ಬಾಗಲಕೋಟೆ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುತ್ತೆ, ಆಗ ನಾನು ಸಿಎಂ ಆಗುತ್ತೇನೆ ಎಂದು ಹೇಳಿದ್ದೆ. ಅದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಪರಿಷತ್ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಚಾರ ಸಂಬಂಧ ಬಾದಾಮಿಗೆ ಆಗಮಿಸಿ ಮಾತನಾಡಿದ ಅವರು, ಬಿಎಸ್‍ವೈ ಸಿಎಂ ಆಗುತ್ತೇನೆಂದು ಹಗಲುಗನಸು ಕಾಣುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಪತನವಾಗಲ್ಲ, 5 ವರ್ಷ ಪೂರೈಸುತ್ತೆ ಎಂದರು.
ಬಾದಾಮಿ ಅಭಿವೃದ್ಧಿ, ರೈತರ ಬಗ್ಗೆ ಕಾಳಜಿ ಇಲ್ಲ ಎಂದು ತನ್ನ ಬಗ್ಗೆ ಬಂದ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಶ್ರೀರಾಮುಲುಗೆ ಭಾಷೆ, ಸಂಸ್ಕೃತಿ ಹಾಗೂ ಅಭಿವೃದ್ಧಿ ಎಂದರೆ ಏನು ಗೊತ್ತಿಲ್ಲ. ಅವರು ಎಲ್ಲೆಲ್ಲಿ ಗೆದ್ದಿದ್ದಾರೋ ಮೂರುಕಾಸಿನ ಅಭಿವೃದ್ಧಿ ಏನು ಮಾಡಿದ್ದಾರೆ ಎಂದು ಗೊತ್ತಿದೆ. ಬಳ್ಳಾರಿ ಹಾಗೂ ಮೊಳಕಾಲ್ಮೂರು ಕ್ಷೇತ್ರದಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ಪ್ರಶ್ನಿಸಿ ತಿರುಗೇಟು ನೀಡಿದರು.
ಅಭಿವೃದ್ಧಿ ಏನೇ ಇದ್ದರೂ ಕಾಂಗ್ರೆಸ್‍ನಿಂದ ಮಾತ್ರ, ಶಾಸಕರು ಹಾಗೂ ಅಭಿಮಾನಿಗಳು ಅಭಿಮಾನದಿಂದ ನಾನೇ ಮುಖ್ಯಮಂತ್ರಿ ಆಗಬೇಕೆಂದು ಕೂಗುತ್ತಿದ್ದರೂ ಹಾಗಾಗಿ ನಿಮ್ಮ ಆಶೀರ್ವಾದ ಇದ್ದರೇ ಆಗುತ್ತೇನೆ ಎಂದಿದ್ದೆ. ಇದರಿಂದ ಜೆಡಿಎಸ್ ಹಾಗೂ ಸಿಎಂ ಕುಮಾರಸ್ವಾಮಿಗೆ ಯಾವುದೇ ಇರುಸುಮುರುಸಾಗಲ್ಲ. ಕಾಂಗ್ರೆಸ್ ಶಾಸಕರ್ಯಾರು ಬಿಜೆಪಿ ಸಂಪರ್ಕದಲ್ಲಿಲ್ಲ. ಇದು ಉಹಾಪೋಹ, ಬಿಜೆಪಿ ಎಲ್ಲ ನಾಯಕರು ನನ್ನೊಂದಿಗೂ ಸಂಪರ್ಕದಲ್ಲಿದ್ದಾರೆ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv