ಬಾದಾಮಿಯಲ್ಲಿ ಸಿದ್ದರಾಮಯ್ಯ ಗೆದ್ದಿದ್ದು ಮತ ಖರೀದಿಯಿಂದ: ಸಿ.ಎಂ.ಇಬ್ರಾಹಿಂ ಆರೋಪ

Public TV
1 Min Read

– ಸಿದ್ದರಾಮಯ್ಯ ಗೆಲುವಿಗಾಗಿ ಸಾಲದ ಹಣದಲ್ಲಿ 3,000 ವೋಟ್‌ ಖರೀದಿ ಮಾಡಿದ್ದೆವು ಎಂದ ಇಬ್ರಾಹಿಂ

ಮೈಸೂರು: ಚುನಾವಣಾ ಆಯೋಗ ಮತ್ತು ಬಿಜೆಪಿ ವಿರುದ್ಧ ಚುನಾವಣೆಯಲ್ಲಿ ಮತಗಳ್ಳತನ ಗಂಭೀರ ಆರೋಪ ಮಾಡಿದ ಕಾಂಗ್ರೆಸ್‌ಗೆ ಸಿ.ಎಂ.ಇಬ್ರಾಹಿಂ ತಿರುಗೇಟು ನೀಡಿದ್ದಾರೆ. ಬಾದಾಮಿಯಲ್ಲಿ ಸಿದ್ದರಾಮಯ್ಯ ಗೆದ್ದಿದ್ದು ಮತ ಖರೀದಿಯಿಂದ ಎಂದು ಆರೋಪಿಸಿದರು.

ಮೈಸೂರಿನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಸಿ.ಎಂ.ಇಬ್ರಾಹಿಂ, ದಲಿತರು ರಾಜಕೀಯಕ್ಕೆ ಹೆಚ್ಚು ಬರಬೇಕು. ದಲಿತರನ್ನು ಸಿಎಂ ಮಾಡುವುದಾದರೆ ನನ್ನ ಬೆಂಬಲ ಇದೆ. ಸಿದ್ದರಾಮಯ್ಯ ಎರಡು ಸಾರಿ ಮುಖ್ಯಮಂತ್ರಿ ಆಗಿದ್ದು ಆಯಿತು. ಇನ್ನೆಷ್ಟು ಬಾರಿ ಆಗಬೇಕು. ದಲಿತರನ್ನು ಮುಖ್ಯಮಂತ್ರಿ ಮಾಡಿ ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದು ದಲಿತರ ವೋಟ್‌ನಿಂದ. ಕಳೆದ ಬಾರಿ ಬಾದಾಮಿಗೆ ನಾನೇ ಸಿದ್ದರಾಮಯ್ಯನನ್ನ ಸೇರಿಸಿದ್ದು. ಚಿಮ್ಮನಕಟ್ಟಿ ಒಪ್ಪದಿದ್ದಾಗ ಪತ್ನಿ ಕಡೆಯಿಂದ ಒಪ್ಪಿಸಿದೆ. ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ 30 ಸಾವಿರದಿಂದ ಗೆಲ್ತೀನಿ ಅಂತಿದ್ದರು. ಪಕ್ಕದಲ್ಲಿದ್ದ ಮಹದೇವಪ್ಪ 40 ಸಾವಿರದಿಂದ ಗೆಲ್ತೀವಿ ಅಂತಿದ್ದ. ನೀನೆ ಮೊದಲು ಸೋಲ್ತಿಯ ಅಂತ ಹೇಳಿದ್ದೆ. ಕೊನೆಗೆ ಫಲಿತಾಂಶ ಹಾಗೆಯೇ ಬಂತು. ಕೌಂಟಿಂಗ್ ದಿನ ಸಿದ್ದರಾಮಯ್ಯ ಸೋಲುವ ಭಯದಲ್ಲಿದ್ದರು. ಭಯ ಬೇಡ ನಾನು ಮ್ಯಾನೇಜ್ ಮಾಡಿದ್ದೀನಿ ಅಂತ ಹೇಳಿದ್ದೆ. 800-1000 ವೋಟಿಂದ ಗೆಲ್ತೀರ ಅಂತ ಹೇಳಿದ್ದೆ ಎಂದು ನೆನಪಿಸಿಕೊಂಡರು.

ಬಾದಾಮಿಯಲ್ಲಿ ಸಿದ್ದರಾಮಯ್ಯ ಸೋಲುವ ಹಂತದಲ್ಲಿ ಇದ್ದರು. ನಾವು‌ ಚಿಮ್ಮನಕಟ್ಟಿ ಸೇರಿ ಸಾಲ ಮಾಡಿ 3000 ವೋಟ್‌ ಖರೀದಿ ಮಾಡಿದ್ದೆವು. ಕಡಿಮೆ ಅಂತರದಲ್ಲಿ ಗೆದ್ದೇ ಗೆಲ್ತೀರಾ ಅಂತ ಸಿದ್ದರಾಮಯ್ಯಗೆ ಹೇಳಿದ್ದೆ. ಅದೇ ರೀತಿ ಫಲಿತಾಂಶ ಬಂತು. ಕೊನೆಗೆ ಸಿದ್ದರಾಮಯ್ಯ 6 ತಿಂಗಳ ನಂತರ ಆ ಸಾಲ ವಾಪಸ್ ಕೊಟ್ಟಿದ್ದಾರೆ. ಈ ವಿಚಾರ ಹೇಳೋಕೆ ನನಗೆ ಯಾವುದೇ ಭಯ ಇಲ್ಲ ಎಂದರು.

Share This Article