ಜನಪ್ರಿಯ ಕಲಾವಿದ ರಾಜು ತಾಳಿಕೋಟೆ ಸಾವು ಆಘಾತಕರ – ಶಿವರಾಜ ತಂಗಡಗಿ ಸಂತಾಪ

Public TV
1 Min Read

ಬೆಂಗಳೂರು: ಕನ್ನಡ ರಂಗಭೂಮಿಯ ಜನಪ್ರಿಯ ಕಲಾವಿದ ರಾಜು ತಾಳಿಕೋಟೆ (Raju Talikote) ಅವರ ನಿಧನದ ಸುದ್ದಿ ತೀವ್ರ ಆಘಾತ ಉಂಟು ಮಾಡಿದೆ, ಅವರ ಈ ಅಕಾಲಿಕ ಸಾವು ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ರಂಗಕ್ಕೆ ಆದ ಬಹುದೊಡ್ಡ ನಷ್ಟ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ (Shivaraj Tangadagi) ಸಂತಾಪ ಸೂಚಿಸಿದ್ದಾರೆ.

ಪ್ರಸ್ತುತ ಅವರು ಧಾರವಾಡ ರಂಗಾಯಣದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ನನ್ನೊಂದಿಗೆ ಆತ್ಮೀಯ ಒಡನಾಟ ಇರಿಸಿಕೊಂಡಿದ್ದ ರಾಜು ತಾಳಿಕೋಟೆ ಧಾರವಾಡ ರಂಗಾಯಣವನ್ನು ಹೊಸ ದೃಷ್ಟಿಕೋನದೊಂದಿಗೆ ಕಟ್ಟುತ್ತಾರೆ ಎಂಬ ಭರವಸೆ ಇತ್ತು. ಖಾಸ್ಗತೇಶ್ವರ ನಾಟಕ ಮಂಡಳಿ ಎಂಬ ಕಂಪನಿ ಹೊಂದಿದ್ದ ರಾಜು ತಾಳಿಕೋಟೆ ಅನೇಕ ಜನಪ್ರಿಯ ನಾಟಕಗಳ ಮೂಲಕ ಹೆಸರು ಮಾಡಿದ್ದರು. ಅವರು ನಟಿಸಿದ್ದ ಪಂಚರಂಗಿ, ಮನಸಾರೆ ಚಲನಚಿತ್ರಗಳು ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟವು.ಇದನ್ನೂ ಓದಿ: ಖ್ಯಾತ ಹಾಸ್ಯನಟ ರಾಜು ತಾಳಿಕೋಟೆ ನಿಧನ

ಬಿಗ್‌ಬಾಸ್‌ನಲ್ಲಿ ಭಾಗವಹಿಸುವ ಮೂಲಕ ಮನೆ ಮನೆಗೆ ಪರಿಚಿತರಾದ ರಾಜು ತಾಳಿಕೋಟೆ ಒಬ್ಬ ಒಳ್ಳೆಯ ನಟನ ಜೊತೆಗೆ ಒಳ್ಳೆಯ ವ್ಯಕ್ತಿಯು ಆಗಿದ್ದರು. ಭಗವಂತ ಅವರ ಕುಟುಂಬಕ್ಕೆ ಈ ಆಕಸ್ಮಿಕ ಮರಣದ ನೋವನ್ನು ಸಹಿಸಿಕೊಳ್ಳುವ ಶಕ್ತಿ ನೀಡಲಿ, ಅವರ ಈ ಸಾವು ಕನ್ನಡ ರಂಗಭೂಮಿಗೆ ಆದ ದೊಡ್ಡ ನಷ್ಟ. ಅದನ್ನು ಭರಿಸುವ ಶಕ್ತಿ ಅವರ ಅಭಿಮಾನಿಗಳಿಗೆ ನೀಡಲಿ ಎಂದು ತಿಳಿಸಿದ್ದಾರೆ.

Share This Article