ʻಪಡ್ಡೆಹುಲಿʼಯಾಗಿ ಪ್ರೇಕ್ಷಕರನ್ನೆಲ್ಲ ಸೆಳೆದುಕೊಂಡಿರುವ ಶ್ರೇಯಸ್ ಮಂಜು (Shreyas Manju) ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಅದಕ್ಕೆ ಉಡುಗೊರೆ ಎಂಬಂತೆ ʻದಿಲ್ದಾರ್ʼ (Dildar Movie Kannada) ಚಿತ್ರತಂಡ ಬರ್ತ್ಡೇ ಟೀಸರ್ ಬಿಡುಗಡೆಗೊಳಿಸಿದೆ.
ಆರಂಭದಿಂದಲೂ ಆಕ್ಷನ್ ಲುಕ್ಕಲ್ಲಿ ಮಿಂಚುತ್ತಾ ಬಂದಿರುವ ಶ್ರೇಯಸ್ ಮಂಜು, ಈ ಟೀಸರ್ನಲ್ಲಿ ಮತ್ತೊಂದು ಮಟ್ಟದ ಆಕ್ಷನ್ ಅವತಾರದಲ್ಲಿ ವಿಜೃಂಭಿಸಿದ್ದಾರೆ. ಈ ಟೀಸರ್ಗೀಗ ಸೋಷಿಯಲ್ ಮೀಡಿಯಾದಲ್ಲಿ (Social Media) ಮೆಚ್ಚುಗೆ ವ್ಯಕ್ತವಾಗ್ತಿದೆ.
ʻದಿಲ್ದಾರ್ʼ ಮಧು ಗೌಡ ಗಂಗೂರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ಇದೀಗ ಬಹತೇಕ ಕೆಲಸ ಕಾರ್ಯಗಳನ್ನ ಮುಗಿಸಿಕೊಂಡು ಬಿಡುಗಡೆಯ ಸನ್ನಾಹದಲ್ಲಿದೆ. ಈ ಸಿನಿಮಾ ಇವತ್ತಿನ ಹೊಸ ತಲೆಮಾರಿಗೆ ನೇರಾನೇರ ಹೊಂದಿಕೆಯಾಗುವಂಥಾ ವಿಶಿಷ್ಟ ಕಥೆಯನ್ನೊಳಗೊಂಡಿದೆ ಎಂಬುದು ನಿರ್ದೇಶಕರ ಮಾತು. ಈ ಬರ್ತ್ಡೇ ಟೀಸರ್ ಮೂಲಕ ಒಟ್ಟಾರೆ ಸಿನಿಮಾ ಮೂಡಿ ಬಂದಿರುವ ರೀತಿ ಮತ್ತು ನಾಯಕ ಶ್ರೇಯಸ್ ಮಂಜು ಅವರ ಖಡಕ್ ಲುಕ್ ಸ್ಪಷ್ಟವಾಗಿಯೇ ಅನಾವರಣಗೊಂಡಿದೆ.
ಏನ್ಷಿಯೆಂಟ್ ಮೂವೀಸ್ ಬ್ಯಾನರ್ನಡಿಯಲ್ಲಿ ಡಾ.ಆರ್ ಸಂತೋಷ್ ಕುಮಾರ್ (SVT) ದಿಲ್ದಾರ್ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ನಟ ಶರಣ್ ಅವರ ತಂಗಿ ಮಗಳಾದ ಕೀರ್ತಿ ಕೃಷ್ಣ ಈ ಚಿತ್ರದ ಮೂಲಕವೇ ನಾಯಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಸಾಧು ಕೋಕಿಲಾ, ಚಂದ್ರಪ್ರಭ, ಕಾರ್ತಿಕ್, ಚಿಲ್ಲರ್ ಮಂಜು ಮುಂತಾದ ಹಾಸ್ಯ ನಟರ ದಂಡೇ ಈ ಚಿತ್ರದಲ್ಲಿದೆ. ಕೆಜಿಎಫ್ ಖ್ಯಾತಿಯ ಆಂಡ್ರೋ ಅವಿನಾಶ್, ಭಜರಂಗಿ ಲೋಕಿ, ಅರ್ಪಿತ್ ಖಳ ನಟರಾಗಿ ಅಬ್ಬರಿಸಿದ್ದಾರೆ. ಈಗಾಲೇ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳನ್ನು ಮುಗಿಸಿಕೊಂಡಿರುವ ಚಿತ್ರತಂಡ, ಶೀಘ್ರದಲ್ಲಿಯೇ ಬಿಡುಗಡೆ ದಿನಾಂಕವನ್ನು ಅನಾವರಣಗೊಳಿಸಲಿದೆ.


