ಮತಾಂತರ ಕಾಯ್ದೆ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ: ಶೋಭಾ ಕರಂದ್ಲಾಜೆ

Public TV
2 Min Read

ಬೆಳಗಾವಿ: ಬೆಳಗಾವಿ ಅಧಿವೇಶನದಲ್ಲಿ ಮತಾಂತರ ಕಾಯ್ದೆ ವಿಚಾರವಾಗಿ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕೇಂದ್ರ ಕೃಷಿ ಇಲಾಖೆ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

Bommai

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಅಧಿವೇಶನದಲ್ಲಿ ಮತಾಂತರ ಕಾಯ್ದೆ ವಿಚಾರವಾಗಿ ಸರ್ಕಾರ ಒಂದು ನಿರ್ಧಾರ ತೆಗೆದುಕೊಳ್ಳುತ್ತದೆ. ಮಂಗಳೂರು ಆತ್ಮಹತ್ಯೆ, ಲವ್ ಜಿಹಾದಿ ಪ್ರಕರಣಗಳ ನಂತರ, ದೇಶದಲ್ಲಿ ಮತಾಂತರ ಕಾಯ್ದೆ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ಎಲ್ಲ ಜಾತಿ ವರ್ಗದ ಜನರನ್ನು ಅವರ ಬಡತನ, ಅನಾರೋಗ್ಯ ಸಂದರ್ಭ ಮುಂದಿಟ್ಟುಕೊಂಡು ಮತಾಂತರಗೊಳಿಸುವುದು ನಡೆಯುತ್ತಿದೆ. ಇದರ ಬಗ್ಗೆ ಸರ್ಕಾರ ಗಂಭೀರವಾಗಿ ಯೋಚನೆ ಮಾಡಬೇಕು ಎಂದರು. ಇದನ್ನೂ ಓದಿ: ಬಡತನಕ್ಕೆ, ಆಸೆ ಆಮಿಷಕ್ಕೆ ಮತಾಂತರ ಆಗೋದು ತಪ್ಪು : ಬೊಮ್ಮಾಯಿ

ಸಾಮಾಜಿಕ ಅಸಮತೋಲನೆ ನಿರ್ಮಾಣ ಆಗಬಾರದು. ನಮ್ಮ ಬಡತನ ನಮ್ಮ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಳ್ಳಲು ಯಾರಿಗೂ ಅವಕಾಶ ಕೊಡಬಾರದು. ನಾವು ಕೂಡ ಸಮಾಜದ ಎಲ್ಲ ವರ್ಗದ ಜನರ ಅಭಿವೃದ್ಧಿ ಬಗ್ಗೆ ಯೋಚನೆ ಮಾಡಬೇಕು. ಯಾವ ಕಾರಣಕ್ಕೆ ಧರ್ಮವನ್ನು ಬಿಟ್ಟು ಹೋಗೋದಕ್ಕೆ ಸಾಧ್ಯವಾಗಿದೆ. ಇದಕ್ಕೆ ಜಾತಿ ಕಾರಣವೋ, ಆರೋಗ್ಯ ಕಾರಣವೋ, ಆರ್ಥಿಕ ಪರಿಸ್ಥಿತ ಕಾರಣವೋ, ಸಾಮಾಜಿಕ ಅಡತಡೆಗಳು ಕಾರಣವೋ ಎನ್ನುವುದನ್ನು ಪ್ರಾಮಾಣಿಕವಾಗಿ ಅಧ್ಯಯನ ಮಾಡಬೇಕು. ಸೂಕ್ತವಾದ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಮತಾಂತರ ಕಾಯ್ದೆಗೆ ಕಾಂಗ್ರೆಸ್ ವಿರೋಧಿಸುತ್ತಿರುವ ವಿಚಾರ ಕುರಿತಂತೆ ಮಾತನಾಡಿದ ಅವರು, ನಾನು ಕೇಂದ್ರ ಸಚಿವೆಯಾಗಿ ಈ ಬಗ್ಗೆ ಹೆಚ್ಚು ಮಾತಾಡಲ್ಲ. ಆದರೆ, ನಾನೇ ಕಂಡಂತೆ, ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಬಾಂಗ್ಲಾ ದೇಶದಿಂದ ಬರುವ ಮಕ್ಕಳನ್ನು ಇಲ್ಲಿಗೆ ತಂದು ರಕ್ಷಣೆ ಮಾಡಲಾಗುತ್ತದೆ. ಅವರಿಗೆ ವೋಟರ್ ಐಡಿ ಕೊಟ್ಟು ಮುಂದೆ ಅವರನ್ನು ಮತದಾರರನ್ನಾ ಮಾಡುತ್ತಿದ್ದಾರೆ. ಈ ಬಗ್ಗೆ ತನಿಖೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಈ ಮಾನಸಿಕತೆ ಇರುವುದು ಕಾಂಗ್ರೆಸ್‍ನಲ್ಲಿ ಮಾತ್ರ. ಜಾತಿ ಹಾಗೂ ಧರ್ಮದ ಆಧಾರದಲ್ಲಿ ಪರ್ಮನೆಂಟ್ ಆಗಿ ಅಧಿಕಾರದಲ್ಲಿ ಇರಬಹುದು ಎನ್ನುವುದು ಕಾಂಗ್ರೆಸ್ ಮಾನಸಿಕತೆ. ಈ ಬಗ್ಗೆ ಡಿಕೆ ಶಿವಕುಮಾರ್ ಚರ್ಚೆ ಮಾಡದೇ ಇರುವುದು ಒಳ್ಳೆಯದು. ಅವರ ಪಕ್ಷ ನಿಂತಿದ್ದೆ ಇದೇ ಆಧಾರದಲ್ಲಿ. ಜಾತಿ, ಧರ್ಮ, ಒಂದು ವರ್ಗ ಓಲೈಸಿ ಅಧಿಕಾರ ಪಡೆಯುವುದು ಅಲ್ಲ ಎಂದು ಮೋದಿ ಅವರು ಎರಡು ಚುನಾವಣೆಯಲ್ಲಿ ತೋರಿಸಿಕೊಟ್ಟಿದ್ದಾರೆ. ಇದನ್ನೂ ಓದಿ: ಎಷ್ಟೋ ಜನ ಮುಸ್ಲಿಮರು ಲಿಂಗಾಯತರಾದ್ರು, ನಾವೇನಾದ್ರೂ ಮಾತಾಡಿದ್ವಾ: ಸಿ.ಎಂ ಇಬ್ರಾಹಿಂ

ರಾವತ್ ಸಾವಿಗೆ ವಿಕೃತ ಮನಸ್ಸುಗಳ ಸಂಭ್ರಮಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮ್ಮ ದೇಶದ ಸಿಡಿಎಸ್ ರಾವತ್ ಅವರು ನಿಧನರಾದ ಸಂದರ್ಭದಲ್ಲಿ ಕೆಲವು ವಿಕೃತ ಮನಸ್ಸುಗಳು ಸಂಭ್ರಮಿಸಿದ್ದಾರೆ. ಅವರು ವಿಕೃತ ಮನಸ್ಸುಗಳಲ್ಲ, ದೇಶದ್ರೋಹಿಗಳು. ಈ ಬಗ್ಗೆ ಕೇಂದ್ರ ಸರ್ಕಾರದ ಗೃಹ ಇಲಾಖೆ ಮತ್ತು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಇಂಥವರಿಗೆ ಕಠಿಣವಾದ ಶಿಕ್ಷೆಯನ್ನು ಕೊಡಬೇಕು ಅನ್ನುವುದು ನಮ್ಮೆಲ್ಲರ ಆಗ್ರಹ ಹಾಗೂ ದೇಶದ ಜನರ ಆಗ್ರಹವಾಗಿದೆ. ಇದರಲ್ಲೇನು ರಾಜಕೀಯವಿಲ್ಲ. ಕೆಲವರು ದೇಶಕ್ಕಾಗಿ ವಿರೋಧ ಮಾಡುವವರು ವಿರೋಧಿಗಳಾಗಿಯೇ ಇರುತ್ತಾರೆ. ಅಂತವರಿಗೆ ಪಕ್ಷ ಇಲ್ಲ, ಪಂಗಡ ಇಲ್ಲ, ಜಾತಿ ಇಲ್ಲ, ಪಂಥ ಇಲ್ಲ. ಅಂಥವರ ಮೇಲೆ ಉಗ್ರ ಕ್ರಮಕೈಗೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬದ್ಧವಾಗಿದೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *