ಹೆಪ್ಪುಗಟ್ಟಿದ ನದಿಯಲ್ಲಿ 54 ಮಾನವ ಕೈಗಳು ಪತ್ತೆ!

Public TV
1 Min Read

ಬೀಜಿಂಗ್: ಹೆಪ್ಪುಗಟ್ಟಿದ ನದಿಯಲ್ಲಿ ಕತ್ತರಿಸಲ್ಪಟ್ಟ 54 ಮಾನವ ಕೈಗಳು ಪತ್ತೆಯಾಗಿರೋ ಘಟನೆ ಚೀನಾ ಸಮೀಪದ ಸೈಬೀರಿಯಾದ ಪೂರ್ವದಲ್ಲಿನ ಖಬರೋವ್ಸ್ಕ್ ನಗರದಲ್ಲಿ ನಡೆದಿದೆ.

53 ಮಾನವ ಕೈಗಳು ಚೀಲದೊಳಗೆ ಪತ್ತೆಯಾಗಿದ್ದು 1 ಕೈ ಮಾತ್ರ ಚೀಲದಿಂದ ಹೊರಗಡೆ ಬಿದ್ದಿತ್ತು. ಚೀನಾ-ರಷ್ಯಾ ಗಡಿಯಿಂದ 18 ಮೈಲಿಗಳಷ್ಟು ಕೆಳಗಿರುವ ಆಮುರ್ ನದಿಯ ಮಂಜುಗಟ್ಟಿದ ನಡುಗಡ್ಡೆಯಲ್ಲಿ ಈ ಕೈ ಸ್ಥಳೀಯರೊಬ್ಬರಿಗೆ ಸಿಕ್ಕಿದೆ.

ಇಲ್ಲಿನ ಜನಪ್ರಿಯ ಮೀನುಗಾರಿಕೆ ತಾಣದಲ್ಲಿ ಕೈಗಳು ಪತ್ತೆಯಾಗಿದ್ದು, ಈ ಪ್ರದೇಶದಲ್ಲಿ ಮುಂಚೆ ಅನುಮಾನಾಸ್ಪದವಾಗಿ ಏನೂ ನೋಡಲಿಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ. ಖಾಸಗಿ ಮಾಧ್ಯಮವೊಂದು ಈ ಕುರಿತು ವರದಿ ಮಾಡಿದ್ದು, `ಇಷ್ಟು ಕ್ರೂರವಾಗಿ ಕೈಗಳನ್ನು ಯಾರು? ಏಕೆ? ಕತ್ತರಿಸಿದ್ದಾರೆ ಎಂಬುದು ನಿಗೂಢವಾಗಿದೆ’ ಎಂದು ಹೇಳಿದೆ. ಒಂದು ಕೈ ಮೇಲೆ ಫಿಂಗರ್‍ಪ್ರಿಂಟ್ ಪತ್ತೆಯಾಗಿದ್ದು, ಉಳಿದವನ್ನು ಪರಿಶೀಲಿಸಲಾಗುತ್ತಿದೆ ಎಂದು ವರದಿಯಾಗಿದೆ.

ಕೈಗಳನ್ನ ಕತ್ತರಿಸಿರುವ ಹಿಂದಿನ ಕಾರಣದ ಬಗ್ಗೆ ಹಲವಾರು ರೀತಿಯ ಮಾತುಗಳು ಕೇಳಿಬಂದಿವೆ. ಕಳ್ಳತನದ ಶಿಕ್ಷೆಯಾಗಿ ಕೈಗಳನ್ನು ಕತ್ತರಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಹಾಗೇ ಆಸ್ಪತ್ರೆಯಲ್ಲಿ ಮೃತದೇಹಗಳಿಂದ ಕೈಗಳನ್ನು ಕತ್ತರಿಸಿರಬಹುದು, ಆದರೆ ಇದು ಯಾಕೆ ಎಂಬುದು ಅಸ್ಪಷ್ಟವಾಗಿದೆ.

ದೇಹದ ಅಂಗಾಂಗಗಳನ್ನ ಕದಿಯಲು ಅಕ್ರಮವಾಗಿ ಶವಗಳನ್ನ ಬಳಸಿಕೊಂಡಿರುವ ಸಾಧ್ಯತೆ ಇದ್ದು, ಬಳಿಕ ಫಿಂಗರ್‍ಪ್ರಿಂಟ್‍ನಿಂದ ಶವಗಳ ಗುರುತು ಪತ್ತೆಮಾಡುವುದನ್ನ ತಡೆಯಲು ಕೈಗಳನ್ನ ಕತ್ತರಿಸಿರಬಹುದು ಎಂದು ಕೂಡ ಊಹಿಸಲಾಗಿದೆ. ಕೈಗಳು ಪತ್ತೆಯಾದ ಸ್ಥಳದಲ್ಲಿ ವೈದ್ಯಕೀಯ ಬ್ಯಾಂಡೇಜ್ ಗಳು, ಆಸ್ಪತ್ರೆ ಶೈಲಿಯ ಪ್ಲಾಸ್ಟಿಕ್ ಶೂಗಳು ಕೂಡ ಪತ್ತೆಯಾಗಿವೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ಈ ಪ್ರಕರಣದ ಬಗ್ಗೆ ಇಲ್ಲಿನ ಪೊಲೀಸರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *