ಚುನಾವಣೆ ಪ್ರಚಾರದಿಂದ ದೂರ ಉಳಿದಿರುವ ಕುರಿತು ಅಭಿಮಾನಿಗಳಿಗೆ ಸ್ಪಷ್ಟನೆ ನೀಡಿದ ಶಿವಣ್ಣ

Public TV
1 Min Read

ಹಾಸನ: ಈ ಬಾರಿಯ ಚುನಾವಣೆಯಲ್ಲಿ ನಾನು ಯಾವುದೇ ಪಕ್ಷ ಹಾಗೂ ಅಭ್ಯರ್ಥಿಯ ಪರವಾಗಿ ಪ್ರಚಾರದಲ್ಲಿ ಭಾಗವಹಿಸುವುದಿಲ್ಲ ಅಂತ ನಟ ಶಿವರಾಜ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ನಗರದ ಎಸ್.ಬಿ.ಜಿ. ಚಿತ್ರಮಂದಿರಕ್ಕೆ ಭೇಟಿ ನೀಡಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಪತ್ನಿ ಗೀತಾ ಶಿವರಾಜ್ ಕುಮಾರ್ ಅವರು ಮಧು ಬಂಗಾರಪ್ಪ ಪರ ಮಾತ್ರ ಪ್ರಚಾರ ಮಾಡಲಿದ್ದಾರೆ. ನಾನು ಪ್ರಚಾರಕ್ಕೆ ಬರಬೇಕೆಂದು ಅವರು ಬಯಸುವುದಿಲ್ಲ. ಅವರಿಗೂ ಗೊತ್ತು ನನ್ನ ಅಭಿಮಾನಿಗಳು ಎಲ್ಲ ಪಕ್ಷಗಳಲ್ಲೂ ಇದ್ದಾರೆಂದು. ನಾನೊಬ್ಬ ಕಲಾವಿದ, ಈ ಹಿಂದೆ ಪತ್ನಿ ಚುನಾವಣೆಗೆ ಸ್ಪರ್ಧೆ ಮಾಡಿದ್ದರಿಂದ ಅವರ ಪರವಾಗಿ ಪ್ರಚಾರ ಮಾಡಿದ್ದ ಅಷ್ಟೇ ಎಂದು ತಿಳಿಸಿದ್ದಾರೆ.

ಚುನಾವಣೆಯಲ್ಲಿ ಉತ್ತಮ ಆಡಳಿತ ನೀಡುವ ಹಾಗೂ ಜನರಿಗಾಗಿ ದುಡಿಯುವ ಪಕ್ಷ ಆಯ್ಕೆಯಾಗಬೇಕು. ಚುನಾವಣೆಯಲ್ಲಿ ನೀಡಿದ ಭರವಸೆ ಈಡೆರಿಸುವ ಮೂಲಕ ಜನರ ನಂಬಿಕೆ ಉಳಿಸಿಕೊಳ್ಳಲು ಪಕ್ಷ ಶ್ರಮಿಸಬೇಕು. ಪ್ರಕೃತಿಗೆ ಹೊಂದಿಕೊಂಡು ಬದುಕಿದಾಗ ಒಳ್ಳೆಯ ಮಳೆಯಾಗುತ್ತದೆ. ಹಾಗೇ ಉತ್ತಮ ಅಭ್ಯರ್ಥಿಗಳು ಆಡಳಿತಕ್ಕೆ ಬಂದರೆ ಮಾತ್ರ ಉತ್ತಮ ರೀತಿಯಲ್ಲಿ ಬದಲಾವಣೆ ಸಾಧ್ಯ ಎಂದು ಅವರು ಹೇಳಿದ್ರು.

ಚುನಾವಣೆಯಲ್ಲಿ ಹಣ, ಹೆಂಡ ಹಂಚುವುದು ಸಲ್ಲದು. ಮತದಾರರು ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ಸೂಕ್ತ ಅಭ್ಯರ್ಥಿಯ ಆಯ್ಕೆಗೆ ಶ್ರಮಿಸಬೇಕು. ಎಲ್ಲರೂ ಮತದಾನ ಮಾಡಬೇಕು. ಏಕೆಂದರೆ, ಒಂದು ಮತದಿಂದ ಒಬ್ಬ ಉತ್ತಮ ಅಭ್ಯರ್ಥಿ ಸೋಲಬಾರದು ಎಂದು ಸಲಹೆ ನೀಡಿದರು.

ನಂತರ, ಅವರ ಟಗರು ಸಿನಿಮಾ ಐವತ್ತು ದಿನ ಪೂರೈಸಿದ್ದರಿಂದ ನಗರದ ಎಸ್.ಬಿ.ಜಿ. ಚಿತ್ರಮಂದಿರದಲ್ಲಿ ಅಭಿಮಾನಿಗಳೊಂದಿಗೆ ಖುಷಿ ಹಂಚಿಕೊಂಡರು. ಅವರ ಜೊತೆ ಫೋಟೋ ತೆಗೆಸಿಕೊಳ್ಳಲು ಹಾಗೂ ನೋಡಲು ಸಾವಿರಾರು ಅಭಿಮಾನಿಗಳು ಮುಗಿಬಿದ್ದರು.

Share This Article
Leave a Comment

Leave a Reply

Your email address will not be published. Required fields are marked *