ಐವರಲ್ಲಿ ಒಬ್ಬನು ಇಲ್ಲ ಅಂದ್ರೂ ನೋವಾಗುತ್ತೆ: ಶಿವಣ್ಣ

Public TV
2 Min Read

– ತಮ್ಮನಿಗೆ ದನಿಯಾಗಲು ಕಷ್ಟವಾಯ್ತು

ಇಂದು ನಡೆದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕೊನೆಯ ಸಿನಿಮಾ ‘ಜೇಮ್ಸ್’ ಸಿನಿಮಾದ ಪ್ರೀ-ರಿಲೀಸ್ ಈವೆಂಟ್ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ಹಿರಿಯ ನಟ ಶಿವರಾಜ್‍ಕುಮಾರ್ ಅಪ್ಪುನನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

ವೇದಿಕೆ ಮೇಲೆ ಜೇಮ್ಸ್ ಚಿತ್ರತಂಡಕ್ಕೆ ಶುಭಹಾರೈಸಿ ಮಾತನಾಡಿದ ಅವರು, ಅಪ್ಪುವಿನ ಪ್ರೇಮದ ಕಾಣಿಕೆಯಿಂದ ಹಿಡಿದು ಇಲ್ಲಿವರೆಗೂ ನಾವು ಅವನ ಸಿನಿಮಾ ನೋಡಿ ಪ್ರೋತ್ಸಾಹವನ್ನು ಮಾಡಿಕೊಂಡು ಬಂದಿದ್ದೇವೆ. ಇವತ್ತು ರಾಘು ಮಾತನಾಡಿದ್ದು, ತುಂಬಾ ದುಃಖವಾಯಿತು. ಇವರೆಲ್ಲ ನನಗಿಂತ ಚಿಕ್ಕವರು. ನಮ್ಮ ಕುಟುಂಬದಲ್ಲಿ ಏನೇ ಆಗಿದ್ದರೂ ನಾನೇ ಅದನ್ನು ನೋಡಬೇಕು. ರಾಘುಗೆ ಈ ರೀತಿ ಆಗಿರುವುದು, ಅಪ್ಪು ಅಗಲಿರುವುದನ್ನು ನೋಡಿ ನಾನು ಯಾವ ರೀತಿಯಾಗಿರಬೇಕು ಹೇಳಿ ಎಂದು ದುಃಖದಿಂದ ಮಾತನಾಡಿದರು. ಇದನ್ನೂ ಓದಿ: ಭಾವುಕರಾಗಿ ಕಾರ್ಯಕ್ರಮ ಶುರು ಮಾಡಿದ ಅನುಶ್ರೀ

ನೋಡುವುದಕ್ಕೆ ನಗುತ್ತಾ ಇರುತ್ತೇವೆ, ಶೂಟಿಂಗ್ ಮಾಡುತ್ತೇವೆ. ಎಲ್ಲ ಕೆಲಸಗಳನ್ನು ದುಃಖ ಇಟ್ಟುಕೊಂಡೇ ಮಾಡಬೇಕು. ಏನೂ ಮಾಡುವುದಕ್ಕೆ ಆಗುವುದಿಲ್ಲ. ನೋವು ಆಗುತ್ತೆ. ಏಕೆಂದರೆ ಅಪ್ಪು ನಮಗೆಲ್ಲರಿಗೂ ಅಷ್ಟು ಮುದ್ದು ಮಗ. ಲಕ್ಷ್ಮಿ, ಪೂರ್ಣಿಮಾ, ನಾವೂ ಒಟ್ಟಿಗೆ ಬೆಳೆದಿದ್ದೇವೆ. ಐವರಲ್ಲಿ ಒಬ್ಬನೂ ಇಲ್ಲ ಅಂದ್ರೆ ತುಂಬಾ ದುಃಖವಾಗುತ್ತೆ. ಈ ರೀತಿ ಸಮಯ ಬರುತ್ತೆ ಎಂದು ನನಗೆ ತಿಳಿದಿರಲಿಲ್ಲ. ಅಪ್ಪಾಜಿ-ಅಮ್ಮ ಸಾವನ್ನಪ್ಪಿದಾಗಲೂ ಅವರು 100 ವರ್ಷ ಬದುಕಬೇಕು ಎಂದುಕೊಂಡಿದ್ದೆ ಎಂದರು.

ಪ್ರತಿಯೊಬ್ಬರಿಗೂ ಅವರವರ ಅಪ್ಪ-ಅಮ್ಮ ನೂರು ವರ್ಷ ಇರಬೇಕು ಎಂದುಕೊಳ್ಳುತ್ತಾರೆ. ಅವರು ಹೋಗುತ್ತಾರೆ, ಚಿಕ್ಕವನೂ ಹೋಗುತ್ತಾನೆ ಎಂದರೆ ದುಃಖವಾಗುತ್ತೆ. ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ಇಂಡಿಯಾದಲ್ಲಿ ಅಪ್ಪು ಸಾವಿಗೆ ಕಣ್ಣೀರಿಟ್ಟಿದ್ದಾರೆ. ಕಳೆದ ವಾರ ಕೃಷ್ಣಗಿರಿಯಲ್ಲಿ ಶೂಟಿಂಗ್‍ಗಾಗಿ ಹೋಗಿದ್ದು, ಆಗ ಅಲ್ಲಿರುವ ಹಳ್ಳಿ ಜನರು ಬಂದು ಅಪ್ಪು ಬಗ್ಗೆ ಮಾತನಾಡುವುದನ್ನು ಕಂಡು ಇವನ ಬಗ್ಗೆ ಅವರಿಗಿದ್ದ ಪ್ರೀತಿ ತುಂಬಾ ಖುಷಿಯಾಗುತ್ತೆ. ಈ ರೀತಿ ತಮ್ಮನನ್ನು ಪಡೆದಿದ್ದಕ್ಕೆ ನನಗೆ ಪುಣ್ಯ ಎಂದರು.

ನಟನೆ ಬಿಟ್ಟು, ಮನುಷ್ಯತ್ವ ಎಂಬುದನ್ನು ಅಪ್ಪುವಿನಲ್ಲಿ ಹೆಚ್ಚು ಜನರು ನೋಡಿದ್ದಾರೆ. ಅಲ್ಲದೆ ಈ ಸಿನಿಮಾಗೆ ಅಪ್ಪುಗೆ ದನಿಯಾಗಿ ಎಂದು ನಿರ್ದೇಶಕರು ಕೇಳಿಕೊಂಡರು. ಈ ವೇಳೆ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತಿದ್ದಂತೆ ನನಗೆ ದುಃಖವಾಗುತ್ತೆ. ಯಾವ ನಟನಿಗೂ ಬೇರೆ ನಾಯಕರಿಗೆ ಧ್ವನಿ ಕೊಡಲು ಸಾಧ್ಯವಾಗಲ್ಲ. ಆದರಲ್ಲಿಯೂ ಅಪ್ಪುಗೆ ಧ್ವನಿಕೊಡಲು ಸ್ವಲ್ಪ ಕಷ್ಟವಾಗುತ್ತಿತ್ತು. ಅದರಲ್ಲಿಯೂ ನನ್ನ ತಮ್ಮನಿಗೆ ದನಿಯಾಗಲು ಸ್ವಲ್ಪ ಕಷ್ಟವಾಗುತ್ತಿತ್ತು ಎಂದು ತಿಳಿಸಿದರು. ಇದನ್ನೂ ಓದಿ: ನಾನು ಅವನನ್ನು ಹುಡುಕಿಕೊಂಡು ಹೋಗುತ್ತೇನೆ: ವೇದಿಕೆಯಲ್ಲಿ ರಾಘಣ್ಣ ಭಾವುಕ ಮಾತು

ಈ ರೀತಿ ಸಮಯ ಬಂತು ಎಂದು ನೆನೆದರೆ ತುಂಬಾ ದುಃಖವಾಗುತ್ತಿದೆ. ಅಲ್ಲದೇ ಈ ಸಿನಿಮಾದಲ್ಲಿ ನಾನು ಅಪ್ಪು ಜೊತೆಗೆ ನಟಿಸಿದ್ದೇವೆ. ಈ ರೀತಿ ನಟಿಸಬೇಕು ಎಂದು ಅಪ್ಪುಗೆ 3-4 ವರ್ಷಗಳಿಂದ ಇಷ್ಟವಿತ್ತು. ನಾವು ನಟಿಸಬೇಕು ಎಂದು 2 -3 ಕಥೆಗಳನ್ನು ಕೇಳಿದ್ದೇವು. ಆದರೆ ಅದು ನೆರವೇರಲಿಲ್ಲ ಎಂದು ದುಃಖಿತರಾಗಿದರು.

Share This Article
Leave a Comment

Leave a Reply

Your email address will not be published. Required fields are marked *