ್ಯಮಗಳ ಸೃಷ್ಟಿ. ಪಕ್ಷ ಅಧಿಕಾರಕ್ಕೆ ತರುವುದು ನಮ್ಮ ಗುರಿ ಎಂದು ಶಾಸಕರಿಗೆ ಮನವರಿಕೆ ಮಾಡಿದ್ದಾರೆ.

ಬಳಿಕ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಕೆ ಶಿವಕುಮಾರ್‌, ನನಗೆ ಯಾವುದೇ ವೈಯಕ್ತಿಕ ಲಾಭ ಮಾಡಿಕೊಳ್ಳುವ ಉದ್ದೇಶ ಇಲ್ಲ. ಯಾರೋ ಬೆಂಬಲಿಗರು ಮಾತನಾಡಿದ್ರೆ ಅದನ್ನ ಸುದ್ದಿ ಮಾಡ್ತಿದ್ದಾರೆ. ಪಕ್ಷ ಅಧಿಕಾರಕ್ಕೆ ತರುವುದೇ ನಮ್ಮ ಗುರಿ. ಪಂಚರಾಜ್ಯಗಳ ಚುನಾವಣೆ ಬಳಿಕ ರಾಜ್ಯದ ಚಿತ್ರಣ ಬದಲಾಗುತ್ತೆ. ಎಚ್ಚೆತ್ತುಕೊಂಡು ಕೆಲಸ ಮಾಡಿ ಎಂದು ಶಾಸಕರಿಗೆ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್‌ ಟಿವಿಗೆ ಲಭ್ಯವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *