ವೇದ ಸಿನಿಮಾ ನೋಡಿ ಅಪ್ಪಾಜಿ ತರ ಕಾಣ್ತೀಯಾ ಎಂದು ಹೇಳಿ ತುಂಬಾ ಖುಷಿಪಟ್ಟಿದ್ದರು ಎಂದು ಸೋದರತ್ತೆ ನಾಗಮ್ಮ ಅವರನ್ನು ನೆನೆದು ನಟ ಶಿವರಾಜ್‌ಕುಮಾರ್(Actor Shivarajkumar) ಭಾವುಕರಾದರು.
ತಮಿಳುನಾಡಿನ (Tamilnadu) ತಾಳವಾಡಿ ತಾಲೂಕಿನ ದೊಡ್ಡಗಾಜನೂರಿನಲ್ಲಿ (Gajnuru) ನಡೆಯುತ್ತಿರುವ ರಾಜ್‌ಕುಮಾರ್ ಸಹೋದರಿ ನಾಗಮ್ಮ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ಮಾತನಾಡಿದರು. ಅಪ್ಪಾಜಿ ಕುಟುಂಬದ ಕೊನೆಯ ಕೊಂಡಿ ಇವರು. ಅಪ್ಪು ನಿಧನ ಹೊಂದಿ 4 ವರ್ಷ ಕಳೆಯುತ್ತಾ ಬಂದರೂ ಈವರೆಗೂ ಆ ವಿಚಾರ ಅವರಿಗೆ ಗೊತ್ತಿರಲಿಲ್ಲ. ಅದಲ್ಲದೇ ಸ್ವಂತ ಮಗ ಭರತ್ ನಿಧನದ ಸುದ್ದಿಯೂ ಅವರಿಗೆ ಗೊತ್ತಿರಲಿಲ್ಲ. ನೆನೆಸಿಕೊಂಡರೆ ಮನಸ್ಸಿಗೆ ತುಂಬಾ ಕಷ್ಟವಾಗುತ್ತದೆ. ವೇದ ಪಿಕ್ಚರ್ ನೋಡಿ ತುಂಬಾ ಖುಷಿಪಟ್ಟಿದ್ದರು, ಅಪ್ಪಾಜಿ ತರ ಕಾಣ್ತೀಯಾ ಅಂತ ಹೇಳಿದ್ರು. ನನ್ನ, ಅಪ್ಪು ಸಿನಿಮಾ ತುಂಬಾ ನೋಡುತ್ತಿದ್ದರು. ನಮ್ಮೆಲ್ಲರಿಗೂ ನಾಗತ್ತೆ ಅಂದ್ರೆ ವಿಶೇಷ ಪ್ರೀತಿ ಎಂದು ಹೇಳಿದರು.ಇದನ್ನೂ ಓದಿ: ಗಾಜನೂರು ತೋಟದ ಮನೆಯ ಜಮೀನಿನಲ್ಲಿ ನಾಳೆ ವರನಟ ಡಾ.ರಾಜ್ ಸಹೋದರಿ ಅಂತ್ಯಕ್ರಿಯೆ
ನಿಜಕ್ಕೂ ನಾಗಮ್ಮ ಇಲ್ಲ ಅಂದ್ರೆ ತುಂಬಾ ನೋವಾಗುತ್ತೆ. ಯಾವಾಗಲೂ ಗಾಜನೂರಿಗೆ ಅತ್ತೆ, ಅವ್ವ ಇಬ್ಬರು ಒಟ್ಟಿಗೆ ಬರುತ್ತಿದ್ದರು. ಅಪ್ಪಾಜಿ ಕಂಡರೆ ಅವರಿಗೆ ತುಂಬಾ ಪ್ರೀತಿ. ಯಾವಾಗಲೂ ಅಪ್ಪಾಜಿ ಜೊತೆಗೆ ಇರುತ್ತಿದ್ದರು. ನನಗೆ ಒಬ್ಬರೇ ತಾಯಿಯಲ್ಲ, ಸಿಕ್ಕಾಪಟ್ಟೆ ತಾಯಂದಿರಿದ್ದಾರೆ, ಅದರಲ್ಲಿ ನಾಗಮ್ಮ ಕೂಡ ಒಬ್ಬರು. ಚೆನ್ನೈ ಮನೆಯ ಸಂಪೂರ್ಣ ಜವಾಬ್ದಾರಿಯನ್ನು ನಾಗಮ್ಮವರಿಗೆ ವಹಿಸಲಾಗಿತ್ತು. ಆದರೂ ಕೂಡ ನಮ್ಮ ಬಳಿಯೇ ಕೀ ಕೊಟ್ಟಿರುತ್ತಿದ್ದರು. ನಾನು ಗಾಜನೂರಿಗೆ ಬರಬೇಕು ಅಂದ್ಕೊಡಿದ್ದೆ ಸಾಧ್ಯವಾಗಿರಲಿಲ್ಲ. ಆದರೆ ಶುಕ್ರವಾರ ಶೂಟಿಂಗ್‌ಗಾಗಿ ಗೋವಾಕ್ಕೆ ಹೋಗಿದ್ದೆ. ಹೋದ ತಕ್ಷಣವೇ ನಿಧನ ಸುದ್ದಿ ಗೊತ್ತಾಯಿತು ಎಂದು ತಿಳಿಸಿದರು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಶುಕ್ರವಾರ ತಮ್ಮ 93ನೇ ವಯಸ್ಸಿನಲ್ಲಿ ಗಾಜನೂರಿನಲ್ಲಿ ಕೊನೆಯುಸಿರೆಳೆದರು. ಇಂದು (ಆ.2) ಗಾಜನೂರಿನ ತೋಟದ ಮನೆಯ ಜಮೀನಿನಲ್ಲಿ ಅಂತಿಮ ವಿಧಿವಿಧಾನ ಆರಂಭವಾಗಲಿದ್ದು, ಈಡಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ.ಇದನ್ನೂ ಓದಿ: ಅಣ್ಣಾವ್ರ ಸಹೋದರಿ ನಾಗಮ್ಮ ವಿಧಿವಶ