ಚಪ್ಪಾಳೆ ಗಿಟ್ಟಿಸಿಸೋದಕ್ಕೆ ಸಿಎಂಗೆ ಟಾಂಗ್ ಕೊಟ್ಟು ದರ್ಶನ್ ನಗೆಪಾಟಲಿಗೀಡಾದ್ರು-ಶಿವರಾಮೇಗೌಡ

Public TV
2 Min Read

– ಕೋಡಿಹಳ್ಳಿ ಹೇಳಿಕೆಗೆ ಸಮರ್ಥನೆ
– ರಾಜಕೀಯಕ್ಕೆ ಬರುವವರಲ್ಲಿ ಮನವಿ
– ಚುನಾವಣೆಯಲ್ಲಿ ಸಿನಿಮಾ ರೀತಿ ಪ್ರಚಾರ

ಬೆಂಗಳೂರು: ಸಾಲಮನ್ನಾ ಬೇಡ, ಬೆಂಬಲ ಬೆಲೆ ನೀಡಿ ಎಂಬ ನಟ ದರ್ಶನ್ ಹೇಳಿಕೆಗೆ ಇದೀಗ ಸಾಕಷ್ಟುಪರ-ವಿರೋಧಗಳು ವ್ಯಕ್ತವಾಗುತ್ತಿವೆ. ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್ ಸಹ ದರ್ಶನ್ ಹೇಳಿಕೆಯನ್ನು ಖಂಡಿಸಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಂಡ್ಯ ಸಂಸದ ಶಿವರಾಮೇಗೌಡರು, ಚಪ್ಪಾಳೆ ಗಿಟ್ಟಿಸಿಕೊಳ್ಳೋದಕ್ಕಾಗಿ ಸಿಎಂಗೆ ಟಾಂಗ್ ಕೊಟ್ಟು ದರ್ಶನ್ ನಗೆಪಾಟಲಿಗೀಡಾದ್ರು ಎಂದು ವ್ಯಂಗ್ಯವಾಡಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿದೆ ಎಂದು ಇಡೀ ರಾಜ್ಯದ ರೈತ ಮುಖಂಡರ ಪರವಾಗಿ ಕೋಡಿಹಳ್ಳಿ ಚಂದ್ರಶೇಖರ್ ಕೇಳುತ್ತಿದ್ದಾರೆ. ಆದ್ದರಿಂದ ಸಿನಿಮಾ ನಟರು ಕಾಲೇಜಿಗೆ ಹೋದರೆ ಕಾಲೇಜಿನ ವಿಚಾರವನ್ನು ಮಾತನಾಡಬೇಕು. ಸುಮ್ಮನೆ ಚಪ್ಪಾಳೆ ಗಿಟ್ಟಿಸಿಸೋದಕ್ಕೆ ಸಿಎಂಗೆ ಟಾಂಗ್ ಕೊಡುವ ರೀತಿ ಬಣ್ಣದ ಬದುಕಿನೋರು ಮಾತನಾಡಿದ್ದು ನಗೆಪಾಟಲಿಗೀಡಾಗುತ್ತದೆ ಎಂದರು. ಇದನ್ನೂ ಓದಿ: ದರ್ಶನ್ ಹೇಳಿಕೆಗೆ ಕೋಡಿಹಳ್ಳಿ ಚಂದ್ರಶೇಖರ್ ಕೆಂಡಾಮಂಡಲ

ದರ್ಶನ್ ಸೇರಿದಂತೆ ರಾಜಕೀಯಕ್ಕೆ ಬರಬೇಕು ಅಂದುಕೊಂಡವರ ಬಳಿ ನನ್ನದೊಂದು ಮನವಿ, ಮೊದಲಿಗೆ ಸಿನಿಮಾ ಬಿಟ್ಟು ರಾಜಕೀಯಕ್ಕೆ ಬರಲಿ. ನಂತರ ಹಳ್ಳಿಗಳ ಜನರ ಮಧ್ಯೆ ಬೆರೆಯಲಿ. ಚುನಾವಣೆಗೆ ನಿಂತು ಗೆದ್ದು, ರೈತರ ಕಷ್ಟ-ಸುಖ ಅರ್ಥ ಮಾಡಿಕೊಂಡು ಬಳಿಕ ರೈತರ ಕಷ್ಟ ಏನು ಎಂದು ಹೇಳಬೇಕು ಎಂದಿದ್ದಾರೆ. ಅದು ಬಿಟ್ಟು ಸಿನಿಮಾ ಮಾಡಿಕೊಂಡು ಸಿನಿಮಾ ಡೈಲಾಗ್ ಹೊಡೆಯುತ್ತಾರೆ. ಸಿಎಂ ಕುಮಾರಸ್ವಾಮಿ ಮತ್ತು ಅವರ ಇಡೀ ಕುಟುಂಬ ರೈತರಿಗೆ ಏನು ಮಾಡಬೇಕೆಂದು ಗೊತ್ತಿದೆ ಎಂದು ತಿರುಗೇಟು ನೀಡಿದರು.

ಕುಮಾರಸ್ವಾಮಿಯವರ ಹಿಂದೆ ಮಾಜಿ ಪ್ರಧಾನಿ ದೇವೇಗೌಡರಿದ್ದಾರೆ. ಮಾಜಿ ಪ್ರಧಾನಿಗಳು ರೈತರಿಗೆ ಯಾವ ರೀತಿ ಸಹಾಯ ಮಾಡಬೇಕು, ಯಾವ ಯೋಜನೆಗಳನ್ನು ರೂಪಿಸಬೇಕು ಎಂಬುದರ ಬಗ್ಗೆ ಅಧ್ಯಯನ ಮಾಡಿದ್ದಾರೆ. ಕೇವಲ ಸಾಲಮನ್ನಾ ಮಾಡಿದರೆ ಮಾತ್ರ ರೈತರು ಉದ್ಧಾರ ಆಗಲ್ಲ. ಕಳೆದ ಕೆಲವು ವರ್ಷಗಳಿಂದ ಬರಗಾಲ ಮತ್ತು ಸಾಲದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಸಿಎಂ ಕುಮಾರಸ್ವಾಮಿ ಅವರು ಸಾಲಮನ್ನಾ ಮಾಡಿದ್ದಾರೆ ಎಂದು ಶಿವರಾಮೇಗೌಡರು ತಿಳಿಸಿದರು.

ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾಗ ಇವರೆಲ್ಲರೂ ಎಲ್ಲಿ ಹೋಗಿದ್ದರು. ಕುಮಾರಸ್ವಾಮಿ ಪ್ರತಿಯೊಬ್ಬರ ಮನೆಗೂ ಹೋಗಿ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಸಾಲಮನ್ನಾ ಮಾಡುವುದರ ಜೊತೆ ಬೆಂಬಲ ಬೆಲೆಯನ್ನು ಕೊಡುತ್ತಿದ್ದಾರೆ. ಇವರೆಲ್ಲರು ಚುನಾವಣೆಯಲ್ಲಿ ಸಿನಿಮಾ ರೀತಿ ಪ್ರಚಾರ ಮಾಡಿದ್ದಾರೆ. ಅಲ್ಲಿ ರೈತರ ಪರವಾಗಿ ಮಾತನಾಡಿದರೆ ನಡೆಯುತ್ತದೆ ಎಂದು ತಿಳಿದುಕೊಂಡಿದ್ದು, ಅದೇ ರೀತಿ ಸಿಎಂಗೆ ಟಾಂಗ್ ಕೊಟ್ಟಿದ್ದಾರೆ ಎಂದು ಗರಂ ಆದರು.

ನಾವು ಮಾತನಾಡಿದರೆ ರಾಜಕೀಯ ಅಂತಾರೆ. ಆದರೆ ಚಂದ್ರಶೇಖರ್ ಅವರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ. ಮುಖಂಡರಾಗಿ ಸತತ 30 ವರ್ಷಗಳಿಂದ ರೈತರ ಪರವಾಗಿ ಹೋರಾಟ ಮಾಡುತ್ತಿದ್ದಾರೆ. ಹೀಗಾಗಿ ಅವರು ಹೇಳಿರುವುದು ಸರಿಯಾಗಿದೆ. ಜೋಡಿ ಎತ್ತುಗಳು ರಾಜಕೀಯವಾಗಿ ಮಾತನಾಡುವ ಮೊದಲು ಅವರಿಗೆ ರಾಜಕೀಯ ಗೊತ್ತಿರಬೇಕು. ರಾಜಕೀಯ ಬೇರೆ, ಸಿನಿಮಾ ಬೇರೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *