ಕಲಬುರಗಿ: ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನದ ಕುರಿತು ನಡೆಯುತ್ತಿರುವ ಗೊಂದಲಗಳನ್ನು ನೋಡಿದರೆ, ಆ ಪಕ್ಷಕ್ಕೆ ಅಸಲಿ ಹೈಕಮಾಂಡ್ ಯಾರು ಎನ್ನುವುದೇ ತಿಳಿಯುತ್ತಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಲೇವಡಿ ಮಾಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ಭಿನ್ನಾಭಿಪ್ರಾಯಗಳನ್ನು ಉಲ್ಲೇಖಿಸಿ ತೀವ್ರ ವಾಗ್ದಾಳಿ ನಡೆಸಿದರು. ಒಂದೆಡೆ ಸಿದ್ದರಾಮಯ್ಯ ಅವರು ತಾವೇ ಐದು ವರ್ಷ ಸಿಎಂ ಆಗಿ ಮುಂದುವರಿಯುವುದಾಗಿ ಹೇಳುತ್ತಾ, ತಾನೇ ಹೈಕಮಾಂಡ್ ಎಂಬಂತೆ ವರ್ತಿಸುತ್ತಿದ್ದಾರೆ. ಮತ್ತೊಂದೆಡೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲಿ ಈಗಾಗಲೇ ನಿರ್ಧಾರವಾಗಿದೆ. ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆ ಸೂತ್ರವಿದೆ ಎನ್ನುತ್ತಾರೆ. ಹೈಕಮಾಂಡ್ ಸ್ಥಾನದಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾತ್ರ ಈ ಗೊಂದಲಗಳನ್ನು ರಾಜ್ಯದಲ್ಲಿಯೇ ಬಗೆಹರಿಸಿಕೊಳ್ಳಿ ಎಂದು ಜಾರಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ರಾಜ್ಯದಲ್ಲಿ ನಾಯಕತ್ವ ಗೊಂದಲ ಹೈಕಮಾಂಡ್ ಸೃಷ್ಟಿಸಿಲ್ಲ, ಅವ್ರೇ ಮಾಡಿಕೊಂಡಿದ್ದಾರೆ: ಖರ್ಗೆ ಗರಂ
ರಾಹುಲ್ ಗಾಂಧಿ ವಿರುದ್ಧ ಟೀಕೆ
ರಾಹುಲ್ ಗಾಂಧಿ ಅವರ ವಿರುದ್ಧವೂ ಕಿಡಿಕಾರಿದ ಶೋಭಾ ಕರಂದ್ಲಾಜೆ ಅವರು, ರಾಹುಲ್ ಗಾಂಧಿ ಅವರಿಗೆ ಇಂತಹ ಗೊಂದಲಗಳನ್ನು ಬಗೆಹರಿಸಲು ಪುರುಸೊತ್ತಿಲ್ಲ. ಅವರು ವಿದೇಶಗಳಲ್ಲಿ ನಿಂತು ದೇಶವಿರೋಧಿ ಕೆಲಸ ಮಾಡುವುದರಲ್ಲೇ ಬ್ಯುಸಿಯಾಗಿದ್ದಾರೆ. ಇದರಿಂದಾಗಿ ರಾಜ್ಯ ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ಯಾರು ಎಂಬ ಪ್ರಶ್ನೆ ಬಲವಾಗಿ ಕಾಡುತ್ತಿದೆ ಎಂದರು.
ಒಂದು ವೇಳೆ ಸಿದ್ದರಾಮಯ್ಯ ಅವರನ್ನೇ ಅಂತಿಮ ನಾಯಕ ಎಂದು ಘೋಷಿಸಿದರೆ ಅವರೇ ಎಲ್ಲಾ ನಿರ್ಣಯಗಳನ್ನು ಕೈಗೊಳ್ಳುತ್ತಾರೆ. ಅಲ್ಲಿಯವರೆಗೆ ಈ ಗೊಂದಲಗಳು ಮುಂದುವರಿಯಲಿವೆ ಎಂದು ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು. ಇದನ್ನೂ ಓದಿ: ರಾಹುಲ್ ಗಾಂಧಿಗೆ ಕೆ.ಎನ್.ರಾಜಣ್ಣ ಪತ್ರ – ಸಿಎಂ ಸಿದ್ದರಾಮಯ್ಯ ಪರ ಬ್ಯಾಟಿಂಗ್

