ತಿನ್ನಲು ಕೊಟ್ಟ ಪದಾರ್ಥ ಕಲ್ಲಾಯ್ತು, ಜ್ಯೂಸ್ ಇಟ್ಟಿಗೆಯಂತಾಯ್ತು- ಸಿಯಾಚಿನ್‍ನಲ್ಲಿರುವ ಯೋಧರ ವಿಡಿಯೋ ವೈರಲ್

Public TV
2 Min Read

ನವದೆಹಲಿ: ವಿಶ್ವದ ಅತ್ಯಂತ ಎತ್ತರದ ಯುದ್ಧ ಭೂಮಿ ಸಿಯಾಚಿನ್‍ನಲ್ಲಿ ದೇಶದ ರಕ್ಷಣೆ ಮಾಡುತ್ತಿರುವ ಯೋಧರ ಬದುಕು ಆ ದೇವರಿಗೆ ಪ್ರೀತಿ. ಯಾಕೆಂದರೆ ಅಲ್ಲಿನ ತಾಪಮಾನಕ್ಕೆ ಆಹಾರ ಪದಾರ್ಥವೆಲ್ಲ ಕಲ್ಲಿನಂತೆ ಗಟ್ಟಿಯಾಗಿರುವ ವಿಡಿಯೋ ಮೂಲಕ ತಮ್ಮ ಪರಿಸ್ಥಿತಿಯನ್ನು ಅಲ್ಲಿನ ಯೋಧರು ಹಂಚಿಕೊಂಡಿದ್ದಾರೆ.

ಆಹಾರ ಪದಾರ್ಥಗಳು ಕಲ್ಲಾಗಿ ಪರಿವರ್ತನೆಗೊಳ್ಳುತ್ತಿದ್ದರೂ, ಮೈನಸ್ 4 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಯೋಧರು ಎದೆಗುಂದದೆ ದೇಶ ಕಾಯುತ್ತಿದ್ದಾರೆ. ಸಿಯಾಚಿನ್‍ನಲ್ಲಿ ತಮ್ಮ ಬದುಕು ಹೇಗಿದೆ ಎನ್ನುವ ಬಗ್ಗೆ ಯೋಧರು ಚಿಕ್ಕ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಸದ್ಯ ಸಖತ್ ವೈರಲ್ ಆಗಿದೆ. ಅಲ್ಲದೆ ಈ ವಿಡಿಯೋ ನೋಡಿದರೆ ದೇಶಕ್ಕಾಗಿ ಪ್ರಾಣ ಒತ್ತೆ ಇಟ್ಟು ಕೆಲಸ ಮಾಡುತ್ತಿರುವ ಯೋಧರ ಮೇಲೆ ಮತ್ತಷ್ಟು ಗೌರವ ಹೆಚ್ಚುವಂತೆ ಮಾಡಿದೆ.

2.20 ನಿಮಿಷದ ವೀಡಿಯೋವನ್ನು ಯೋಧರು ಹಂಚಿಕೊಂಡಿದ್ದಾರೆ. ಇದನ್ನು ನೋಡಿ ತುಂಬಾ ಕಷ್ಟದ ಪರಿಸ್ಥಿತಿಯಲ್ಲೂ ಎದೆಗುಂದದೆ ದೇಶದ ರಕ್ಷಣೆಗೆ ನಿಂತಿರುವ ಯೋಧರಿಗೆ ಎಲ್ಲರು ಸಲಾಂ ಎಂದಿದ್ದಾರೆ. ಸಿಯಾಚಿನ್‍ನಲ್ಲಿ ಇರುವ ತಾಪಮಾನಕ್ಕೆ ಯೋಧರಿಗೆ ನೀಡಿರುವ ಜ್ಯೂಸ್ ಕುಡಿಯುವುದಿರಲಿ ತಿನ್ನಲೂ ಸಾಧ್ಯವಾಗದೆ ಇರುವಷ್ಟು ಗಟ್ಟಿಯಾಗಿ, ಇಟ್ಟಿಗೆ ರೀತಿ ಮಾರ್ಪಟ್ಟಿರುವುದನ್ನ ಯೋಧರು ಜ್ಯೂಸ್ ಪ್ಯಾಕೆಟ್ ಒಡೆದು ತೋರಿಸಿದ್ದಾರೆ. ಹಾಗೆಯೇ ತಿನ್ನಲು ನೀಡಿದ್ದ ಮೊಟ್ಟೆ, ಟೊಮೋಟೊಗಳು ಕಲ್ಲುಗಳಂತಾಗಿದ್ದು, ತಿನ್ನುವುದಿರಲಿ ಸುತ್ತಿಗೆಯಿಂದ ಹೊಡೆದರೂ ಚೂರಾಗದಷ್ಟು ಗಟ್ಟಿಯಾಗಿರುವುದನ್ನ ಮೂವರು ಯೋಧರು ವಿಡಿಯೋದಲ್ಲಿ ತೋರಿಸಿದ್ದಾರೆ. ಅಂತಹ ಸ್ಥಿತಿಯಲ್ಲೂ ನಗುತ್ತಲೇ ತಮ್ಮ ಕಷ್ಟಗಳನ್ನು ಹೇಳುವ ಯೋಧರನ್ನು ನೋಡಿದರೆ ಎಂಥಹ ಕಲ್ಲು ಹೃದಯವಾದರೂ ಕರಗುತ್ತೆ.

ರಾಜನಾಥ್ ಸಿಂಗ್ ಅವರು ನೂತನ ರಕ್ಷಣಾ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಜೂನ್ 3 ರಂದು ಸಿಯಾಚಿನ್ ಬೇಸ್ ಕ್ಯಾಂಪ್‍ಗೆ ಭೇಟಿ ನೀಡಿದ್ದರು. ಆಗ ಯೋಧರ ಜೊತೆ ಮಾತುಕತೆ ನಡೆಸಿದ್ದರು. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ ನೋಡಿ ಇಡೀ ದೇಶವೇ ವೀರ ಯೋಧರಿಗೆ ಸೆಲ್ಯೂಟ್ ಹೊಡೆಯುತ್ತಿದೆ.

ಒಂದೆಡೆ ಕಡಿಮೆ ತಾಪಮಾನದಲ್ಲಿ ಯೋಧರು ದೇಶಕ್ಕಾಗಿ ಕೆಲಸ ಮಾಡುತ್ತಿದ್ದರೆ, ಇನ್ನೊಂದೆಡೆ ಬಿಸಿಲ ಝಳ ಸುಡುತ್ತಿದ್ದರೂ ಹೆದರದೇ ಜನರು ಚೆನ್ನಾಗಿರಬೇಕು ಎಂದು ಬಯಸುವ ಯೋಧರ ಬದುಕು ಇಜಕ್ಕೂ ಕಣ್ಣಂಚಲ್ಲಿ ನೀರು ತರಿಸುತ್ತೆ. ಉತ್ತರ ಭಾರತ ಬಿಸಿಲ ಬೇಗೆಗೆ ತತ್ತರಿಸಿ ಹೋಗಿದ್ದು, ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲೂ ಕೂಡ ಬಿಸಿಲ ಝಳ ಹೆಚ್ಚಿದೆ. ಹೀಗಾಗಿ ಅಲ್ಲಿನ ಜನರಿಗೆ ಮಾತ್ರವಲ್ಲದೇ ಅಲ್ಲಿ ಗಡಿ ಕಾಯುವ ಸೈನಿಕರೂ ಕೂಡ ಬಿಸಿಲಿನ ಧಗೆಗೆ ಹೈರಾಣಾಗಿದ್ದಾರೆ. ಆದರೂ ಪಟ್ಟು ಬಿಡದೆ ದೇಶಕ್ಕಾಗಿ ವೀರಯೋಧರು ಗಡಿ ಕಾಯುತ್ತಿದ್ದು, ಬಿಸಿಲಿನಲ್ಲಿ ಕೆಲಸ ಮಾಡುವುದು ಕಷ್ಟವಾಗಲ್ಲವಾ? ಎಂದು ಕೇಳಿದರೆ, ನಾವು ಯೋಧರು ದೇಶವನ್ನು ಕಾಯುವವರು. ನಾವು ಈ ತಾಪಮಾನಕ್ಕೆಲ್ಲಾ ಹೆದರಲ್ಲ ಎಂದು ಹೇಳಿ ಮನ ಗೆದ್ದಿದ್ದಾರೆ.

ರಾಜಸ್ಥಾನ ಹಾಗೂ ಗುಜರಾತ್‍ನಲ್ಲಿ ಬಿಸಿಲಿನ ಬೇಗೆಗೆ ಜನರು ತತ್ತರಿಸಿ ಹೋಗಿದ್ದಾರೆ. ಈ ರಣ ಬಿಸಿಲಿನಲ್ಲೂ ನಮ್ಮ ಭಾರತೀಯ ಯೋಧರು ಮಾತ್ರ ತಾಪಮಾನಕ್ಕೆ ಹೆದರದೆ, ಬಿಸಿಲನ್ನು ಎದುರಿಸಿಕೊಂಡು ತಮ್ಮ ಕರ್ತವ್ಯ ಮಾಡುತ್ತಿದ್ದಾರೆ. ಸದ್ಯ ರಾಜಸ್ಥಾನದಲ್ಲಿ 46 ಡಿಗ್ರಿ ಸೆಲ್ಸಿಯಸ್‍ಗಿಂತ ಹೆಚ್ಚು ತಾಪಮಾನ ದಾಖಲಾಗಿದೆ. ಅದರಲ್ಲೂ ಇಲ್ಲಿನ ಚುರು ಪ್ರದೇಶದಲ್ಲಿ ಕೆಲವು ದಿನಗಳಿಂದ 50 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

https://twitter.com/thetribunechd/status/1137286704438497280

Share This Article
Leave a Comment

Leave a Reply

Your email address will not be published. Required fields are marked *