ನಗುಮುಖದಲ್ಲಿ ಕ್ಯಾಪ್ಸುಲ್‌ನಿಂದ ಹೊರಬಂದು ಕೈಬೀಸಿದ ಶುಭಾಂಶು ಶುಕ್ಲಾ

Public TV
2 Min Read

ಕ್ಯಾಲಿಫೋರ್ನಿಯಾ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು (ISS) ಯಶಸ್ವಿಯಾಗಿ ತಲುಪಿ ಇತಿಹಾಸ ಸೃಷ್ಟಿಸಿರುವ ಭಾರತೀಯ ಗಗನಯಾತ್ರಿ, ಐಎಎಫ್ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ (Shubanshu Shukla) ಸೇರಿ ನಾಲ್ವರು ಗಗನಯಾತ್ರಿಗಳು ಭೂಮಿಗೆ ವಾಪಸ್ ಆಗಿದ್ದಾರೆ. ನಗುಮುಖದಲ್ಲಿ ಕ್ಯಾಪ್ಸುಲ್‌ನಿಂದ ಹೊರಬಂದು ಶುಭಾಂಶು ಶುಕ್ಲಾ ಕೈಬೀಸಿದರು.

ಇಂದು ಭಾರತೀಯ ಕಾಲಮಾನ ಮಧ್ಯಾಹ್ನ 3ಕ್ಕೆ ಕ್ಯಾಲಿಫೋರ್ನಿಯಾ (California) ಕರಾವಳಿಯಲ್ಲಿ ಯಶಸ್ವಿಯಾಗಿ ಸ್ಪ್ಯಾಷ್‌ ಡೌನ್ ಮಾಡಲಾಯಿತು. ಬಳಿಕ ಕ್ಯಾಪ್ಸುಲ್‌ ಸುರಕ್ಷಿತವಾಗಿದೆಯೇ ಎಂದು ಪರಿಶೀಲಿಸಿದ ಬಳಿಕ ಕೆಳಗಡೆ ಇರುವ ಬಾಗಿಲು(ಹ್ಯಾಚ್) ತೆರೆಯಲಾಯಿತು. ಈ ಬಾಗಿಲಿನ ಮೂಲಕ ಯಾನಿಗಳನ್ನು ಸ್ಪೇಸ್ ಎಕ್ಸ್ ಸಿಬ್ಬಂದಿ ಹೊರಗೆ ನಿಧಾನವಾಗಿ ಎಳೆದು ಕೈಹಿಡಿದು ಕರೆದುಕೊಂಡು ಹೋದರು. ಈ ವೇಳೆ ಎರಡನೇಯದಾಗಿ ಹೊರಬಂದ ಶುಭಾಂಶು ಶುಕ್ಲಾ ನಗುಮುಖದಿಂದ ಕೈಬೀಸಿ ಸಂತೋಷ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಭುವಿಗೆ ಶುಭಾಂಶು ಶುಕ್ಲಾ – ಕ್ಯಾಲಿಫೋರ್ನಿಯಾ ಕಡಲ ತೀರದಲ್ಲಿ ಸ್ಪ್ಲ್ಯಾಷ್‌ ಡೌನ್

ಕ್ಯಾಪ್ಸುಲ್‌ನಿಂದ ಹೊರಬಂದ ಬಳಿಕ ವೈದ್ಯಕೀಯ ತಪಾಸಣೆ ಮಾಡಿ ಕ್ವಾರಂಟೈನ್ ಮಾಡಲಾಗುತ್ತದೆ. ಸಾಮಾನ್ಯವಾಗಿ ಗಗನಯಾತ್ರಿಗಳಿಗೆ ಭೂಮಿಯ ಗುರುತ್ವಾಕರ್ಷಣೆಗೆ ಹೊಂದಿಕೊಳ್ಳಲು 7 ದಿನಗಳ ವಿಶ್ರಾಂತಿಯ ಅವಶ್ಯಕತೆಯಿರುತ್ತದೆ. ಇನ್ನೂ ಯಶಸ್ವಿ ಲ್ಯಾಂಡಿಂಗ್ ಬಳಿಕ ಶುಭಾಂಶು ಶುಕ್ಲಾ ಕುಟುಂಬಸ್ಥರು ಸಂಭ್ರಮಿಸಿದ್ದಾರೆ.

ಪ್ರಕ್ರಿಯೆ ಹೇಗಿತ್ತು?
ಸೋಮವಾರ (ಜು.14) ಭಾರತೀಯ ಕಾಲಮಾನ ಮಧ್ಯಾಹ್ನ 2:30ಕ್ಕೆ ಡ್ರ್ಯಾಗನ್‌ ಕ್ಯಾಪ್ಸುಲ್ ಪ್ರವೇಶಿಸಿ, ಸಂಜೆ 4:35ಕ್ಕೆ ಅನ್‌ಡಾಕಿಂಗ್ (ಬೇರ್ಪಡಿಸುವಿಕೆ) ಪ್ರಕ್ರಿಯೆ ಯಶಸ್ವಿಯಾಗಿತ್ತು. ಒಟ್ಟು 22.5 ಗಂಟೆಗಳ ಪ್ರಯಾಣ ಬಳಿಕ ಇಂದು ಮಧ್ಯಾಹ್ನ 3ಕ್ಕೆ ಪೆಸಿಫಿಕ್ ಮಹಾಸಾಗರದ ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ 4 ಪ್ಯಾರಾಚೂಟ್‌ಗಳು ಕ್ಯಾಪ್ಸುಲ್ ವೇಗವನ್ನು ತಗ್ಗಿಸಿತ್ತು. ಯಶಸ್ವಿ ಸ್ಪ್ಯಾಷ್‌ ಡೌನ್ ಬಳಿಕ ಸುರಕ್ಷಿತವಾಗಿ ಶುಭಾಂಶು ಶುಕ್ಲಾ ಹಾಗೂ ಇನ್ನುಳಿದ ಮೂವರು ಗಗನಯಾತ್ರಿಗಳು ಭೂಮಿಗೆ ಬಂದಿಳಿದಿದ್ದಾರೆ.

ನಾಲ್ವರು ಗಗನಯಾತ್ರಿಗಳು ಭೂಮಿಗೆ ಮರಳುವ ಮುನ್ನ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಭಾವನಾತ್ಮಕ ಬೀಳ್ಕೊಡುಗೆ ಸಿಕ್ಕಿತು. ಶುಭಾಂಶು ಶುಕ್ಲಾ ಸಾರೇ ಜಹಾನ್ ಸೆ ಅಚ್ಚಾ ಎಂದು ಬಾಹ್ಯಾಕಾಶದಲ್ಲಿ ಭಾರತವನ್ನು ಭಾವನಾತ್ಮಕವಾಗಿ ಹೊಗಳಿದರು. ಈ ವೇಳೆ ರಾಕೇಶ್ ಶರ್ಮಾ 41 ವರ್ಷಗಳ ಹಿಂದೆ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಸಮಯವನ್ನು ನೆನಪಿಸಿಕೊಂಡು, ಅಲ್ಲಿಂದ ಭಾರತ ಹೇಗೆ ಕಾಣುತ್ತದೆ ಎಂದು ವಿವರಿಸಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಭಾರತದ ಧ್ವಜ ಹಾರಿಸುವ ಮೂಲಕ ಭಾರತಕ್ಕೆ ಹೆಮ್ಮೆ ತಂದ ಶುಭಾಂಶು ಶುಕ್ಲಾ ಸ್ವಾಗತಿಸಲು ಭಾರತೀಯರು ಉತ್ಸುಕರಾಗಿದ್ದಾರೆ.

ಜೂ.25ರಂದು ಆಕ್ಸಿಯಂ-4 ಮಿಷನ್ ಮೂಲಕ ಭಾರತದ ಶುಭಾಂಶು ಶುಕ್ಲಾ, ಅಮೆರಿಕ ಮಹಿಳಾ ಗಗನಯಾತ್ರಿ ಪೆಗ್ಗಿ ವಿಟ್ಸನ್, ಹಂಗೇರಿಯ ಟಿಬೋರ್ ಕಾಪು ಹಾಗೂ ಪೋಲೆಂಡ್ ಗಗನಯಾತ್ರಿ ಸ್ಲಾವೋಸ್ಜ್ ಉಜ್ನಾನ್‌ಸ್ಕಿ ನಾಲ್ವರು ಗಗನಯಾತ್ರಿಗಳು ಅಂತರಿಕ್ಷ ಯಾನಕ್ಕೆ ತೆರಳಿದ್ದರು. ಬಾಹ್ಯಾಕಾಶದಲ್ಲಿ 18 ದಿನಗಳ ಕಾಲ ಉಳಿದು ಹಲವಾರು ವೈಜ್ಞಾನಿಕ ಪ್ರಯೋಗಗಳನ್ನು ಮಾಡಿದ್ದರು.ಇದನ್ನೂ ಓದಿ: ಫೋಟೋ ತೆಗೆಯುವ ನೆಪದಲ್ಲಿ ಪತಿಯನ್ನ ಪತ್ನಿ ನದಿಗೆ ತಳ್ಳಿದ ಆರೋಪ ಕೇಸ್‌ – ಪರಸ್ಪರ ವಿಚ್ಛೇದನಕ್ಕೆ ಮುಂದಾದ ದಂಪತಿ

Share This Article