ಹೈಡ್ರಾಮದ ಬಳಿಕ ಸುಸೂತ್ರವಾಗಿ ನಡೆದ ಚುನಾವಣೆ- ಬಿಜೆಪಿ ನಾಯಕರ ಆದೇಶಕ್ಕೆ ತಲೆಬಾಗಿದ ಮೇಯರ್ ಅಭ್ಯರ್ಥಿ

Public TV
4 Min Read

ಶಿವಮೊಗ್ಗ : ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಚುನಾವಣೆ ಕೊನೆಗೂ ಹೈಡ್ರಾಮದ ನಡುವೆ ಮುಗಿದಿದೆ. ಮೇಯರ್ ಆಗಿ ಬಿಜೆಪಿಯ ಸುವರ್ಣ ಶಂಕರ್ ಆಯ್ಕೆಯಾದರೆ, ಉಪಮೇಯರ್ ಆಗಿ ಸುರೇಖಾ ಮುರಳೀಧರ್ ಆಯ್ಕೆಗೊಂಡಿದ್ದಾರೆ.

ಒಂದು ಹಂತದಲ್ಲಿ ನ್ಯಾಯಾಲಯದ ಮೆಟ್ಟಿಲು ಏರಿದ್ದ ಮೇಯರ್ ಆಯ್ಕೆ ಪ್ರಕರಣ ನಂತರ ಬಿಜೆಪಿ ನಾಯಕರ ಮಧ್ಯೆ ಪ್ರವೇಶದಿಂದಾಗಿ ಸುಖಾಂತ್ಯ ಕಂಡಿದೆ. ಕಣ್ಣೀರು, ಸಿಟ್ಟು, ಸಂತಸ, ಸಂಭ್ರಮ ಇವೆಲ್ಲದರ ನಡುವೆ ಮೇಯರ್ ಮತ್ತು ಉಪಮೇಯರ್ ಆಯ್ಕೆ ನಡೆದಿದೆ.

ಕಳೆದೊಂದು ವಾರದಿಂದ ಭಾರೀ ಕೂತುಹಲ ಮತ್ತು ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದ್ದ ಶಿವಮೊಗ್ಗ ಮಹಾನಗರ ಪಾಲಿಕೆಯ 2ನೇ ಅವಧಿಗೆ ಮೇಯರ್ ಮತ್ತು ಉಪಮೇಯರ್ ಚುನಾವಣೆ ಸುಖಾಂತ್ಯ ಕಂಡಿದೆ. ನ್ಯಾಯಾಲಯದ ಮೆಟ್ಟಿಲು ಸಹ ಏರಿದ್ದ ಮೇಯರ್ ಆಯ್ಕೆ ಪ್ರಕ್ರಿಯೆ ಕೊನೆಗೂ ಬಿಜೆಪಿ ಪಕ್ಷದ ಹಿರಿಯ ಮುಖಂಡರ ಮಧ್ಯಸ್ಥಿಕೆ ನಡುವೆ ಅಂತಿಮವಾಗಿ ಬಿಜೆಪಿ ಪಕ್ಷದ ಹಿರಿಯ ಸದಸ್ಯೆ ಸುವರ್ಣ ಶಂಕರ್ ಅವರ ಆಯ್ಕೆ ನಡೆದಿದೆ.

