ಮೆಟ್ರೋ ಸೇತುವೆ ಕೆಳಗೆ 300 ಬಡ ಮಕ್ಕಳಿಗೆ ಅಂಗಡಿ ಮಾಲೀಕ ಪಾಠ

Public TV
2 Min Read

ನವದೆಹಲಿ: ದಿನಸಿ ಅಂಗಡಿ ಮಾಲೀಕರೊಬ್ಬರು ಸರ್ಕಾರ ಅಥವಾ ಯಾವುದೇ ಸಂಘ-ಸಂಸ್ಥೆಯ ನೆರವಿಲ್ಲದೆ, ಕಳೆದ 13 ವರ್ಷಗಳಿಂದ 300 ಬಡ ಮಕ್ಕಳಿಗಾಗಿ ಉಚಿತ ಶಾಲೆ ನಡೆಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ಉತ್ತರಪ್ರದೇಶ ಮೂಲದ ರಾಜೇಶ್ ಅವರು ದೆಹಲಿಯಲ್ಲಿ ದಿನಸಿ ಅಂಗಡಿ ಇಟ್ಟುಕೊಂಡಿದ್ದಾರೆ. ಆದರೆ ಇವರು ಯಮುನಾ ನದಿ ತಟದಲ್ಲಿರುವ ಮೆಟ್ರೋ ರೈಲು ಸೇತುವೆ ಕೆಳಗೆ ಬಡ ಮಕ್ಕಳಿಗಾಗಿ ಉಚಿತ ಶಾಲೆ ನಡೆಸುತ್ತಿದ್ದಾರೆ. ರಾಜೇಶ್ ಅವರು ಕಳೆದ 13 ವರ್ಷದಿಂದ ಈ ಉಚಿತ ಶಾಲೆಯನ್ನು ನಡೆಸಿಕೊಂಡು ಬಂದಿದ್ದಾರೆ. ಯಮುನಾ ತಟದಲ್ಲಿ ಜೋಪಡಿಗಳನ್ನು ಹಾಕಿಕೊಂಡು ಜೀವನ ಸಾಗಿಸುತ್ತಿರುವ ಬಡ ಕುಟುಂಬಗಳು ಹೊತ್ತು ಊಟಕ್ಕಾಗಿ ಕೂಲಿ ಮಾಡಿಕೊಂಡು ಕಷ್ಟ ಪಡುತ್ತಾರೆ. ಹೀಗಿರುವಾಗ ಇಲ್ಲಿನ ಮಕ್ಕಳಿಗೆ ಶಿಕ್ಷಣ ನೀಡೋದು ಬಡ ಪೋಷಕರಿಗೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ಬಡ ಮಕ್ಕಳಿಗೂ ಶಿಕ್ಷಣ ಸಿಗಲಿ ಎಂಬ ಉದ್ದೇಶದಿಂದ ರಾಜೇಶ್ ಈ ಶಾಲೆ ನಡೆಸುತ್ತಿದ್ದಾರೆ.

ಬೆಳಗ್ಗೆ 9 ರಿಂದ 11 ಮತ್ತು ಮಧ್ಯಾಹ್ನ 2 ರಿಂದ 4.30 ರವರೆಗೆ ಎರಡು ಪಾಳಿಯಲ್ಲಿ ಮಕ್ಕಳಿಗೆ ರಾಜೇಶ್ ಅವರು ಪಾಠ ಹೇಳಿಕೊಡುತ್ತಾರೆ. ಇವರ ನಿಸ್ವಾರ್ಥ ಸೇವೆಯನ್ನು ಮೆಚ್ಚಿ ಅಕ್ಕ-ಪಕ್ಕದಲ್ಲಿ ವಾಸವಾಗಿರೋ ಏಳು ಮಂದಿ ಶಿಕ್ಷಕರು ತಮ್ಮ ಬಿಡುವಿನ ವೇಳೆಯಲ್ಲಿ ಈ ಶಾಲೆಗೆ ಬಂದು ಪಾಠ ಹೇಳಿಕೊಡುತ್ತಿದ್ದಾರೆ.

