ಅಹಮದಾಬಾದ್: 19ನೇ ಆವೃತ್ತಿ ಐಪಿಎಲ್ನ (IPL 2026) ಆರಂಭಿಕ 2 ಪಂದ್ಯಗಳಲ್ಲಿ ಸೋಲು ಕಂಡಿರುವ ಗುಜರಾತ್ ಟೈಟಾನ್ಸ್ (Gujarat Titans) ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಸ್ನಾಯು ಸೆಳೆತದಿಂದ ಬಳಲುತ್ತಿರುವ ತಂಡದ ನಾಯಕ ಶುಭಮನ್ ಗಿಲ್ (Shubman Gill) ಶೀಘ್ರದಲ್ಲೇ ತಂಡವನ್ನ ಸೇರಿಕೊಳ್ತಾರಾ? ಅಥವಾ ಈ ಸೀಸನ್ನಿಂದಲೇ ಹೊರಗುಳಿಯುತ್ತಾರಾ ಅನ್ನೋ ಪ್ರಶ್ನೆ ಎದ್ದಿದೆ.
ಹೌದು. ಶನಿವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಟೈಟಾನ್ಸ್ ಪಡೆ 6 ರನ್ಗಳ ವಿರೋಚಿತ ಸೋಲು ಕಂಡಿತು. ರಶೀದ್ ಖಾನ್ (Rashid Khan) ನಾಯಕತ್ವದಲ್ಲಿ ಕಣಕ್ಕಿಳಿದ ಟೈಟಾನ್ಸ್ ಬ್ಯಾಟಿಂಗ್ನಲ್ಲಿ ಉತ್ತಮ ಆರಂಭ ಪಡೆದರೂ ಮಧ್ಯಮ ಕ್ರಮಾಂಕದ ಬ್ಯಾಟರ್ಗಳ ವೈಫಲ್ಯದಿಂದ ವಿರೋಚಿತ ಸೋಲು ಕಂಡಿತು. ಪಂದ್ಯದ ಬಳಿಕ ಗಿಲ್ ಅಲಭ್ಯತೆ ಬಗ್ಗೆ ಮಾಹಿತಿ ನೀಡಿ ಹಂಗಾಮಿ ನಾಯಕ ರಶೀದ್ ಖಾನ್, ಅವರು ಸ್ನಾಯು ಸೆಳೆತದಿಂದ (Muscle Spasm) ಬಳಲುತ್ತಿದ್ದ ಕಾರಣ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಶೀಘ್ರದಲ್ಲೇ ಅವರು ತಂಡಕ್ಕೆ ಮರಳಲಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ RCB vs CSK ಹಣಾಹಣಿ – ಚಿನ್ನಸ್ವಾಮಿ ಪಿಚ್ ರಿಪೋರ್ಟ್ ಹೇಗಿದೆ?
ಗುಜರಾತ್ ಟೈಟಾನ್ಸ್ ತಂಡವು ಏಪ್ರಿಲ್ 8 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂದಿನ ಪಂದ್ಯವನ್ನಾಡಲಿದೆ. ಅಷ್ಟರಲ್ಲಿ ಗಿಲ್ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಜಿಟಿ ಸಹಾಯ ಕೋಚ್ ಪಾರ್ಥಿವ್ ಪಟೇಲ್ ಕೂಡ ಹೇಳಿದರು. ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿಂದು ಹೈವೋಲ್ಟೇಜ್ ಕದನ – ಆರ್ಸಿಬಿ ಬಲಿಷ್ಠ ಪಡೆಯನ್ನ ಎದುರಿಸಬಲ್ಲದೇ CSK?
ಕಳೆದ ವರ್ಷ ನವೆಂಬರ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿದ್ದ ಟೆಸ್ಟ್ ಪಂದ್ಯದ ವೇಳೆ ಗಿಲ್ ಕುತ್ತಿಗೆ ಉಳುಕಿಸಿಕೊಂಡಿದ್ದರು. ಬಳಿಕ ಗಿಲ್ ಅವರನ್ನ ಸ್ಟ್ರೆಚರ್ ಮೂಲಕ ಅಂಬುಲೆನ್ಸ್ನಲ್ಲಿ ಕರೆದೊಯ್ಯಲಾಗಿತ್ತು. ಐಪಿಎಲ್ಗೆ ಕೆಲ ದಿನಗಳಿರುವಾಗಲೂ ಕುತ್ತಿಗೆ ಸೆಳೆತ ಉಂಟಾಗಿತ್ತು. ಆದ್ರೆ ಸದ್ಯಕ್ಕೆ ಅಷ್ಟೊಂದು ಗಂಭೀರತೆ ಕಾಣಿಸುತ್ತಿಲ್ಲ. ಮುಂಬರುವ ಪಂದ್ಯದ ಹೊತ್ತಿಗೆ ಫಿಟ್ ಆಗುವ ನಿರೀಕ್ಷೆಯಿದೆ ಎಂದಿದ್ದಾರೆ ಪಟೇಲ್.
ಅಬ್ಬರಿಸಿ ಬೊಬ್ಬಿರಿದ ಗಿಲ್ಗೆ ಏನಾಯ್ತು?
2022ರ ವೇಳೆ ಐಪಿಎಲ್ಗೆ ಎಂಟ್ರಿಕೊಟ್ಟ ಗುಜರಾತ್ ಟೈಟಾನ್ಸ್ ತಂಡವನ್ನ ಆರಂಭಿಕ 2 ಆವೃತ್ತಿಗಳಲ್ಲಿ ಹಾರ್ದಿಕ್ ಪಾಂಡ್ಯ ಮುನ್ನಡೆಸಿದ್ದರು. ಟೈಟಾನ್ಸ್ ಚೊಚ್ಚಲ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದರೆ, 2023ರ ತನ್ನ 2ನೇ ಆವೃತ್ತಿಯಲ್ಲಿ ರನ್ನರ್ ಅಪ್ ಪ್ರಶಸ್ತಿ ಗೆದ್ದುಕೊಂಡಿತ್ತು. ಆದ್ರೆ 16ನೇ ಆವೃತ್ತಿಯ ಐಪಿಎಲ್ ಶುಭಮನ್ ಗಿಲ್ ಅವರ ಪಾಲಿಗೆ ಸ್ಮರಣೀಯವಾಗಿತ್ತು. 17 ಪಂದ್ಯಗಳನ್ನಾಡಿದ್ದ ಗಿಲ್ ಒಂದೇ ಆವೃತ್ತಿಯಲ್ಲಿ ಅತಿಹೆಚ್ಚು ವೈಯಕ್ತಿಕ ರನ್ (890) ಗಳಿಸಿದ 2ನೇ ಆಟಗಾರ ಎಂಬ ಖ್ಯಾತಿ ಗಳಿಸಿದ್ದರು. ಆದ್ರೆ 2024ರಲ್ಲಿ ಹಾರ್ದಿಕ್ ಪಾಂಡ್ಯ ಮತ್ತೆ ಮುಂಬೈ ತಂಡವನ್ನ ಸೇರಿಕೊಂಡ ಕಾರಣ, ಶುಭಮನ್ ಗಿಲ್ ಅವರನ್ನೇ ತಂಡಕ್ಕೆ ನಾಯಕನನ್ನಾಗಿ ಮಾಡಲಾಯಿತು.
ಯಾರೂ ಮುರಿಯದ ಸಾರ್ವಕಾಲಿಕ ದಾಖಲೆ
ಐಪಿಎಲ್ನಲ್ಲಿ ಒಂದು ಆವೃತ್ತಿಯಲ್ಲಿ ಅತಿಹೆಚ್ಚು ವೈಯಕ್ತಿಕ ರನ್ ಗಳಿಸಿದ ಸಾರ್ವಕಾಲಿಕ ದಾಖಲೆ ರನ್ ಮಿಷನ್ ಕೊಹ್ಲಿ ಹೆಸರಿನಲ್ಲಿದೆ. 2016ರ ಆವೃತ್ತಿಯಲ್ಲಿ ಒಟ್ಟು 16 ಪಂದ್ಯಗಳನ್ನಾಡಿದ್ದ ಕೊಹ್ಲಿ 4 ಶತಕ, 7 ಅರ್ಧಶತಕಗಳು ಸೇರಿ ಬರೋಬ್ಬರಿ 973 ರನ್ ಗಳಿಸಿದ್ದರು. ಈವರೆಗೆ ಈ ದಾಖಲೆಯನ್ನ ಯಾರೊಬ್ಬರೂ ಮುರಿಯಲು ಸಾಧ್ಯವಾಗಿಲ್ಲ. ಇದನ್ನೂ ಓದಿ: ಶ್ರೇಯಸ್ ಅಯ್ಯರ್ಗೆ 24 ಲಕ್ಷ ದಂಡ – ಪಂಜಾಬ್ ಕ್ಯಾಪ್ಟನ್ಗೆ ಕಾಡ್ತಿದೆ ಬ್ಯಾನ್ ಭೀತಿ




