ಸಿದ್ದಗಂಗಾ ಶ್ರೀಗಳ 111 ಅಡಿ ಎತ್ತರದ ಪುತ್ಥಳಿ ನಿರ್ಮಾಣ – ನ.8ರಂದು ಸಿಎಂ ಶಂಕುಸ್ಥಾಪನೆ

Public TV
2 Min Read

ನೆಲಮಂಗಲ: ಸಿದ್ದಗಂಗಾ ಶ್ರೀ ಶಿವಕುಮಾರ ಶ್ರೀಗಳ 111 ಅಡಿ ಎತ್ತರದ ಪುತ್ಥಳಿ ನಿರ್ಮಾಣಕ್ಕೆ ತಯಾರಿ ಜೋರಾಗಿ ನಡೆದಿದೆ.

ಶ್ರೀಗಳ ಹುಟ್ಟೂರು ಮಾಗಡಿ ತಾಲೂಕಿನ ವೀರಾಪುರ ಗ್ರಾಮದಲ್ಲಿ ಭೂಮಿ ನಿಗದಿ ಪಡಿಸಲಾಗಿದ್ದು, ನವೆಂಬರ್ 8 ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ವೀರಾಪುರ ಗ್ರಾಮದಲ್ಲಿ ಈಗಾಗಲೇ ಸರ್ಕಾರದಿಂದ ಭೂಮಿ ನಿಗದಿಯಾಗಿದೆ. ಇದೆ ನ.8ರ ಶುಕ್ರವಾರದಂದು ಸಿಎಂ ಯಡಿಯೂರಪ್ಪ ಹಾಗೂ ಡಿಸಿಎಂ ಅಶ್ವಥ್ ನಾರಾಯಣ ಅವರಿಂದ ಶಂಕುಸ್ಥಾಪನೆ ಕಾರ್ಯ ನಡೆಯಲಿದೆ.

ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ನಾನಾ ರೂಪುರೇಷೆಗಳು ಸಿದ್ಧವಾಗಿದ್ದು, ಸಿದ್ದಗಂಗಾ ಶ್ರೀಗಳ ಬೃಹತ್ ಪುತ್ಥಳಿಯ ನೀಲಿ ನಕ್ಷೆ ಕೂಡ ಅನಾವರಣಗೊಂಡಿದೆ. ಈ ಮೂಲಕ ಸಾಕಷ್ಟು ವರ್ಷಗಳಿಂದ ನಿರ್ಲಕ್ಷಿಸಲ್ಪಟ್ಟಿದ್ದ ಶಿವಕುಮಾರ ಶ್ರೀಗಳ ಹುಟ್ಟೂರು ವೀರಾಪುರ ಗ್ರಾಮಕ್ಕೆ ಇದೀಗ ಹೊಸ ರೂಪ ಬರಲಿದ್ದು, ಕಾರ್ಯಕ್ರಮದ ಸಿದ್ಧತೆಗಳು ಬರದಿಂದ ಸಾಗುತ್ತಿದೆ.

25 ವರ್ಷಗಳ ಕಾಲ ಕಾಲಿಟ್ಟಿರಲಿಲ್ಲ:
ನಡೆದಾಡುವ ದೇವರು, ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ತಮ್ಮ ಹುಟ್ಟೂರಿಗೆ 25 ವರ್ಷಗಳ ಕಾಲ ಕಾಲಿಟ್ಟಿರಲಿಲ್ಲ. ಹೌದು. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ವೀರಾಪುರದ ಪಟೇಲ್ ಹೊನ್ನಪ್ಪ ಅವರಿಗೆ ಮಗ ಶಿವಣ್ಣ (ಶಿವಕುಮಾರ ಸ್ವಾಮೀಜಿ) ಉನ್ನತ ಅಧಿಕಾರಿ ಆಗಬೇಕು ಎನ್ನುವ ಆಸೆಯಿತ್ತು. ಇತ್ತ ಉದ್ಧಾನ ಶಿವಯೋಗಿಗಳು, ಬಿ.ಎ. ವ್ಯಾಸಂಗ ಪೂರ್ಣಗೊಳಿಸಿದ್ದ ಶಿವಣ್ಣ ಸನ್ಯಾಸತ್ವ ಸ್ವೀಕರಿಸಬೇಕು. ಜಗತ್ತಿಗೆ ಬೆಳಕಾಗಬೇಕು ಎಂಬ ಮಹದಾಸೆಯನ್ನು ಹೊಂದಿದ್ದರು.

ಶಿವಣ್ಣ ಸನ್ಯಾಸತ್ವ ಸ್ವೀಕರಿಸಿದ್ದಾನೆ ಎನ್ನುವುದನ್ನು ದು:ಖದಲ್ಲಿರುವ ಹೊನ್ನಪ್ಪ ಹಾಗೂ ಗಂಗಮ್ಮ ದಂಪತಿಗೆ ಸಾಂತ್ವಾನ ಹೇಳಲು ಶಿವಯೋಗಿಗಳು ಖುದ್ದಾಗಿ ವೀರಾಪುರಕ್ಕೆ ಹೋಗಿದ್ದರು. ಆದರೆ ಹೊನ್ನಪ್ಪ ಶಿವಯೋಗಿಗಳಿಗೆ ಭೇಟಿಯಾಗಬಾರದು ಅಂತ ಮನೆಯಿಂದ ಆಚೆ ಹೋಗಿದ್ದರು. ಇದರಿಂದಾಗಿ ಮನನೊಂದ ಶಿವಯೋಗಿಗಳು ಅಲ್ಲಿಂದ ನಡೆದುಕೊಂಡೇ ಮಠಕ್ಕೆ ಮರಳಿದ್ದರು.