ಇದೊಂದು ಓಪನ್ ಹೌಸ್ ಸ್ಕೂಲ್ ಆಗಿದ್ದು, ಮೆಟ್ರೋ ಸೇತುವೆಯೇ ಇದಕ್ಕೆ ಸೂರಾಗಿದೆ. ಮೆಟ್ರೋ ಕಾಂಪ್ಲೆಕ್ಸ್‌ನ ಗೋಡೆಗೆ ಕಪ್ಪು ಬಣ್ಣ ಬಳಿದು ಅದನ್ನೇ ಬರೆಯುವ ಬೋರ್ಡ್ ಮಾಡಲಾಗಿದೆ. ನೆಲದ ಮೇಲೆ ಕಾರ್ಪೆಟ್ ಹಾಕಿ ಅದರ ಮೇಲೆ ಮಕ್ಕಳನ್ನು ಕೂರಿಸಿ ಇಲ್ಲಿ ಪಾಠ ಮಾಡಲಾಗುತ್ತದೆ. ಅಲ್ಲದೆ ಈ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಹೆಚ್ಚಿಗೆ ಓದುವ ಆಸೆ ಇದ್ದರೆ, ಅವರನ್ನು ರಾಜೇಶ್ ಅವರು ಸರ್ಕಾರಿ ಶಾಲೆಗೆ ಸೇರಿಸುತ್ತಾರೆ. ಅವರು ಹೆಚ್ಚಿನ ಶಿಕ್ಷಣ ಪಡೆಯಲು ಸಹಾಯ ಮಾಡುತ್ತಾರೆ.

ಅಲ್ಲದೆ ಈ ಶಾಲೆ ಬಗ್ಗೆ ತಿಳಿದ ಕೆಲ ಎನ್‍ಜಿಒ ಹಾಗೂ ಸಾರ್ವಜನಿಕರು ಶಾಲೆಗೆ ನೆರವು ನೀಡಲು ಬರುತ್ತಾರೆ. ಅವರಿಗೆ ನೀವು ಹಣಕ್ಕಿಂತ ಮಕ್ಕಳಿಗೆ ಆಹಾರ, ಅಗತ್ಯ ಪಠ್ಯಪುಸ್ತಕಗಳನ್ನು ನೀಡಿ ಸಹಾಯ ಮಾಡಿ ಎಂದು ಹೇಳುತ್ತಾರೆ. ಜೊತೆಗೆ ಹಲವರು ಇಲ್ಲಿಗೆ ಭೇಟಿ ನೀಡಿ ತಮ್ಮ ಹುಟ್ಟುಹಬ್ಬವನ್ನು ಶಾಲೆಯ ಮಕ್ಕಳ ಜೊತೆ ಆಚರಿಸಿಕೊಂಡು ಖುಷಿಪಡುತ್ತಾರೆ. ಇನ್ನು ಕೆಲವರು ಹಾಗೆ ಸುಮ್ಮನೆ ಬಂದು ಮಕ್ಕಳ ಜೊತೆ ಬೆರೆದು ಸಮಯ ಕಳೆಯುತ್ತಾರೆ.

2006ರಿಂದ ರಾಜೇಶ್ ಅವರು ಈ ಶಾಲೆಯನ್ನು ನಡೆಸುತ್ತಿದ್ದಾರೆ. ಶಾಲೆಯಲ್ಲಿ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ನೀಡಿ ಸಹಾಯ ಮಾಡುತ್ತಿದ್ದಾರೆ. ಅಲ್ಲದೆ ಈ ಬಡ ಮಕ್ಕಳಿಗೂ ಉತ್ತಮ ಜೀವನ ನಡೆಸುವ ಹಕ್ಕಿದೆ. ಶಿಕ್ಷಣದಿಂದ ಈ ಮಕ್ಕಳು ಮುಂದೆ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತೆ. ಆದ್ದರಿಂದ ಶಾಲೆಯ ಸುತ್ತಮುತ್ತಲು ಇರುವ ಬಡ ಕುಟುಂಬಗಳ ಮಕ್ಕಳಿಗೆ ಓದುವ ಆಸಕ್ತಿಯಿದ್ದರೆ ಅವರನ್ನು ಕರೆದುಕೊಂಡು ಬಂದು ಪಾಠ ಮಾಡಲಾಗುತ್ತದೆ. ಇದರಿಂದ ಮುಂದೆ ಈ ಮಕ್ಕಳು ಸಾಮಾಜದಲ್ಲಿ ಉತ್ತಮ ಜೀವನ ನಡೆಸಲು ನೆರವಾಗುತ್ತೆದೆ ಎಂದು ರಾಜೇಶ್ ಶಾಲೆ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *