ಬೆಂಗಳೂರು: ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾರ ರಾಜಕೀಯ ಜೀವನ ಅಂತ್ಯವಾಯ್ತಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಿಂದಾಗಿಯೇ ರಮ್ಯಾ ಅವರಿಗೆ ಬೆಂಗಳೂರು ಮತ್ತು ಮಂಡ್ಯಕ್ಕೆ ಬರಲು ಆಗುತ್ತಿಲ್ಲ ಎಂದು ಆಪ್ತರ ಬಳಿ ಅಳಲು ತೋಡಿಕೊಂಡಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.
ಈ ಹಿಂದೆ ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ರಮ್ಯಾ, 2013ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ವಿರುದ್ಧ ಸೋಲನ್ನಪ್ಪಿದ್ದರು. ಸೋಲಿನ ಬಳಿಕ ಕಾಂಗ್ರೆಸ್ ರಮ್ಯಾರಿಗೆ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯ ಹುದ್ದೆಯನ್ನು ನೀಡಿತ್ತು. ಈಗ ರಾಜ್ಯದಲ್ಲಿ ರಮ್ಯಾ ಪ್ರತಿನಿಧಿಸಿದ್ದ ಕ್ಷೇತ್ರವನ್ನು ಪಕ್ಷ ಜೆಡಿಎಸ್ ಗೆ ಬಿಟ್ಟುಕೊಟ್ಟಿದೆ. ಜೆಡಿಎಸ್ ನಿಂದಾಗಿ ನನ್ನ ಕ್ಷೇತ್ರ ಪರರ ಪಾಲಾಗಿದೆ ಎಂದು ರಮ್ಯಾ ಅಸಮಾಧಾನ ಹೊರಹಾಕಿದ್ದಾರಂತೆ.
2019ರ ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಮಂಡ್ಯ ಕ್ಷೇತ್ರವನ್ನು ಮತ್ತೆ ಜೆಡಿಎಸ್ ಗೆ ಬಿಟ್ಟುಕೊಡುವ ಸಾಧ್ಯತೆಗಳು ಹೆಚ್ಚಿವೆ. ಈ ಹಿನ್ನೆಲೆಯಲ್ಲಿ ರಮ್ಯಾ ತಮ್ಮ ಗಮನವನ್ನು ಬೆಂಗಳೂರು ಉತ್ತರ ಕ್ಷೇತ್ರ ಬಿಟ್ಟುಕೊಡುವಂತೆ ಪಕ್ಷದ ಹಿರಿಯರಲ್ಲಿ ಮನವಿ ಮಾಡಿಕೊಂಡಿದ್ದಾರಂತೆ. ಇತ್ತ ಜೆಡಿಎಸ್ ಬೆಂಗಳೂರು ಉತ್ತರ ಕ್ಷೇತ್ರದ ಮೇಲೆಯೂ ಕಣ್ಣು ಹಾಕಿದೆ. ಹೀಗಾಗಿ ಬೆಂಗಳೂರು ಉತ್ತರ ಕ್ಷೇತ್ರವೂ ರಮ್ಯಾರ ಕೈ ತಪ್ಪುವ ಸಾಧ್ಯತೆಗಳು ಹೆಚ್ಚಿವೆ.
ಬೆಂಗಳೂರು ಉತ್ತರದಲ್ಲಿ ಒಕ್ಕಲಿಗರು ದೊಡ್ಡ ಪ್ರಮಾಣದಲ್ಲಿದ್ದು, ಬೆಂಗಳೂರು ಕೇಂದ್ರದಲ್ಲಿ ಅಲ್ಪ ಸಂಖ್ಯಾತ ಸಮುದಾಯದವರು ನಿರ್ಣಾಯಕ ಪ್ರಮಾಣದಲ್ಲಿರುವ ಕಾರಣ ತಮ್ಮ ಗೆಲುವಿಗೆ ಪೂರಕವಾಗಬಹುದು ಎಂದು ರಮ್ಯ ಲೆಕ್ಕಾಚಾರ ಮಾಡಿದ್ದಾರೆ ಎನ್ನಲಾಗುತ್ತಿದೆ.
2014ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಸಚಿವ ಡಿವಿ ಸದಾನಂದ ಗೌಡ ಅವರು ಜಯಗಳಿಸಿದ್ದರು. ಈ ಬಾರಿ ಡಿವಿಎಸ್ ಕ್ಷೇತ್ರ ಬದಲಾವಣೆ ಮಾಡಿ ಸಂಸದೆ ಶೋಭಾ ಕರಂದ್ಲಾಜೆ ಆಯ್ಕೆಯಾಗಿರುವ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಾರೆ ಎನ್ನುವ ಸುದ್ದಿ ಕೆಲ ದಿನಗಳಿಂದ ಹರಿದಾಡುತ್ತಿದೆ. ಒಂದು ವೇಳೆ ರಮ್ಯಾ ಬೆಂಗಳೂರು ಉತ್ತರದಿಂದ ಕಣಕ್ಕಿಳಿದ್ರೆ ಬಿಜೆಪಿ ಶೋಭಾ ಕರಂದ್ಲಾಜೆ ಅವರನ್ನು ಎದುರಾಳಿಯಾಗಿ ನಿಲ್ಲಿಸಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ಬಾರಿಯ ಮಂಡ್ಯ ಉಪಚುನಾವಣೆಗೆ ಜೆಡಿಎಸ್ ನಿಂದ ಶಿವರಾಮೇಗೌಡರು ಸ್ಪರ್ಧೆ ಮಾಡಿದ್ದಾರೆ. 2019ರಲ್ಲಿ ಮಂಡ್ಯದಲ್ಲಿ ಮೈತ್ರಿ ರಚನೆ ಆಗದೇ ಇದ್ದರೆ ರಮ್ಯಾರ ವಿರುದ್ಧ ಲಕ್ಷ್ಮಿ ಅಶ್ವಿನ್ ಗೌಡ ಸ್ಪರ್ಧಿಸೋದು ಬಹುತೇಕ ಖಚಿತ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv