ಜೀವಂತವಾಗಿ 30ಕ್ಕೂ ಹೆಚ್ಚು ನಾಯಿಗಳನ್ನು ಹೂತು ಹಾಕಿದ್ರು

Public TV
1 Min Read

ಶಿವಮೊಗ್ಗ: ರೇಬಿಸ್ ಪೀಡಿತ 25 ರಿಂದ 30ಕ್ಕೂ ಹೆಚ್ಚು ನಾಯಿಗಳನ್ನು ಜೀವಂತವಾಗಿ ಹೂತು ಹಾಕಿದ ಘಟನೆ ಶಿಕಾರಿಪುರ ತಾಲೂಕು ಗುಡ್ಡದತುಮ್ಮಿನಕಟ್ಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮದಗದ ಹಾರನಹಳ್ಳಿಯಲ್ಲಿ ನಡೆದಿದೆ.

ಆರು ತಿಂಗಳ ಹಿಂದೆ ರೇಬಿಸ್ ಪೀಡಿತ ನಾಯಿಯೊಂದು ಒಂದು ದನಕ್ಕೆ ಕಚ್ಚಿತ್ತು. ಇದಾದ ಮೂರು ತಿಂಗಳಲ್ಲಿ ರೇಬಿಸ್ ಪೀಡಿತ ದನ ಮೃತಪಟ್ಟಿತ್ತು. ಈ ದನವನ್ನು ಹೂತು ಹಾಕುವ ಬದಲು, ಕೆರೆ ಅಂಗಳಕ್ಕೆ ಹಾಕಿದ್ದರು. ಹೀಗಾಗಿ ಮದಗದ ಹಾರನಹಳ್ಳಿಯ ಕೆಲ ನಾಯಿಗಳು ಹಸುವಿನ ಮಾಂಸ ತಿಂದಿದ್ದರಿಂದ ಅವುಗಳಿಗೂ ರೇಬೀಸ್ ತಗುಲಿತ್ತು.

ಪರಿಸ್ಥಿತಿಯನ್ನು ಅರಿತ ಕೆಲವರು ನಾಯಿಗಳಿಗೆ ಚುಚ್ಚುಮದ್ದು ನೀಡುವಂತೆ ಒತ್ತಾಯಿಸಿದ್ದರು. ಆದರೆ ಇದು ದುಬಾರಿ ಆಗಲಿದೆ ಎಂಬ ಕಾರಣಕ್ಕೆ ಗ್ರಾಮ ಪಂಚಾಯತಿಯೂ ನಾಯಿಗಳನ್ನು ಜೀವಂತವಾಗಿ ಹೂತು ಹಾಕಲು ಮುಂದಾಗಿತ್ತು. ಅದರಂತೆ ಮದಗದ ಹಾರನಹಳ್ಳಿಯ ಹೊರಗೆ ಕೆರೆ ಅಂಗಳದಲ್ಲಿ ಜೆಸಿಬಿಯಿಂದ ಗುಂಡಿ ತೆಗೆದು, ಸುಮಾರು 20ರಿಂದ 30 ನಾಯಿಗಳನ್ನು ಹಿಡಿದು, ಜೀವಂತವಾಗಿ ಹೂತು ಹಾಕಿದ್ದಾರೆ.

ಒಂದು ಗುಂಡಿ ಮುಚ್ಚಿದ ನಂತರ ಇನ್ನೊಂದು ಗುಂಡಿ ತೆಗೆದು ಅಳಿದುಳಿದ ನಾಯಿಗಳನ್ನು ಹೊಡೆದು ಕೊಂದು ಗುಂಡಿಗೆ ಹಾಕಿ ಮುಚ್ಚದೆ ಹಾಗೇ ಬಿಟ್ಟಿದ್ದಾರೆ. ಈ ಅಮಾನವೀಯ, ಹೊಣೆಗೇಡಿತನದ ಕೃತ್ಯ ಮುಚ್ಚಿ ಹಾಕಲು ಗ್ರಾಮ ಪಂಚಾಯತಿಯ ಚುನಾಯಿತ ಪ್ರತಿನಿಧಿಗಳು, ಪಿಡಿಓ ಹಾಗೂ ಕಾರ್ಯದರ್ಶಿಗಳು ಪ್ರಯತ್ನಿಸಿದ್ದಾರೆ. ಗ್ರಾಮಕ್ಕೆ ಭೇಟಿ ಕೊಟ್ಟ ಪಬ್ಲಿಕ್ ಟಿವಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಸ್ಥಳದಲ್ಲಿ ಇಲ್ಲ ಎಂದು ಸಬೂಬು ಹೇಳಿದ್ದಾರೆ.

ಹುಚ್ಚು ಹಿಡಿದು ಸಾರ್ವಜನಿಕರಿಗೆ ಅಪಾಯವನ್ನುಂಟು ಮಾಡುವ ನಾಯಿಗಳಿಗೆ ದಯಾಮರಣ ನೀಡಲು ಅವಕಾಶವಿದೆ. ಆದರೆ ಹಣ ಖರ್ಚಾಗುತ್ತದೆ ಎಂದು ಹೀಗೆ ಜೀವಂತವಾಗಿ ಹೂತು ಹಾಕಿರುವುದು ಅಕ್ಷಮ್ಯ. ಪ್ರಾಣಿಗಳಿಗೂ ಮನುಷ್ಯರಂತೆ ಬದುಕುವು ಹಕ್ಕು ಇದೆ ಎಂಬುದನ್ನು ಮರೆತಿದ್ದಾರೆ. ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಗ್ರಾಮ ಪಂಚಾಯತಿಯ ಆಡಳಿತದ ವಿರುದ್ಧ ದೂರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *