ತವರೂರು ಲಕ್ನೋದಲ್ಲಿ ಶುಭಾಂಶು ಶುಕ್ಲಾಗೆ ಭರ್ಜರಿ ಸ್ವಾಗತ

Public TV
1 Min Read

– 63,000 ವಿದ್ಯಾರ್ಥಿಗಳಿಂದ ವಿಜಯಯಾತ್ರೆ

ಲಕ್ನೋ: ಯಶಸ್ವಿ ಬಾಹ್ಯಾಕಾಶ ಯಾತ್ರೆಯ ನಂತರ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ (Shubanshu Shukla) ಅವರು ಮೊದಲ ಬಾರಿಗೆ ತಮ್ಮ ತವರೂರು ಲಕ್ನೋಗೆ (Lucknow) ಬಂದಿಳಿದಿದ್ದು, ವಿಮಾನ ನಿಲ್ದಾಣದಲ್ಲಿ ಭರ್ಜರಿ ಸ್ವಾಗತ ಮಾಡಿಕೊಳ್ಳಲಾಯಿತು.

ಸೋಮವಾರ ಬೆಳಿಗ್ಗೆ (ಆ.25) ಲಕ್ನೋ ವಿಮಾನ ನಿಲ್ದಾಣದಲ್ಲಿ (Lucknow Airport) ಶುಭಾಂಶು ಶುಕ್ಲಾ ಅವರು ಕಲಿತ ಹಳೆಯ ಶಾಲೆ ಸಿಟಿ ಮಾಂಟೆಸ್ಸರಿಯ (City Montessori) ವಿದ್ಯಾರ್ಥಿಗಳು ಸ್ವಾಗತಿಸಿದರು. ಇದೇ ವೇಳೆ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬ್ರಜೇಶ್ ಪಾಠಕ್ (Brajesh Pathak) ಗೌರಪೂರ್ವಕವಾಗಿ ಸ್ವಾಗತಿಸಿದರು. ನಿಲ್ದಾಣದಲ್ಲಿ ಶುಭಾಂಶು ಕುಟುಂಬಸ್ಥರು ಸೇರಿದಂತೆ ಲಕ್ನೋದ ಜನರು ಸಂಭ್ರಮದಲ್ಲಿ ವಿಜಯ ಘೋಷಣೆಗಳನ್ನು ಕೂಗಿದರು.ಇದನ್ನೂ ಓದಿ: ಒಡಿಶಾ | ಜಲಪಾತದಲ್ಲಿ ರೀಲ್ಸ್ ಮಾಡಲು ಹೋಗಿ ಕೊಚ್ಚಿಹೋದ ಯೂಟ್ಯೂಬರ್

ಬಳಿಕ ಸಿಟಿ ಮಾಂಟೆಸ್ಸರಿ ಶಾಲೆಯ 63,000 ವಿದ್ಯಾರ್ಥಿಗಳು ವಿಮಾನ ನಿಲ್ದಾಣದಿಂದ ಜಿ20 ಚೌಕ್‌ವರೆಗೆ ವಿಜಯಯಾತ್ರೆ ನಡೆಸಿದರು. ಇದೇ ವೇಳೆ ಪತ್ರಿಕಾಗೋಷ್ಠಿಯಲ್ಲಿ ಯುಪಿ ಡಿಸಿಎಂ ಪಾಠಕ್ ಮಾತನಾಡಿ, ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಭಾರತವು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಎತ್ತರಕ್ಕೆ ತಲುಪಿದೆ. ನಮ್ಮೂರಿನ ಹೆಮ್ಮೆಯ ಪುತ್ರನನ್ನು ಸ್ವಾಗತಿಸಲು ನಮಗೆ ನಿಜಕ್ಕೂ ತುಂಬಾ ಹೆಮ್ಮೆ ಎನಿಸುತ್ತದೆ. ಶುಭಾಂಶು ಶುಕ್ಲಾ ಇಡೀ ಜಗತ್ತಿಗೆ ಹೊಸ ಮಾರ್ಗವನ್ನು ತೋರಿಸಿದ್ದಾರೆ. ಈ ಹಿನ್ನೆಲೆ ರಾಜ್ಯ ಸರ್ಕಾರವು ಅವರ ಗೌರವಾರ್ಥವಾಗಿ ರಾಜ್ಯಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಈ ಮೂಲಕ ಶುಭಾಂಶು ಯುವಕರಿಗೆ ಸ್ಫೂರ್ತಿಯಾಗಲಿದ್ದಾರೆ ಎಂದರು.

ರೋಡ್ ಶೋ ವೇಳೆ ವಿದ್ಯಾರ್ಥಿಗಳು ತ್ರಿವರ್ಣ ಧ್ವಜ ಹಾರಿಸುತ್ತಾ ಹೆಮ್ಮೆಯಿಂದ ಘೋಷಣೆ ಕೂಗಿದರು. ಜೊತೆಗೆ ನಗರದಾದ್ಯಂತ ಶುಭಾಂಶು ಅವರ ಪೋಸ್ಟರ್‌ಗಳು ರಾರಾಜಿಸುತ್ತಿದ್ದವು.ಇದನ್ನೂ ಓದಿ: ಬೆಂಗಳೂರು ಟೆಕ್ಕಿಗೆ 2.65 ಲಕ್ಷ ವಂಚನೆ – ಟ್ರಾಫಿಕ್‌ ಫೈನ್‌ ಕಟ್ಟೋ ಮುನ್ನ ಎಚ್ಚರವಾಗಿರಿ

Share This Article