ಶ್ರೀಗಳು ಮಠಕ್ಕೆ ಮರಳಿದಾಗ ನಡೆದ ಘಟನೆಯನ್ನು ಶಿಷ್ಯ ಶಿವಕುಮಾರ ಸ್ವಾಮೀಜಿಗಳಿಗೆ ವಿವರಿಸಿದರಂತೆ. ಗುರುಗಳ ಮೇಲೆ ಅಪಾರ ಭಕ್ತಿ ಹೊಂದಿದ್ದ ಶಿವಕುಮಾರ ಶ್ರೀಗಳಿಗೆ ತಂದೆ ನಡೆದುಕೊಂಡಿದ್ದು ಸರಿಯಲ್ಲ ಅನಿಸಿತ್ತು. ಇದರಿಂದಾಗಿ ಹುಟ್ಟೂರು ವೀರಾಪುರ ಗ್ರಾಮಕ್ಕೆ ಹೋಗುವುದನ್ನೇ ನಿಲ್ಲಿಸಿಬಿಟ್ಟಿದ್ದರು.

ಗ್ರಾಮಕ್ಕೆ ಕಾಲಿಟ್ಟಿದ್ದು ಹೇಗೆ?:
ಸಿದ್ದಗಂಗಾ ಮಠದ ಜವಾಬ್ದಾರಿ ಹೊತ್ತ ಶ್ರೀಗಳು, ಮಕ್ಕಳು ಶಿಕ್ಷಣ, ದಾಸೋಹ, ಸಮಾಜಿಕ ಸೇವೆ, ಇಷ್ಟಲಿಂಗ ಪೂಜೆ, ಓದು, ಭಕ್ತರ ಭೇಟಿ, ಪ್ರವಚನದಲ್ಲಿ ನಿರತರಾಗಿದ್ದರು. ಈ ನಡುವೆ ತಮ್ಮ ಗ್ರಾಮಕ್ಕೆ ಬರುವಂತೆ ವೀರಾಪುರ ಜನರು 1930ರಿಂದ 1955ರ ವರೆಗೂ ಮನವಿ ಮಾಡಿಕೊಳ್ಳುತ್ತಿದ್ದರು. ಆದರೆ ಶ್ರೀಗಳು ಮಾತ್ರ ಭಕ್ತರಿಗೆ ನಗುಮುಗದಿಂದಲೇ ಬರಲು ಆಗುವುದಿಲ್ಲ ಅಂತ ಹೇಳುತ್ತಿದ್ದರು.

ಶಿವಕುಮಾರ ಶ್ರೀಗಳ ಪೂರ್ವಾಶ್ರಮದ ಅಣ್ಣನ ಮಗ ಸಿದ್ದಗಂಗಾ ಮಠಕ್ಕೆ ಬಂದು, ನೂತನ ಗೃಹ ಪ್ರವೇಶಕ್ಕೆ ನೀವು ಬರಬೇಕು ಅಂತ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶ್ರೀಗಳು, ಶಿವಯೋಗಿಗಳ ಕೃಪೆಯಿಂದ ದೂರವಾಗಿರುವ ಆ ಮನೆಗೆ ನಾನು ಬರುವುದಿಲ್ಲ ಅಂತ ತಿಳಿಸಿದ್ದರು.

ನಿಮ್ಮ ಅಪ್ಪಣೆಯಂತೆ ಆಗಲಿ. ನೀವು ಬಂದು ಗೃಹ ಪ್ರವೇಶ ಮಾಡಬೇಕು ಎನ್ನುವುದು ನಮ್ಮ ಸಂಕಲ್ಪ. ಒಂದು ವೇಳೆ ನೀವು ಬರದೇ ಹೋದರೆ ಮನೆ ಹಾಳುಬಿದ್ದರೂ ನಾವು ಗೃಹಪ್ರವೇಶ ಮಾಡುವುದಿಲ್ಲ ಎಂದು ಶ್ರೀಗಳಿಗೆ ನಮ್ಮ ಮನವಿ ಒಪ್ಪಿಸಿ ಗ್ರಾಮಕ್ಕೆ ತೆರಳಿದರು.

ಭಕ್ತನ ಭಕ್ತಿ ದೊಡ್ಡದು, ಅದಕ್ಕೂ ಶಕ್ತಿಯಿದೆ ಅಂತ ಅರಿತಿದ್ದ ಶ್ರೀಗಳು ಭಕ್ತರ ಸಂಕಲ್ಪಕ್ಕೆ ಕರಗಿ ಗೃಹಪ್ರವೇಶಕ್ಕೆ ಬರುವುದಾಗಿ ತಿಳಿಸಿದ್ದರು. ಈ ಮೂಲಕ 25 ವರ್ಷದ ಬಳಿಕ 1955ರಲ್ಲಿ ಶ್ರೀಗಳು ಹುಟ್ಟೂರಿಗೆ ಕಾಲಿಟ್ಟಿದ್ದರು.

Share This Article
Leave a Comment

Leave a Reply

Your email address will not be published. Required fields are marked *