ಕಳ್ಳತನಕ್ಕೆ ಸಂಬಳ ನೀಡುತ್ತಿದ್ದವನಿಗೆ ಬಲೆ ಬೀಸಿದ ಪೊಲೀಸ್- ಇಬ್ಬರು ಅರೆಸ್ಟ್

Public TV
1 Min Read

ಶಿವಮೊಗ್ಗ: ಮಲೆನಾಡಿನ ಭಾಗದಲ್ಲಿ ಹಲವು ದಿನಗಳಿಂದ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿರುವ ಕಳವು ಪ್ರಕರಣಗಳನ್ನು ಭೇದಿಸಲು ತನಿಖೆ ಚುರುಕುಗೊಳಿಸಿರುವ ಪೊಲೀಸರಿಗೆ ಮಹತ್ವದ ಸುಳಿವು ಲಭ್ಯವಾಗಿದೆ.

ಜಿಲ್ಲೆಯ ಶಿವಮೊಗ್ಗ, ಹೊಸನಗರ, ತೀರ್ಥಹಳ್ಳಿ, ಸಾಗರ ಸೇರಿದಂತೆ ಅನೇಕ ಕಡೆಗಳಲ್ಲಿ ಮನೆಗಳಲ್ಲಿ ಮತ್ತು ದೇವಸ್ಥಾನಗಳಲ್ಲಿ ಕಳ್ಳತನ ಪ್ರಕರಣ ನಡೆದಿದ್ದವು. ಈ ಕಳ್ಳರ ಗ್ಯಾಂಗ್ ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಸುಲಭವಾಗಿ ಹಣವನ್ನು ದೋಚುತ್ತಿತ್ತು. ಪ್ರಕರಣದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ತಮಿಳುನಾಡಿನ ತಿರುಚನಾಪಳ್ಳಿಯ ಕಾರ್ತಿಕ್ ಹಾಗೂ ಕಾರ್ತಿಕೇಯನ್ ಎಂದು ಗುರುತಿಸಲಾಗಿದೆ. ಬಂಧಿತರನ್ನು ವಿಚಾರಣೆ ನಡೆಸಿದ ಬಳಿಕ ಅಂತರ ರಾಜ್ಯ ಕಳ್ಳರ ಕೈವಾಡವಿದೆ ಎಂಬುದು ಪೊಲೀಸರ ತನಿಖೆಯಿಂದ ಬಹಿರಂಗಗೊಂಡಿದೆ.

ಈ ಕಳ್ಳರ ತಂಡದ ನಾಯಕ ಆಂಧ್ರ ಪ್ರದೇಶದ ಮೂಲದವನಾಗಿದ್ದು, ಯುವಕರನ್ನು ಕಳ್ಳತನ ಪ್ರಕರಣಕ್ಕೆ ನೇಮಿಸಿಕೊಂಡು ಅವರಿಗೆ ಸಂಬಳ ನೀಡುತ್ತಿದ್ದ. ಅಷ್ಟೇ ಅಲ್ಲದೆ ಕಳ್ಳರ ತಂಡ ಕಳವು ಮಾಡಿದ ಮಾಲನ್ನು ತಾನೇ ಖರೀದಿಸುತ್ತಿದ್ದ ಎನ್ನಲಾಗಿದೆ.

ಮಲೆನಾಡಿನ ಭಾಗದಲ್ಲಿ ಕಳವು ಪ್ರಕರಣ ಹೆಚ್ಚಾಗುತ್ತಿದ್ದಂತೆ ಸಾರ್ವಜನಿಕರಲ್ಲಿ ಪೊಲೀಸರ ವಿರುದ್ಧ ಅಸಮಾಧಾನ ಹೆಚ್ಚಾಗಿತ್ತು. ಅಲ್ಲದೇ ಎಷ್ಟೇ ಪ್ರಯತ್ನಪಟ್ಟರೂ ಪೊಲೀಸರಿಗೆ ಆರೋಪಿಗಳ ಸುಳಿವು ಸಹ ಸಿಗದೆ ಇಕ್ಕಟ್ಟಿಗೆ ಸಿಲುಕಿದ್ದರು. ಸತತ ಪ್ರಯತ್ನದ ಫಲವಾಗಿ ಪೊಲೀಸರು ಕೊನೆಗೂ ತಮಿಳುನಾಡು ಮೂಲದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕಳ್ಳರ ಗುಂಪಿನ ಲೀಡರನ್ನು ಬಂಧಿಸಲು ಕಾರ್ಯೋನ್ಮುಖವಾಗಿದ್ದು, ಆತನ ಪತ್ತೆಗೂ ಪೊಲೀಸರು ಬಲೆ ಬೀಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *