5 ದಿನಗಳ ಬಳಿಕ ಆಸ್ಪತ್ರೆಯಿಂದ ಹುಲಿಯಾ ಡಿಸ್ಚಾರ್ಜ್

Public TV
2 Min Read

– ಕಾರ್ಯಕರ್ತರಿಂದ ಘೋಷಣೆ
– ಐ ಯಮ್ ಟೋಟಲೀ ಆಲ್ ರೈಟ್ ಅಂದ್ರು ಸಿದ್ದು

ಬೆಂಗಳೂರು: 5 ದಿನಗಳ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಲ್ಲೇಶ್ವರಂ ಖಾಸಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಸದ್ಯ ಸಿದ್ದರಾಮಯ್ಯಗೆ 1 ವಾರ ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ಸೂಚನೆ ನೀಡಿದ್ದಾರೆ. 5 ದಿನಗಳ ಬಳಿಕ ಆಸ್ಪತ್ರೆಯಿಂದ ಸಿದ್ದರಾಮಯ್ಯ ಡಿಸ್ಚಾರ್ಜ್ ಆಗಿದ್ದಾರೆ. ಮಲ್ಲೇಶ್ವರಂ ಖಾಸಗಿ ಆಸ್ಪತ್ರೆಯಿಂದ ಸಿದ್ದರಾಮಯ್ಯ ಅವರು ನಿವಾಸಕ್ಕೆ ತೆರಳಿದ್ದಾರೆ. ಸಿದ್ದರಾಮಯ್ಯ ಅವರು ಆಸ್ಪತ್ರೆಯಿಂದ ತೆರಳುವ ವೇಳೆ ‘ಹೌದು ಹುಲಿಯಾ’ ಎಂದು ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ಸಿದ್ದರಾಮಯ್ಯ ಅವರಿಗೆ ಜೈಕಾರ ಹಾಕಿದ ಪ್ರಸಂಗ ನಡೆಯಿತು.

ಡಿಸಾರ್ಜ್ ಬಳಿಕ ಸುದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ, ರಕ್ತನಾಳದಲ್ಲಿ ಬ್ಲಾಕ್ ಆಗಿತ್ತು, ವೈದ್ಯರು ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆ ಮಾಡಿದ್ದಾರೆ. ವೈದ್ಯರು ಚೆನ್ನಾಗಿ ನೋಡಿಕೊಂಡಿದ್ದಾರೆ, ಎಲ್ಲರಿಗೂ ಧನ್ಯವಾದ. ನಾನು ಈಗ ನಾರ್ಮಲ್ ಆಗಿದ್ದೇನೆ. ನನ್ನ ಅಭಿಮಾನಿಗಳು, ಕಾರ್ಯಕರ್ತರಿಗೆ ಋಣಿಯಾಗಿದ್ದೇನೆ ಎಂದು ಕೃತಜ್ಞತೆ ತಿಳಿಸಿದರು.

ಒಂದು ವಾರ ವಿಶ್ರಾಂತಿಗೆ ವೈದ್ಯರು ಸಲಹೆ ನೀಡಿದ್ದಾರೆ. ವೈದ್ಯರ ಸಲಹೆಯಂತೆ ಒಂದು ವಾರ ವಿಶ್ರಾಂತಿ ಪಡೆಯುತ್ತೇನೆ. ಬಳಿಕ ರಾಜ್ಯ ರಾಜಕಾರಣದ ಬಗ್ಗೆ ಗಮನ ಕೊಡುತ್ತೇನೆ. ಈಗ ಯಾವುದೇ ರಾಜಕಾರಣದ ಬಗ್ಗೆ ಮಾತನಾಡಲ್ಲ. ನಾನು ಇವತ್ತು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದೇನೆ. ಡಾ. ರಮೇಶ್, ಡಾ. ನಾರಾಯಣಸ್ವಾಮಿಗೆ ಧನ್ಯವಾದ ಸಲ್ಲಿಸುತ್ತೇನೆ. 2000ರ ಆಗಸ್ಟ್ ನಲ್ಲಿ ಎರಡು ರಕ್ತನಾಳಗಳು ಬ್ಲಾಕ್ ಆಗಿತ್ತು. ದೆಹಲಿ ಎಸ್ಕಾರ್ಟ್ ಆಸ್ಪತ್ರೆಯಲ್ಲಿ ಸ್ಟಂಟ್ ಹಾಕಿದ್ದರು. ಈಗ ‘ಐ ಯಮ್ ಟೋಟಲೀ ಆಲ್ ರೈಟ್’. ನಾನು ಸಂಪೂರ್ಣ ಹೆಲ್ದಿ ಪರ್ಸನ್. ಮೊದಲಿನ ರೀತಿಯೇ ಸಂಪೂರ್ಣ ಕೆಲಸ ಮಾಡಬಹುದು ಎಂದರು.

ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಶಾಶ್ವತ ಮಿತ್ರರಲ್ಲ. ಪಕ್ಷಾತೀತವಾಗಿ ಎಲ್ಲರೂ ಬಂದು ನನ್ನ ಆರೋಗ್ಯ ವಿಚಾರಿಸಿದರು. ಅವರೆಲ್ಲರಿಗೂ ಕೂಡ ನಾನು ಧನ್ಯವಾದ ಹೇಳ್ತೇನೆ. ರಾಜಕೀಯಕ್ಕಿಂತ ಮನುಷ್ಯತ್ವ ಮುಖ್ಯ ಅಲ್ವಾ ಅದಕ್ಕೆ ಎಂದು ತಮ್ಮ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಬಂದಿದ್ದ ನಾಯಕರಿಗೆ ಸಿದ್ದರಾಮಯ್ಯ ಅವರು ಧನ್ಯವಾದ ತಿಳಿಸಿದರು.

ಬುಧವಾರ ಬೆಳಗ್ಗೆ 6:30 ಸುಮಾರಿಗೆ ಸಿದ್ದರಾಮಯ್ಯಗೆ ರಕ್ತದೊತ್ತಡ ಜಾಸ್ತಿಯಾಗಿದ್ದು, ಸ್ವಲ್ಪ ಪ್ರಮಾಣದಲ್ಲಿ ಎದೆನೋವು ಕೂಡ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಸಂಬಂಧಿಕರು ಅವರನ್ನು ನಗರದ ಮಲ್ಲೇಶ್ವರಂನಲ್ಲಿರುವ ವೇಗಸ್ ಆಸ್ಪತ್ರೆಗೆ ದಾಖಲಿಸಿದ್ದು, ಇಂದಿನ ವರೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಉಪಚುನಾವಣೆಯ ಕಾಂಗ್ರೆಸ್ ನೇತೃತ್ವ ವಹಿಸಿದ್ದ ಸಿದ್ದರಾಮಯ್ಯ, 15 ಕ್ಷೇತ್ರಗಳಲ್ಲಿ 2 ಕ್ಷೇತ್ರದಲ್ಲಿ ಮಾತ್ರ ಪಕ್ಷವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದರು. ಉಪಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋತಿದ್ದಕ್ಕೆ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ತಮ್ಮ ಸಿಎಲ್‍ಪಿ ನಾಯಕನ ಸ್ಥಾನಕ್ಕೆ ಸೋಮವಾರ ರಾಜೀನಾಮೆ ನೀಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *