ಅನಾರೋಗ್ಯದಲ್ಲಿದ್ರೂ ಇಷ್ಟಲಿಂಗ ಪೂಜೆ ತಪ್ಪಿಸಿದವರಲ್ಲ!

Public TV
2 Min Read

ಹಾಸಿಗೆಯ ಮೇಲೂ ಅನಾರೋಗ್ಯದಿಂದ ಮಲಗಿರುವಾಗಲೂ ಸಿದ್ದಗಂಗಾ ಶ್ರೀ ಇಷ್ಟಲಿಂಗ ಪೂಜೆ ತಪ್ಪಿಸುತ್ತಿರಲಿಲ್ಲ. ಸಿದ್ಧ ಶಿವಯೋಗ ಸಾಧನೆ, ಶುದ್ಧ ಸಂಕಲ್ಪ ಎಲ್ಲರಿಗೂ ಒಲಿದು ಬರುವಂತದ್ದಲ್ಲ. ಶಿವಯೋಗ ಸಾಧನೆಯಿಂದ ವ್ಯಕ್ತಿತ್ವ ಪರಿಪೂರ್ಣಗೊಳ್ಳುತ್ತದೆ. ಶಿವಯೋಗದಿಂದ ವ್ಯಕ್ತಿತ್ವ ಪ್ರಭಾವಶಾಲಿಯಾಗುತ್ತದೆ.ಸುತ್ತಲಿನ ಪರಿಸರವೆಲ್ಲವೂ ಬೆಳಕಿನ ವರ್ತುಲವಾಗುತ್ತದೆ. ಶಿವಯೋಗದ ಸಾಧಕರು ಇದರ ಪರಮಾನುಭವವನ್ನು ಪಡೆದಿರುವ ಪ್ರಶಾಂತ ಯೋಗಿಗಳು ಸಿದ್ದಗಂಗಾ ಶ್ರೀಗಳು.

ಬಾಲ್ಯದಿಂದಲೂ ಇಷ್ಟಲಿಂಗ ಪೂಜೆಯನ್ನು ಮಾಡುತ್ತಿದ್ದ ಯೋಗಿ ಶ್ರೀಗಳು. ಬೆಳಗಿನ ಜಾವ ಮೂರು ಗಂಟಗೆ ಎದ್ದು ಸ್ನಾನ ಮಾಡಿ ಪೂಜೆಗೆ ಕುಳಿತರೆಂದರೆ ಅವರಿಗೆ ಇಹದ ಪರಿವು ಇರುತ್ತಿರಲಿಲ್ಲ. ಅವರ ಪೂಜೆ ಮನಮಂತ್ರಯೋಗದ ಮಂಗಳ ಪೂಜೆ. ಸುಮಾರು ಮೂರು ಗಂಟೆಯ ಕಾಲ ನಡೆಯುವ ಪೂಜ್ಯರ ಇಷ್ಟಲಿಂಗ ಪೂಜೆಯ ಸಂದರ್ಭದಲ್ಲಿ ಪ್ರಾಚೀನ ಮಂತ್ರಗಳು ಪ್ರಾರ್ಥಿಸುತ್ತವೆ. ಶರಣರ ವಚನಗಳು ಪುಷ್ಪ ಮುಡಿಸುತ್ತದೆ. ಇದನ್ನೂ ಓದಿ: ಶಿವೈಕ್ಯದಲ್ಲಿಯೂ ಮಾನವೀಯತೆ ಮೆರೆದ ನಡೆದಾಡುವ ದೇವರು!

ಶರಣರ ಪರಿಕಲ್ಪನೆಯಲ್ಲಿ ಇಷ್ಟಲಿಂಗ ಪೂಜೆ ಆತ್ಮನಿರೀಕ್ಷಣೆಯ ಒಂದು ಸಾಧನ. ದೃಷ್ಟಿಯೋಗದ ಮಾಧ್ಯಮ, ಅಂತರಂಗದ ಅನುಸಂಧಾನ. ಸ್ವಾಮೀಜಿ ಇಷ್ಟಲಿಂಗ ಪೂಜೆಗೆ ಕುಳಿತಾಗ ಬಸವಣ್ಣ ವಚನಗಳನ್ನು ಭಾವಪರವಶರಾಗಿ ಹಾಡುತ್ತಿದ್ದರು. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳ 111 ಸಾಧನೆಗಳು ಹಾಗೂ ವೈಶಿಷ್ಟಗಳು

ಪೂಜ್ಯ ಸ್ವಾಮೀಜಿ ಅವರ ದಿನಚರಿ ಆರಂಭವಾಗುವುದು ಮೊದಲೇ ಹೇಳಿದಂತೆ ನಸುಕಿನ ಜಾವದಿಂದಲೇ. ಶ್ರೀಗಳ ಇಷ್ಟಲಿಂಗ ಪೂಜೆ ದರ್ಶನಕ್ಕಾಗಿ ಪೂಜಾ ತೀರ್ಥಕ್ಕಾಗಿ ನಿತ್ಯ ನೂರಾರು ಯಾತ್ರಿಕರು ಮುಂಜಾನೆ ಮುಡಿಯಿಟ್ಟು ಪೂಜೆ ನಡೆಯುವ ಹಳೆಯ ಮಠಕ್ಕೆ ಬರುತ್ತಾರೆ. ಈ ದಿವ್ಯದೃಶ್ಯವನ್ನು ಕಂಡ್ರೆ ಭಕ್ತರು ಅವ್ರ ಪುಣ್ಯ ಅಂತಾನೆ ಭಾವಿಸುತ್ತಾರೆ.

ಶ್ರೀಗಳ ಪ್ರಕಾರ ದೇವರನ್ನು ನಂಬಬೇಕು, ನಂಬಿಕೆಗಿಂತ ಮಿಗಿಲಾದ ತಪಸ್ಸಿಲ್ಲ. ದೇವಪೂಜೆ ಜೀವನದ ಒಂದು ಭಾವನಾತ್ಮಕ ನೆಮ್ಮದಿ ನಂಬಿ ಕರದೆಡೆ ಓ ಎನ್ನನೆ ಶಿವನು ಎನ್ನುವಂತೆ ಸಿದ್ದಗಂಗಾ ಶ್ರೀಗಳು ಭಕ್ತಿ ಭಂಡಾರವೇ ಆಗಿದ್ದರು. ಕಾಯಕ ದಾಸೋಹಗಳನ್ನು ಕೂಡ ದೇವ ಪೂಜೆಯಂತೆಯೇ ಮಾಡಿದವರು. ದೀನ ದಲಿತರ ಸೇವೆಯೂ ದೈವರಾಧನೆಯಂತೆ ಮಾಡುತ್ತಿದ್ರು.

ಕೆಲ ದಿನಗಳ ಹಿಂದೆ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ತಮ್ಮನ್ನು ನೋಡಲು ಬಂದ ಭಕ್ತರನ್ನು ಕಣ್ತೆರೆದು ವೀಕ್ಷಿಸಿದ್ದರು. ಅಷ್ಟೇ ಅಲ್ಲದೆ ಕಿರಿಯ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಶ್ರೀಗಳ ಪಾದ ಸ್ಪರ್ಶಿಸಿ ನಮಸ್ಕರಿಸಿದ ವೇಳೆ ಕಣ್ಣು ತೆರೆದು ಮುಗುಳ್ನಕ್ಕಿದ್ದರು. ಕಿರಿಯ ಶ್ರೀಗಳ ಸಹಾಯದೊಂದಿಗೆ ಇಷ್ಟಲಿಂಗ ಪೂಜೆಯಲ್ಲಿ ನಡೆದಾಡುವ ದೇವರು ಭಾಗಿಯಾಗಿದ್ದರು. ಶ್ರೀಗಳ ಪಕ್ಕದಲ್ಲೇ ಕುಳಿತು ಕಿರಿಯ ಶ್ರೀಗಳು ಇಷ್ಟಲಿಂಗ ಪೂಜೆ ನೆರವೇರಿಸಿದ್ದರು.

https://www.youtube.com/watch?v=7NRpWmWu3fA

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *