ಇಲ್ಲಿಂದ ಭೂಮಿಯನ್ನು ನೋಡುವುದೇ ಸೌಭಾಗ್ಯ – ಬಾಹ್ಯಾಕಾಶ ನಿಲ್ದಾಣದಿಂದ ಶುಭಾಂಶು ಮೊದಲ ಸಂದೇಶ!

Public TV
2 Min Read

– ತಲೆ ಭಾರವಾದಂತಿದೆ, ಕೆಲವೇ ದಿನಗಳಲ್ಲಿ ಇದಕ್ಕೆ ಹೊಂದಿಕೊಳ್ಳುತ್ತೇವೆ

ನವದೆಹಲಿ: 140 ಕೋಟಿ ಭಾರತೀಯರ ಕನಸನ್ನು ಹೊತ್ತು ಅಂತರಿಕ್ಷಕ್ಕೆ ತೆರಳಿರುವ ಭಾರತೀಯ ವಾಯುಪಡೆಯ (IAF) ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (International Space Station) ತಲುಪಿದ ಬಳಿಕ ಮೊದಲ ಸಂದೇಶವನ್ನು ಹಂಚಿಕೊಂಡಿದ್ದಾರೆ.

ಬಾಹ್ಯಾಕಾಶ ನಿಲ್ದಾಣ ತಲುಪಿದ ಬಳಿಕ ಮೊದಲ ಬಾರಿಗೆ ಮಾತನಾಡಿರುವ ಶುಕ್ಲಾ (Shubhanshu Shukla), ನಾನು ಈ ಕ್ಷಣಕ್ಕಾಗಿ ಎದುರು ನೋಡುತ್ತಿದ್ದೆ. ನಿಮ್ಮ ಪ್ರೀತಿ, ಆಶೀರ್ವಾದದಿಂದ ಐಎಸ್‌ಎಸ್‌ ತಲುಪಿದ್ದೇನೆ. ಇಲ್ಲಿಂದ ಭೂಮಿಯನ್ನು ನೋಡುವುದೇ ಸೌಭಾಗ್ಯ ಅಂತ ಭಾವುಕರಾಗಿದ್ದಾರೆ. ಇದನ್ನೂ ಓದಿ: ಐತಿಹಾಸಿಕ ಕ್ಷಣಕ್ಕೆ ಭಾರತ ಸಾಕ್ಷಿ – ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಸೇರಿದ ಮೊದಲ ಭಾರತೀಯ ಶುಕ್ಲಾ

ನಾವು ಹೀಗೆ ನಿಂತಿರೋದು ಸುಲಭ ಅಂತಾ ಕಾಣಿಸಬಹುದು. ಆದರೆ ಇದು ಕಷ್ಟಕರ. ತಲೆ ಭಾರವಾದಂತಿದೆ, ಸ್ವಲ್ಪ ಕಷ್ಟವಾಗುತ್ತಿದೆ. ಕೆಲವೇ ದಿನಗಳಲ್ಲಿ ಇದಕ್ಕೆ ಹೊಂದಿಕೊಳ್ಳುತ್ತೇವೆ. ಇದು ಮೊದಲ ಹೆಜ್ಜೆ, ಇನ್ನೂ 14 ದಿನ ನಾವಿಲ್ಲಿರುತ್ತೇವೆ. ಅನೇಕ ವಿಜ್ಞಾನದ ಪ್ರಯೋಗಗಳನ್ನು ಮಾಡಲಿದ್ದೇವೆ. ನಿಮ್ಮೊಂದಿಗೆ ಮಾತನಾಡುತ್ತೇವೆ ಎಂದಿದ್ದಾರೆ ಶುಕ್ಲಾ. ಇದನ್ನೂ ಓದಿ: ಡಾಕಿಂಗ್‌ ನಂತರದ ಪ್ರಕ್ರಿಯೆ ಶುರು – ಸಂಜೆ 6 ಗಂಟೆ ವೇಳೆಗೆ ಬಾಹ್ಯಾಕಾಶ ನಿಲ್ದಾಣದೊಳಕ್ಕೆ ಅಧಿಕೃತ ಎಂಟ್ರಿ

ಇದು ನಮ್ಮ ಅಂತರಿಕ್ಷ ಯಾನದ ಹೆಜ್ಜೆಯೂ ಹೌದು. ಡ್ರಾಗನ್‌ನಲ್ಲಿದ್ದಾಗ ನಿಮ್ಮ‌ಜೊತೆ ಮಾತನಾಡಿದ್ದೆ. ಇಲ್ಲಿಂದ ನಂತರವೂ ಮಾತನಾಡುತ್ತೇನೆ. ಈ ಯಾನವನ್ನು ಅತ್ಯಾಕರ್ಷಕ ಮಾಡೋಣ. ನಾವೆಲ್ಲರೂ ಕೂಡ ಉತ್ಸಾಹದಿಂದ ಭಾಗಿಯಾಗುತ್ತೇವೆ. ನಾನು ತುಂಬಾ ಉತ್ಸಾಹದಿಂದಿದ್ದೇನೆ. ನನ್ನ ತೋಳಿನಲ್ಲಿ ತ್ರಿವರ್ಣ ಧ್ವಜದ ಜೊತೆ ನಡೆಯುತ್ತಿದ್ದೇನೆ, ಮುಂದಿನ 14 ದಿನ ಇನ್ನಷ್ಟು ಆಕರ್ಷಕವಾಗಿರಲಿದೆ. ಜೈ ಹಿಂದ್, ಜೈ ಭಾರತ… ಅಂತ ಶುಕ್ಲಾ ಹೇಳಿದ್ದಾರೆ. ಇದನ್ನೂ ಓದಿ: NASA Axiom-4 Mission | ಸ್ಪೇಸ್‌ ಎಕ್ಸ್‌ ಡ್ರ್ಯಾಗನ್‌ ನೌಕೆ ಡಾಕಿಂಗ್‌ ಯಶಸ್ವಿ

ಶುಕ್ಲಾ ಗಗನಯಾತ್ರಿ ʻ634ʼ
ಇದಕ್ಕೂ ಹ್ಯಾಚ್‌ ತೆರೆಯುತ್ತಿದ್ದಂತೆ ಐಎಸ್‌ಎಸ್‌ನ ಸಿಬ್ಬಂದಿ ಶುಕ್ಲಾ ಸೇರಿದಂತೆ ಇತರ ನಾಲ್ವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಬಳಿಕ ಶುಕ್ಲಾಗೆ ಗಗನಯಾತ್ರಿ ಸಂಖ್ಯೆ-634 ನೀಡಲಾಯಿತು. ಇದನ್ನೂ ಓದಿ: ಚೆನ್ನಾಗಿ ನಿದ್ರೆ ಮಾಡಿದೆ..: ಅಂತರಿಕ್ಷ ಪ್ರಯಾಣದ ಅನುಭವ ಬಿಚ್ಚಿಟ್ಟ ಶುಭಾಂಶು ಶುಕ್ಲಾ

ʻಡ್ರ್ಯಾಗನ್‌ʼ ನೌಕೆ ಡಾಕಿಂಗ್‌ ಪೂರ್ಣ
ಬುಧವಾರ (ಜೂ.25) ಮಧ್ಯಾಹ್ನ 12:03ರ ವೇಳೆಗೆ ಆಕ್ಸಿಯಂ-4 ಮಿಷನ್‌ ಅಡಿಯಲ್ಲಿ (NASA Axiom 4 Mission) ಉಡಾವಣೆ ಆಗಿದ್ದ ಸ್ಪೇಸ್‌ಎಕ್ಸ್‌ನ ʻಡ್ರ್ಯಾಗನ್‌ʼ ನೌಕೆ ಗುರುವಾರ (ಜೂ.26) ಸಂಜೆ 4:01 ಗಂಟೆ ವೇಳೆಗೆ ಯಶಸ್ವಿಯಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಡಾಕ್‌ (ಕೂಡಿಸುವುದು) ಆಯಿತು. ಇದಾದ 2 ಗಂಟೆಗಳ ನಂತರ ಹ್ಯಾಚ್‌ ತೆರೆಯಿತು. ಬಳಿಕ ಶುಕ್ಲಾ (Shubhanshu Shukla) ಸೇರಿ ನಾಲ್ವರು ಗಗನಯಾತ್ರಿಗಳು ಐಎಸ್‌ಎಸ್‌ನೊಳಗೆ ಅಧಿಕೃತವಾಗಿ ಪ್ರವೇಶಿಸುವ ಮೂಲಕ ಹೆಮ್ಮೆಯ ಕ್ಷಣಕ್ಕೆ ಸಾಕ್ಷಿಯಾದರು. ಐಎಸ್‌ಎಸ್‌ ಪ್ರವೇಶಿಸುತ್ತಿದ್ದಂತೆ ನಿಲ್ದಾಣದ ಸಿಬ್ಬಂದಿ ಪರಸ್ಪರ ಅಪ್ಪಿಕೊಂಡು ಬರಮಾಡಿಕೊಂಡರು.

Share This Article