ನಮ್ಮ ಸರ್ಕಾರದ ಸಾಧನೆ ಹೇಳೋಕೆ ಒಂದು ದಿನ ಸಾಲೋದಿಲ್ಲ: ಸಿದ್ದರಾಮಯ್ಯ

3 Min Read

– ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 141 ಸ್ಥಾನ ಬರುತ್ತೆ ಬರೆದಿಟ್ಟುಕೊಳ್ಳಿ ಎಂದ ಡಿಕೆಶಿ

ಹಾವೇರಿ: ಕಾಂಗ್ರೆಸ್‌ ಸರ್ಕಾರ (Congress Government) ಅಧಿಕಾರಕ್ಕೆ ಬಂದು 1,000 ದಿನಗಳನ್ನ ಪೂರೈಸಿದೆ. 590 ಭರವಸೆಗಳಲ್ಲಿ 234 ಭರವಸೆಗಳನ್ನ ಈಗಾಗಲೇ ಈಡೇರಿಸಿದ್ದೇವೆ. ನಮ್ಮದು ನುಡಿದಂತೆ ನಡೆದ ಸರ್ಕಾರ. ನಮ್ಮ ಸರ್ಕಾರದ ಸಾಧನೆ ಹೇಳುತ್ತಾ ಹೋದ್ರೆ ಒಂದು ದಿನ ಸಾಲೋದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಬೆನ್ನುತಟ್ಟಿಕೊಂಡರು.

ರಾಜ್ಯ ಕಾಂಗ್ರೆಸ್‌ ಸರ್ಕಾರ 1,000 ದಿನಗಳು ಪೂರೈಸಿದ ಹಿನ್ನೆಲೆ ಹಾವೇರಿಯಲ್ಲಿ (Haveri) ಹಮ್ಮಿಕೊಳ್ಳಲಾಗಿದ್ದ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಅನ್ಯಾಯ
ಬಿಜೆಪಿಯವರಿಗೆ (BJP) ನಮ್ಮ ಸರ್ಕಾರದ ಮೇಲೆ ಆರೋಪ ಮಾಡುವ ನೈತಿಕ ಹಕ್ಕಿಲ್ಲ. ನಾವು ಮೆಕ್ಕೇಜೊಳ್ಳ ಖರೀದಿ ಕೇಂದ್ರ ತೆರೆದೆವು. ಕಬ್ಬಿಗೆ ಬೆಂಬಲ ಬೆಲೆ ನೀಡಿದೆವು. ನಮ್ಮ ಸರ್ಕಾರ ರೈತರ, ಹಿಂದುಳಿದ, ಅಲ್ಪಸಂಖ್ಯಾತರ, ಬಡವರ ಪರವಾಗಿದೆ. ನಮ್ಮ ಸರ್ಕಾರದ ಕೆಲಸ ಹೇಳುತ್ತಾ ಹೋದ್ರೆ ಒಂದು ದಿನ ಸಾಲೋದಿಲ್ಲ. 1 ಸಾವಿರ ದಿನ ಅನ್ನೋದು ಮೈಲಿಗಲ್ಲು ಅಲ್ಲ, ಇದು ಬದ್ಧತೆ. ಆದ್ರೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಬಹಳ ಅನ್ಯಾಯ ಮಾಡಿದೆ. ಜಿಎಸ್‌ಟಿ ನಲ್ಲಿ (GST) ಅನ್ಯಾಯ ಮಾಡಿದೆ ಎಂದು ಕಿಡಿ ಕಾರಿದ್ರು.

590 ರಲ್ಲಿ 234 ಭರವಸೆ ಈಡೇರಿಸಿದ್ದೇವೆ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಸಾವಿರ ದಿನಗಳಾಗಿವೆ. ಹಾವೇರಿನಲ್ಲಿ ಇಷ್ಟೊಂದು ದೊಡ್ಡ ಕಾರ್ಯಕ್ರಮ ನಡೆಯುತ್ತೆ ಅಂದು ಕೊಂಡಿರಲಿಲ್ಲ. ಸರ್ಕಾರದ ವತಿಯಿಂದ ಕಾರ್ಯಕ್ರಮ ಆಯೋಜಕರಿಗೆ ಧನ್ಯವಾದ ಸಲ್ಲಿತ್ತೇನೆ. 2023ರ ಮೇ 20 ರಂದು ಅಧಿಕಾರಕ್ಕೆ ಬಂದ್ವಿ. ಚುನಾವಣೆ ವೇಳೆ ಕೊಟ್ಟ ಮಾತಿನಂತೆ ಕೆಲಸ ಮಾಡುತ್ತಿದ್ದೇವೆ. 590 ಭರವಸೆಗಳಲ್ಲಿ 234 ಭರವಸೆಗಳನ್ನು ಈಡೇರಿಸಿದ್ದೇವೆ. ಉಳಿದ ಭರವಸೆ ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ನಾವು ನುಡಿದಂತೆ ನಡೆದಿದ್ದೇವೆ. ನಮ್ಮ ಸರ್ಕಾರ ನುಡಿದಂತೆ ನಡೆದ ಸರ್ಕಾರ ಎಂದು ಶ್ಲಾಘಿಸಿದ್ರು.

ಬಿಜೆಪಿ 4 ವರ್ಷ ಅಧಿಕಾರ ಮಾಡಿದ್ರು, ಶೇ.10 ರಷ್ಟು ಭರವಸೆಯನ್ನೂ ಈಡೇರಿಸಲಿಲ್ಲ. ಈಗ ನಮ್ಮ ಸರ್ಕಾರದ ಖಜಾನೆ ಖಾಲಿ ಆಗಿದೆ ಅಂತ ಸುಳ್ಳು ಆರೋಪ ಮಾಡ್ತಿದ್ದಾರೆ. ಖಜಾನೆ ಖಾಲಿ ಆಗಿದ್ರೆ ಇಂತಹ ಯೋಜನೆ ಜಾರಿಗೊಳಿಸುತ್ತಿರಲಿಲ್ಲ ಎಂದು ಸಿಎಂ ತಿರುಗೇಟು ನೀಡಿದ್ರು.

ಆದರ್ಶ ಇಲ್ಲದೇ ಸತ್ತರೆ ಬದುಕಿಗೆ ಅವಮಾನ
ಇನ್ನೂ ಡಿಸಿಎಂ ಡಿಕೆ ಶಿವಕುಮಾರ್‌ ಮಾತನಾಡಿ, ಭೂ ಮಾಲೀಕರ ಪರವಾಗಿ ಕೃಷ್ಣ ಬೈರೇಗೌಡ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಆದರ್ಶ ಇಲ್ಲದೇ ಸತ್ತರೆ ಬದುಕಿಗೆ ಅವಮಾನ. ನುಡಿದಂತೆ ನಡೆದು ನಿಮ್ಮ ಆಶೀರ್ವಾದ ಪಡೆಯಲು ಬಂದಿದ್ದೇವೆ. ʻಕಮಲ ಕೆರೆಯಲ್ಲಿದ್ದರೆ ಚಂದ… ತೆನೆ ಹೊಲದಲ್ಲಿದ್ದರೆ ಚಂದ… ಆದ್ರೆ ದಾನ ಧರ್ಮ ಮಾಡುವ ʻಕೈʼ ಅಧಿಕಾರದಲ್ಲಿದ್ದರೆ ಚಂದ. ಟೀಕೆ, ಆರೋಪ, ಅಪಪ್ರಚಾರಕ್ಕೆ ಸಾವಿದೆ. ನಾವು ಮಾಡುವ ಕೆಲಸಕ್ಕೆ ʻಗ್ಯಾರೆಂಟಿʼ ಸಾವಿಲ್ಲ ಎಂದು ನುಡಿದರು.

7ನೇ ಗ್ಯಾರಂಟಿ ನೀರಿನ ಗ್ಯಾರಂಟಿ
ಮುಂದುವರಿದು.. ಮಿಸ್ಟರ್ ಕುಮಾರಸ್ವಾಮಿ, ಯಡಿಯೂರಪ್ಪ, ವಿಜಯೇಂದ್ರ ಅವರೇ, ನೀವು ಇಂತಹ ಸಾಧನೆ ಕೆಲಸ ಮಾಡಿದ್ದೀರಾ? ನಾನು ಕೇಂದ್ರ ಸರ್ಕಾರಕ್ಕೆ ಕೇಳುತ್ತೇನೆ. ಕೃಷ್ಣಾ ಮೇಲ್ದಂಡೆ ಯೋಜನೆ, ಕಾವೇರಿ ಯೋಜನೆಯನ್ನ ನಮ್ಮ ಸರ್ಕಾರ ಕೈಗೆತ್ತಿಕೊಂಡಿದೆ. ಮರು ಡಿಪಿಆರ್ ತಯಾರು ಮಾಡುತ್ತಿದ್ದೇವೆ. ಕೃಷ್ಣಾ, ಕಾವೇರಿ, ಮಹದಾಯಿ ಯೋಜನೆ ಮೂಲಕ ನೀರಿನ ಧ್ವನಿ ನೀಡುತ್ತೇವೆ. 7ನೇ ಗ್ಯಾರಂಟಿ ನೀರಿನ ಗ್ಯಾರಂಟಿ ಆಗಿರುತ್ತೆ. ಮುಂದಿನ ಚುನಾವಣೆಯಲ್ಲಿ 141 ಸ್ಥಾನ ಕಾಂಗ್ರೆಸ್ ಬರುತ್ತವೆ ಬರೆದಿಟ್ಟುಕೊಳ್ಳಿ ಎಂದು ಎಚ್ಚರಿಸಿದ್ರು.

Share This Article