ಅಷ್ಟಕ್ಕೂ ಕಳೆದೊಂದು ವಾರದಿಂದ ಬಿಜೆಪಿಯ ಪಾಲಿಕೆ ಸದಸ್ಯರ ನಡುವೆಯೇ ಮೇಯರ್ ಆಗಬೇಕೆಂಬ ಜಿದ್ದಾಜಿದ್ದು ಏರ್ಪಟಿತ್ತು. ಬಿಸಿಎಂ (ಬಿ)ಗೆ ಮೀಸಲಾಗಿದ್ದ ಮೇಯರ್ ಸ್ಥಾನಕ್ಕೆ ಸುವರ್ಣ ಶಂಕರ್ ಮತ್ತು ಅನಿತಾ ರವಿಶಂಕರ್ ನಡುವೆ ಭಾರೀ ಪೈಪೋಟಿ ನಡೆದಿತ್ತು. ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿ ಕಾರ್ಪೋರೇಟರ್ ಆಗಿ ಆಯ್ಕೆಯಾಗಿದ್ದ ಸುವರ್ಣ ಶಂಕರ್ ಅವರಿಗೆ ಬಿಸಿಎಂ (ಬಿ) ಜಾತಿ ಪ್ರಮಾಣ ಪತ್ರ ನೀಡಿದ್ದರ ಕುರಿತಂತೆ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಈ ಬಗ್ಗೆ ಕಾನೂನಿನ ಮೂಲಕ ಪ್ರಶ್ನಿಸಲಾಗಿತ್ತು. ಅಂತಿಮವಾಗಿ ಸುವರ್ಣ ಶಂಕರ್ ಅರ್ಜಿ ವಜಾ ಮಾಡಿ ಅನಿತಾ ರವಿಶಂಕರ್ ಅವರ ಅರ್ಜಿ ಮಾನ್ಯ ಮಾಡಿದ್ದ ಎಸಿ ನ್ಯಾಯಾಲಯ ತೀರ್ಪು ಕೂಡ ನೀಡಿತ್ತು. ಆದರೆ ಇದನ್ನ ಪ್ರಶ್ನಿಸಿ ಹೈಕೋರ್ಟ್ ನಲ್ಲಿ ನಿನ್ನೆ ಸ್ಟೇ ಆರ್ಡರ್ ತಂದಿದ್ದ ಸುವರ್ಣ ಶಂಕರ್ ಇಂದು ಅಂತಿಮವಾಗಿ ಮೇಯರ್ ಆಗಿ ಆಯ್ಕೆಗೊಂಡಿದ್ದಾರೆ.

ಇಂದು ಮುಂಜಾನೆಯೇ ಸಚಿವ ಈಶ್ವರಪ್ಪ ಸೇರಿದಂತೆ ಪಕ್ಷದ ಹಿರಿಯ ನಾಯಕರ ನೇತೃತ್ವದಲ್ಲಿ ಪಾಲಿಕೆ ಸದಸ್ಯರ ಸಭೆ ನಡೆಸಿದ ಬಳಿಕ ಸುವರ್ಣ ಶಂಕರ್ ಅವರನ್ನೇ ಅಂತಿಮವಾಗಿ ಮೇಯರ್ ಅಭ್ಯರ್ಥಿ ಎಂದು ಘೋಷಿಸಿದರಲ್ಲದೇ ಮತ್ತೊಬ್ಬ ಪ್ರಬಲ ಸ್ಪರ್ಧಾಕಾಂಕ್ಷಿ ಅದರಲ್ಲೂ ಯಡಿಯೂರಪ್ಪ ಬಣ ಎಂದು ಗುರುತಿಸಿಕೊಂಡಿದ್ದ ಅನಿತಾ ರವಿಶಂಕರ್ ಅವರಿಗೆ ಸುಮ್ಮನಿರುವಂತೆ ತಾಕೀತು ಮಾಡಲಾಯಿತು. ಈ ವೇಳೆ ಸಿಟ್ಟಿನಿಂದಲೇ ಸಭೆಯಿಂದ ಹೊರಬಂದ ಅನಿತಾ ರವಿಶಂಕರ್ ಅಳುತ್ತಲೇ ಕಾರಿನಲ್ಲಿ ತೆರಳಿದರು. ಬಿಜೆಪಿ ಸದಸ್ಯರೆಲ್ಲರೂ ಒಂದೇ ಬಸ್ ನಲ್ಲಿ ದೇವಾಲಯಕ್ಕೆ ತೆರಳಿ ಪಾಲಿಕೆಗೆ ಬಂದರೂ ಕೂಡ ಅನಿತಾ ರವಿಶಂಕರ್ ಮಾತ್ರ ಅಂತರ ಕಾಯ್ದುಕೊಂಡೇ ಇದ್ದರು.

ಈ ನಡುವೆ ಪಾಲಿಕೆ ಸಭಾಂಗಣದಲ್ಲಿ ನಡೆದ ಮೇಯರ್ ಮತ್ತು ಉಪಮೇಯರ್ ಆಯ್ಕೆ ಪ್ರಕ್ರಿಯೆಯಲ್ಲಿ, ಮೇಯರ್ ಗೆ 26 ಜನರು ಕೈ ಎತ್ತುವ ಮೂಲಕ ಮತ್ತು ಉಪಮೇಯರ್ ಗೆ 26 ಜನರು ಕೈ ಎತ್ತುವ ಮೂಲಕ ಆಯ್ಕೆ ನಡೆಸಲಾಯಿತು. ಈ ಮಧ್ಯೆ ಕಾಂಗ್ರೆಸ್ ಪಕ್ಷ ಕೂಡ ಮೇಯರ್ ಮತ್ತು ಉಪಮೇಯರ್ ಗೆ ಸ್ಪರ್ಧಿಸಿ 12 ಮತಗಳಿಗೆ ತೃಪ್ತಿಪಟ್ಟು ಕೊಳ್ಳಬೇಕಾಯಿತು.

ಈ ಎಲ್ಲಾ ಬೆಳವಣಿಗೆ ಕುರಿತಂತೆ ಪ್ರತಿಕ್ರಿಯಿಸಿದ ಸಚಿವ ಕೆ.ಎಸ್. ಈಶ್ವರಪ್ಪ, ಸ್ವಾಭಾವಿಕವಾಗಿ ಸದಸ್ಯರಿಗೆ ಮೇಯರ್ ಆಗಬೇಕೆಂಬ ಅಪೇಕ್ಷೆ ಇದ್ದೆ ಇರುತ್ತದೆ. ಆದ್ರೆ ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧ ಎಂದು ತೋರಿಸಿಕೊಡುವುದೇ ಬಿಜಪಿ ಎನ್ನುವ ಮೂಲಕ ಬೇಸರಗೊಂಡಿರುವ ಸದಸ್ಯರಿಗೆ ಕಿವಿ ಮಾತು ಹೇಳಿದ್ದಾರೆ.

ಅಷ್ಟಕ್ಕೂ ಮೇಯರ್ ಆಗುವ ಆಸೆ ಕೈಚೆಲ್ಲಿ ಬೇಸರಗೊಂಡಿರುವ ಅನಿತಾ ರವಿಶಂಕರ್ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರೂ ಕೂಡ ಅವರ ಮುಖದಲ್ಲಿ ದುಃಖ ಎದ್ದು ಕಾಣುತಿತ್ತು. ಒಂದು ಹಂತದಲ್ಲಿ ಮತ ಚಲಾವಣೆಗೆ ಕೈ ಎತ್ತುವ ಸಂದರ್ಭದಲ್ಲಿ ಅರ್ಧ ಕೈ ಎತ್ತುವ ಮೂಲಕ ತಮ್ಮ ಅಸಮಾಧಾನವನ್ನು ಕೂಡ ಅವರು ಹೊರ ಹಾಕಿದ ಘಟನೆಯೂ ನಡೆಯಿತು.

ಈ ಮಧ್ಯೆ ಬಿಜೆಪಿ ಸದಸ್ಯರ ಕಾಲೆಳೆದ ಕಾಂಗ್ರೆಸ್ ಸದಸ್ಯರಿಗೆ ಸಚಿವ ಈಶ್ವರಪ್ಪ ಕ್ಲಾಸ್ ಕೂಡ ತೆಗೆದುಕೊಂಡರು. ಬಿಜೆಪಿಯ ಎರಡು ಬಣಗಳ ಇಬ್ಬರು ಅಭ್ಯರ್ಥಿಗಳು ರೇಸ್ ನ ಹಿನ್ನೆಲೆಯಲ್ಲಿ, ಪಾಲಿಕೆಯ ಕಾಂಗ್ರೆಸ್ ಸದಸ್ಯ ಯೋಗಿಶ್ ಬಿಜೆಪಿ ಸದಸ್ಯರ ಕಾಲೆಳೆದರು. ಈ ವೇಳೆ ಸಿಟ್ಟಿಗೆದ್ದ ಈಶ್ವರಪ್ಪ ಕಾಂಗ್ರೆಸ್ ಪ್ರಾಂತವಾರು ನಾಲ್ವರು ಕೆಪಿಸಿಸಿ ಕಾರ್ಯಧ್ಯಕ್ಷರ ಆಯ್ಕೆಗೆ ಮುಂದಾಗಿದ್ದಾರೆ ಎಂದು ಕುಟುಕಿದರು. ಕಾಂಗ್ರೆಸ್ ಪಕ್ಷದ ಹಣೆಬರಹ ನೋಡಿ ಎಂದು ಹೇಳುವ ಮೂಲಕ ಸಚಿವ ಈಶ್ವರಪ್ಪ ಚುನಾವಣಾ ಅಧಿಕಾರಿಗಳ ಮುಂದೆಯೇ ಕೈ ಸದಸ್ಯರಿಗೆ ಕ್ಲಾಸ್ ತೆಗೆದುಕೊಂಡರು.

ಈ ನಡುವೆ ಮೇಯರ್ ಮತ್ತು ಉಪಮೇಯರ್ ಆಯ್ಕೆ ಪ್ರಕ್ರಿಯೆ ಸರಾಗವಾಗಿ ನಡೆದು ಸ್ಥಾಯಿ ಸಮಿತಿ ಸದಸ್ಯ ಸ್ಥಾನಕ್ಕೆ ಅವಿರೋಧ ಆಯ್ಕೆಯೂ ನಡೆಯಿತು. ಇನ್ನು ನೂತನವಾಗಿ ಮೇಯರ್ ಮತ್ತು ಉಪಮೇಯರ್ ಆಗಿ ಆಯ್ಕೆಗೊಂಡ ಸುವರ್ಣ ಶಂಕರ್ ಮತ್ತು ಸುರೇಖಾ ಮುರಳೀಧರ್ ಅವರಿಗೆ ಸಚಿವ ಈಶ್ವರಪ್ಪ ಸೇರಿದಂತೆ ಬಿಜೆಪಿ ಸದಸ್ಯರು ಹಾರ ತುರಾಯಿ ಹಾಕುವ ಮೂಲಕ ಸುವರ್ಣ ಶಂಕರ್ ಪರವಾಗಿ ಇರುವುದಾಗಿ ತೋರ್ಪಡಿಸಿದರು. ಆದರೆ ಈ ವೇಳೆ ಬೇಸರಗೊಂಡ ಅನಿತಾ ರವಿಶಂಕರ್ ಸಭೆಯಿಂದ ನಿರ್ಗಮಿಸಿ ಆಗಿತ್ತು.

ಒಟ್ಟಿನಲ್ಲಿ ಬಲು ರೋಚಕತೆ ಪಡೆದುಕೊಂಡಿದ್ದ ಮೇಯರ್ ಆಯ್ಕೆ ಪ್ರಕ್ರಿಯೆ ಬಿಜೆಪಿ ನಾಯಕರ ಮಧ್ಯೆ ಪ್ರವೇಶದಿಂದಾಗಿ ಸುಖಾಂತ್ಯ ಕಂಡಿದೆ. ಈ ನಡುವೆ ಬಿಜೆಪಿ ಸದಸ್ಯರಲ್ಲೂ ಎಲ್ಲವೂ ಸರಿಯಿಲ್ಲ ಎಂಬುದು ತೋರ್ಪಡಿಸಿದಂತಾಗಿದ್ದು, ಯಡಿಯೂರಪ್ಪ ಬಣ ಮತ್ತು ಈಶ್ವರಪ್ಪ ಬಣದ ಸದಸ್ಯರ ಪೈಕಿ ಈಶ್ವರಪ್ಪ ಬಣದ ಸದಸ್ಯೆ ಮೇಯರ್ ಆಗಿ ಆಯ್ಕೆಗೊಂಡಂತಾಗಿದೆ. ಅಂದಹಾಗೆ ಇದೀಗ ಅಸಮಾಧಾನಗೊಂಡಿರುವ ಅನಿತಾ ರವಿಶಂಕರ್ ಅವರಿಗೆ ಯಾವ ಹುದ್ದೆ ನೀಡಿ ಮನವೊಲಿಸಲಾಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *