ಶಿವರಾಜ್‌ಕುಮಾರ್‌ ನಟನೆಯ ಡ್ಯಾಡ್ ಚಿತ್ರಕ್ಕೆ ಚಾಲನೆ

Public TV
2 Min Read

ಶಿವರಾಜ್‌ಕುಮಾರ್‌ (Shivaraj Kumar ಅಭಿನಯದ ಡ್ಯಾಡ್ (DAD) ಚಿತ್ರದ ಮುಹೂರ್ತ ಸಮಾರಂಭ ಸೋಮವಾರ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ (Mysuru Chamundi Hill) ನಂದಿ ದೇವಸ್ಥಾನದಲ್ಲಿ (Nandi Temple) ನೆರವೇರಿತು. ಗೀತಾ ಶಿವರಾಜಕುಮಾರ್ ಅವರು ಚಿತ್ರದ ಮೊದಲ ದೃಶ್ಯಕ್ಕೆ ಆರಂಭ ಫಲಕ ತೋರಿ, ಚಿತ್ರತಂಡಕ್ಕೆ ಶುಭ ಕೋರಿದರು.

ಸುಮಾರು 32 ವರ್ಷಗಳ ಹಿಂದೆ ಶಿವರಾಜ್‌ಕುಮಾರ್‌ ಅಭಿನಯದ ‘ಜಗ ಮೆಚ್ಚಿದ ಹುಡುಗ’ ಚಿತ್ರ ಸಹ ಮೈಸೂರಿನ ಚಾಮುಂಡಿ ಬೆಟ್ಟದ ಬೃಹತ್ ನಂದಿ ವಿಗ್ರಹದ ಎದುರು ಶುರುವಾಗಿತ್ತು. ಈಗ ಅದೇ ನಂದಿ ದೇವಸ್ಥಾನದಲ್ಲಿ ಶಿವಣ್ಣ ಅಭಿನಯದ ಹೊಸ ಚಿತ್ರ ʼಡ್ಯಾಡ್ʼ ಚಿತ್ರಕ್ಕೆ ಚಾಲನೆ ಸಿಕ್ಕಿರುವುದು ವಿಶೇಷ.

ಈ ಹಿಂದೆ ‘ಭಗವಂತ್ ಕೇಸರಿ’, ‘ಉಗ್ರಂ’, ‘ಟಕ್ ಜಗದೀಶ್’ ಮುಂತಾದ ತೆಲುಗು ಚಿತ್ರಗಳನ್ನು ನಿರ್ಮಿಸಿದ್ದ ಹರೀಶ್ ಪೆದ್ದಿ, ಈ ಚಿತ್ರವನ್ನು ಮೈರಾ ಕ್ರಿಯೇಷನ್ಸ್ ಲಾಂಛನದಡಿ ನಿರ್ಮಿಸುತ್ತಿದ್ದಾರೆ. ಇನ್ನು ತೆಲುಗಿನಲ್ಲಿ ‘ಅಸಾಧ್ಯುಡು’, ‘ಮಿಸ್ಟರ್ ನೂಕಯ್ಯ’ ಮತ್ತು ‘ಹಿಡಿಂಬ’ ಚಿತ್ರಗಳನ್ನು ನಿರ್ದೇಶಿಸಿರುವ ಅನಿಲ್ ಕನ್ನೆಗಂಟಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇದನ್ನೂ ಓದಿ: ಒಂದೇ ತಿಂಗಳಲ್ಲಿ ಬರೋಬ್ಬರಿ 18 ಕೆಜಿ ತೂಕ ಇಳಿಸಿಕೊಂಡ ಹನಿ ಸಿಂಗ್

ನಿರ್ಮಾಪಕರಿಗೆ ಹಾಗೂ, ನಿರ್ದೇಶಕರಿಗೆ ಇದು ಕನ್ನಡದಲ್ಲಿ ಮೊದಲ ಚಿತ್ರ. ‘ಶಿವಣ್ಣ 131’ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಬಿ.ಎಸ್. ಸುಧೀಂದ್ರ ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದೊಂದು ತಂದೆ ಸೆಂಟಿಮೆಂಟ್ ಚಿತ್ರವಾಗಿದ್ದು, ಸಾಕಷ್ಟು ಥ್ರಿಲ್ಲಿಂಗ್ ಅಂಶಗಳು ಇರಲಿವೆ. ಶಿವರಾಜ್‌ಕುಮಾರ್‌ ಈ ಚಿತ್ರದಲ್ಲಿ ವೈದ್ಯನ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ‘ಗಡಿಬಿಡಿ ಕೃಷ್ಣ’ ಚಿತ್ರದಲ್ಲಿ ವೈದ್ಯರಾಗಿ ಕಾಣಿಸಿಕೊಂಡಿದ್ದ ಶಿವರಾಜ್‌ಕುಮಾರ್‌ ಸುಮಾರು 27 ವರ್ಷಗಳ ನಂತರ ಪುನಃ ಈ ಚಿತ್ರದಲ್ಲಿ ವೈದ್ಯರಾಗಿ ಅಭಿನಯಿಸುತ್ತಿದ್ದಾರೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ಸುಮಾರು 50 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ.

‘ಡ್ಯಾಡ್’ ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ, ಬೇಬಿ ನಕ್ಷತ್ರ, ಬಾಬು, ಮಲಯಾಳಂ ನಟ ಸೂರಜ್ ವೆಂಜರಮೂಡು ಮುಂತಾದವರು ನಟಿಸುತ್ತಿದ್ದಾರೆ. ಕನ್ನಡ, ತೆಲುಗು ಮತ್ತು ಮಲಯಾಳಂನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನವಿದೆ. ತೆಲುಗಿನ ‘ಆರೆಂಜ್’, ‘ಆರ್ಯ 2’ ಮುಂತಾದ ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದ ಬಿ.ರಾಜಶೇಖರ್ ಈ ಚಿತ್ರದ ಛಾಯಗ್ರಾಹಕರು.

Share This Article