ಶೃತಿ ಪ್ರಕಾಶ್ ‘ಫಿದಾ’ ಪ್ರಸಂಗ!

Public TV
1 Min Read

– ಬಿಗ್ ಬಾಸ್ ಬೆಡಗಿಯ ಎರಡನೇ ಚಿತ್ರ!

ಬೆಂಗಳೂರು: ಬಿಗ್‍ಬಾಸ್ ಶೋನಲ್ಲಿನ ಸಹಜವಾದ ವರ್ತನೆಯಿಂದಲೇ ಪ್ರೇಕ್ಷಕರ ಪ್ರೀತಿ ಗಳಿಸಿಕೊಂಡವರು ಶೃತಿ ಪ್ರಕಾಶ್. ಅದೊಂದು ಸ್ಪರ್ಧೆ ಎಂಬುದರಾಚೆಗೂ ಸಾದಾ ಸೀದಾ ಹುಡುಗಿಯಂತಿದ್ದ ಶೃತಿ ಕನ್ನಡ ಚಿತ್ರಗಳಲ್ಲೇ ಮಿಂಚುವಂತಾಗಲೆಂದು ಪ್ರೇಕ್ಷಕರು ಹಾರೈಸಿದ್ದರು. ಅದೀಗ ಫಲ ನೀಡಿದಂತಿದೆ. ಶೃತಿ ಕೈತುಂಬಾ ಅವಕಾಶಗಳೊಂದಿಗೆ ಕನ್ನಡದಲ್ಲಿಯೇ ನೆಲೆ ನಿಲ್ಲುವ ಸನ್ನಾಹದಲ್ಲಿದ್ದಾರೆ!

ಶೃತಿ ಪ್ರಕಾಶ್ ನಟಿಸಿರುವ ಪ್ರಥಮ ಕನ್ನಡದ ಚಿತ್ರ ಲಂಡನ್‍ನಲ್ಲಿ ಲಂಬೋದರ. ತಿಂಗಳಿಂದೀಚೆಗೆ ಬಿಡುವಿರದೆ ಈಕೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಆ ಚಿತ್ರವೀಗ ಸಂಪೂರ್ಣವಾಗಿ ಚಿತ್ರೀಕರಣವನ್ನು ಮುಗಿಸಿಕೊಂಡಿದೆ. ಹಾಸ್ಯದೊಂದಿಗೇ ಗಂಭೀರವಾದ ಕಥಾ ಹಂದರ ಹೊಂದಿರೋ ಈ ಚಿತ್ರ ತನಗೆ ಕನ್ನಡದಲ್ಲೊಂದು ಬ್ರೇಕ್ ನೀಡುತ್ತದೆ ಎಂಬ ಭರವಸೆಯ ನಿರೀಕ್ಷೆ ಹೊಂದಿರೋ ಶೃತಿಗೀಗ ಡಬಲ್ ಸಂಭ್ರಮ ಕೈ ಹಿಡಿದಿದೆ!

ಲಂಡನ್ನಿನಲ್ಲಿ ಲಂಬೋದರ ಚಿತ್ರದ ಚಿತ್ರೀಕರಣ ಮುಗಿಯುತ್ತಲೇ ಅವರು ಮತ್ತೊಂದು ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ತಯಾರಾಗಿದ್ದಾರೆ. ರಾಮ್ ವಿನಯ್ ಗೌಡ ನಿರ್ದೇಶನ ಮಾಡಲಿರೋ ಈ ಚಿತ್ರಕ್ಕೆ ‘ಫಿದಾ’ ಎಂಬ ನಾಮಕರಣವೂ ಆಗಿದೆ. ಈ ಚಿತ್ರದ ಕಥೆಗೆ ಒಂದೇ ಗುಕ್ಕಿನಲ್ಲಿ ಫಿದಾ ಆದ ನಂತವೇ ಶೃತಿ ಇದನ್ನು ಒಪ್ಪಿಕೊಂಡಿದ್ದಾರಂತೆ. ಇದನ್ನೂ ಓದಿ: ಆಲೂಗಡ್ಡೆ ಮೇಲೆ ಆಟೋಗ್ರಾಫ್ ಕೊಟ್ಟ ಬಿಗ್ ಬಾಸ್ ಬೆಡಗಿ

ರಾಮ್ ವಿನಯ್ ಗೌಡ ಈ ಕಥೆಯನ್ನು ನೈಜ ಘಟನೆಯೊಂದನ್ನು ಆಧಾರವಾಗಿಟ್ಟುಕೊಂಡು ಹೊಸೆದಿದ್ದಾರಂತೆ. 2009ರಲ್ಲಿ ಮೈಸೂರಿನಲ್ಲಿ ನಡೆದೊಂದು ಘಟನೆ ರಾಜ್ಯದ ತುಂಬಾ ಸದ್ದು ಮಾಡಿತ್ತು. ಅದಕ್ಕೆ ಸಿನಿಮಾ ಸ್ಪರ್ಶ ನೀಡಿ ಈ ಕಥೆಯನ್ನು ರೆಡಿ ಮಾಡಲಾಗಿದೆಯಂತೆ. ಲಂಡನ್ ನಲ್ಲಿ ಲಂಬೋದರ ಚಿತ್ರದ ಶೂಟಿಂಗಿನಲ್ಲಿದ್ದಾಗಲೇ ಈ ಕಥೆ ಕೇಳಿದ್ದ ಶೃತಿ ಮರು ಮಾತಿಲ್ಲದೆ ಒಪ್ಪಿಕೊಂಡಿದ್ದರಂತೆ.

ಇದೀಗ ತಮ್ಮ ಮೊದಲ ಚಿತ್ರದ ಚಿತ್ರೀಕರಣ ಕಂಪ್ಲೀಟಾದ ನಂತರ ಕೊಂಚವೂ ಗ್ಯಾಪು ಕೊಡದೆ ಶೃತಿ ಫಿದಾ ಚಿತ್ರದಲ್ಲಿ ನಟಿಸಲು ತಯಾರಾಗಿದ್ದಾರೆ. ಈ ಮೂಲಕ ಇದುವರೆಗೂ ಹಿಂದಿ ಸೀರಿಯಲ್ಲುಗಳ ಮೂಲಕ, ಹಾಡುಗಳ ಮೂಲಕ ಪ್ರಸಿದ್ಧಿ ಗಳಿಸಿದ್ದ ಅವರು ಕನ್ನಡದಲ್ಲಿ ಬ್ಯುಸಿಯಾಗೋ ಎಲ್ಲ ಲಕ್ಷಣಗಳೂ ಗೋಚರಿಸಿವೆ.

Share This Article
Leave a Comment

Leave a Reply

Your email address will not be published. Required fields are marked *