ಧರ್ಮಸ್ಥಳ ಬಳಿಕ ಸಿದ್ದಗಂಗಾ ಮಠದಲ್ಲೂ ನೀರಿಗೆ ಬರ!

Public TV
1 Min Read

ತುಮಕೂರು: ಎಲ್ಲೆಲ್ಲೂ ನೀರಿಗೆ ಬರ. ಧರ್ಮಸ್ಥಳದ ಆ ದೇವರಿಗೂ ಬರ ತಟ್ಟಿತ್ತು. ಇದೀಗ ತುಮಕೂರಿನ ಸಿದ್ದಗಂಗಾ ಮಠದಲ್ಲೂ ನೀರಿಗೆ ಬವಣೆ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಜೂನ್ ತಿಂಗಳಲ್ಲಿ ಮಳೆ ಬಾರದೇ ಇದ್ದರೆ ನೀರಿಗಾಗಿ ಪರದಾಟಪಡಬೇಕಾಗುತ್ತದೆ.

ಧರ್ಮಸ್ಥಳದಲ್ಲಿ ನೀರಿನ ಲಭ್ಯತೆ ಕಡಿಮೆಯಾದ ಹಿನ್ನೆಲೆಯಲ್ಲಿ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರು ಸದ್ಯಕ್ಕೆ ಮಂಜುನಾಥನ ದರ್ಶನಕ್ಕೆ ಬರಬೇಡಿ ಎಂದು ಭಕ್ತರಲ್ಲಿ ಮನವಿ ಮಾಡಿದ್ದರು. ಇದೀಗ ತ್ರಿವಿಧ ದಾಸೋಹದ ಕ್ಷೇತ್ರ ತುಮಕೂರಿನ ಸಿದ್ದಗಂಗಾ ಮಠದಲ್ಲೂ ನೀರಿನ ಸಮಸ್ಯೆಗೆ ಬರ ಎದುರಾಗುವ ಪರಿಸ್ಥಿತಿ ಬಂದಿದೆ.

ಸಿದ್ದಗಂಗಾ ಮಠದಲ್ಲಿ ದಿನಕ್ಕೆ ಸಾವಿರಾರು ಭಕ್ತಾದಿಗಳು ದಾಸೋಹ ಮಾಡುತ್ತಾರೆ. 10 ಸಾವಿರ ವಿದ್ಯಾಥಿಗಳು ವ್ಯಾಸಂಗ ಮಾಡುತ್ತಾರೆ. ಮಠದ ಉಪಯೋಗಕ್ಕೆ ಸರಿ ಸುಮಾರು ದಿನವೊಂದಕ್ಕೆ 80 ಸಾವಿರ ಲೀಟರ್ ನೀರು ಬೇಕಾಗುತ್ತೆ. ಈಗ ವಿದ್ಯಾರ್ಥಿಗಳು ರಜೆ ನಿಮಿತ್ತ ಊರಿಗೆ ಹೋಗಿದ್ರಿಂದ 50 ಸಾವಿರ ಲೀಟರ್ ನೀರಿನ ಅಗತ್ಯತೆ ಇದೆ.

ಸದ್ಯಕ್ಕೆ 50 ಸಾವಿರ ಲೀಟರ್ ನೀರು ಸುಲಭವಾಗಿ ದೊರೆಯುತ್ತೆ. ಆದರೆ ಜೂನ್ ತಿಂಗಳಲ್ಲಿ ಶಾಲೆ ಆರಂಭವಾಗೋದ್ರಿಂದ 80 ಸಾವಿರ ಲೀಟರ್ ನೀರು ಬೇಕಾಗುತ್ತದೆ. ಜೂನ್ ತಿಂಗಳಲ್ಲಿ ಮಳೆಯಾದರೆ ನೀರಿನ ಸಮಸ್ಯೆ ಆಗಲ್ಲ. ಇಲಾಂದ್ರೆ ನೀರಿಗೆ ಬರ ಬರಲಿದೆ ಎಂದು ಹೇಳಲಾಗುತ್ತಿದೆ.

ಮಠದಲ್ಲಿ ನೂರಾರು ಜಾನುವಾರುಗಳಿದರೂ ಅವುಗಳ ಸಾಕಾಣಿಕೆಗೆ ನೀರಿನ ಅವಶ್ಯಕತೆ ಇದೆ. ಸುಮಾರು 30 ಬೋರ್‍ವೆಲ್‍ಗಳಿವೆ. ಅವುಗಳಲ್ಲಿ 5-6 ಬೋರ್ ವೆಲ್ ಕೈ ಕೊಟ್ಟಿವೆ. ಇನ್ನುಳಿದವುಗಳಲ್ಲಿ ಅಲ್ಪ ಸ್ವಲ್ಪ ನೀರು ಬರುತ್ತಿದೆ. ಈ ನೀರಿನಿಂದಲೇ ನಿತ್ಯದ ಕೆಲಸ ಸಾಗಿದೆ. ಮಹಾನಗರ ಪಾಲಿಕೆಯಿಂದ ನೀಡುತ್ತಿದ್ದ ಹೇಮಾವತಿ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಮೈದಾಳ ಕೆರೆಯಿಂದ ನೀರು ಹರಿಸುವ ಯೋಜನೆಯೂ ಸ್ಥಗಿತಗೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *