ರಸ್ತೆ ಅಗಲೀಕರಣಕ್ಕೆ ಬಿಡುತ್ತಿಲ್ಲ ಹಿಡಿದಿರುವ ಗ್ರಹಣ – ಪಾಲಿಕೆ ವಿರುದ್ಧ ಸ್ಥಳೀಯರ ಆಕ್ರೋಶ

Public TV
2 Min Read

ಶಿವಮೊಗ್ಗ: ರಸ್ತೆ ಅಗಲೀಕರಣಕ್ಕಾಗಿ ನಿಮ್ಮ ಮನೆಗಳನ್ನು ತೆರವುಗೊಳಿಸಿ ಎಂದು ಪಾಲಿಕೆ ಅಧಿಕಾರಿಗಳು ಹೇಳಿದ ಹಿನ್ನೆಲೆಯಲ್ಲಿ ಮನೆಗಳು ಮತ್ತು ಕಟ್ಟಡಗಳನ್ನೇನೋ ಮಾಲೀಕರು ತೆರವುಗೊಳಿಸಿದ್ದಾರೆ. ಆದರೆ ಅದಕ್ಕೆ ಪರಿಹಾರದ ಹಣ ಸಿಗದೇ ಇದೀಗ ಪರಿತಪಿಸುತ್ತಿದ್ದಾರೆ. ಅತ್ತ ಮನೆಯೂ ಇಲ್ಲ, ಪರಿಹಾರವೂ ಇಲ್ಲ. ಇತ್ತ ರಸ್ತೆ ಅಗಲೀಕರಣ ಕೆಲಸ ಕೂಡ ಆಗಿಲ್ಲ.

ಇದು ಶಿವಮೊಗ್ಗ ನಗರದ ಹೃದಯ ಭಾಗದಲ್ಲಿರುವ ಮಿಳ್ಳಘಟ್ಟ ಬಡಾವಣೆಯ ಮುಖ್ಯ ರಸ್ತೆಯ ಕಥೆ. ಶಿವಮೊಗ್ಗ ಬಸ್ ನಿಲ್ದಾಣಕ್ಕೆ ತಾಗಿಕೊಂಡೇ ಹಿಂಭಾಗದಲ್ಲಿ ಈ ಬಡಾವಣೆ ಇದ್ದು, ಬಹಳ ಕಿರಿದಾಗಿದ್ದ ಈ ರಸ್ತೆಯನ್ನು ಅಗಲೀಕರಣಗೊಳಿಸಿ ಸುಗಮ ರಸ್ತೆ ಸಂಚಾರಕ್ಕೆ ಈ ಹಿಂದೆಯೇ ಪಾಲಿಕೆ ಸಭೆಯಲ್ಲಿ ನಿರ್ಧರಿಸಲಾಗಿತ್ತು. 2014ರಲ್ಲಿ ಈ ರಸ್ತೆ ಅಗಲೀಕರಣ ಕಾಮಗಾರಿಗೆ ತೀರ್ಮಾನಿಸಲಾಗಿದ್ದು, 2016ರಲ್ಲಿ ಇದಕ್ಕೆ ಚಾಲನೆ ಕೂಡ ನೀಡಲಾಗಿತ್ತು.

ಕ್ರಮೇಣ ರಸ್ತೆ ಅಗಲೀಕರಣಕ್ಕೆ ಪಾಲಿಕೆ ಸಭೆಯಲ್ಲಿ ಅನುಮತಿ ಸಿಕ್ಕ ನಂತರದಲ್ಲಿ ಪರಿಹಾರ ಧನವಾಗಿ ಪ್ರತಿ ಚದರಡಿಗೆ 2 ಸಾವಿರ ರೂ. ನಿಗದಿಪಡಿಸಲಾಗಿತ್ತು. ನಿಮ್ಮ ಕಟ್ಟಡಗಳನ್ನ ಮತ್ತು ನಿಮ್ಮ ಮನೆಗಳನ್ನ ತೆರವುಗೊಳಿಸಿ ಜಾಗ ಖಾಲಿ ಮಾಡಿ ಎಂದು ಪಾಲಿಕೆ ಅಲ್ಲಿನ ನಿವಾಸಿಗಳಿಗೆ ನೋಟಿಸ್ ಕೂಡ ನೀಡಿತ್ತು. ಇದನ್ನು ನಂಬಿಕೊಂಡ ಸುಮಾರು 50ಕ್ಕೂ ಹೆಚ್ಚು ವಾಣಿಜ್ಯ ಕಟ್ಟಡ ಮಾಲೀಕರು ಮತ್ತು 50ಕ್ಕೂ ಹೆಚ್ಚು ಮನೆ ಮಾಲೀಕರು ತಮ್ಮ ಕಟ್ಟಡ ಮತ್ತು ಮನೆಗಳನ್ನ ತೆರವುಗೊಳಿಸಿಕೊಂಡು ಪಾಲಿಕೆಯ ಪರಿಹಾರದ ಹಣಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಇನ್ನುಳಿದ ನೂರಕ್ಕೂ ಹೆಚ್ಚು ಕಟ್ಟಡ ಮತ್ತು ಮನೆ ಮಾಲೀಕರು ಕೂಡ ತಮ್ಮ ಜಾಗ ತೆರವುಗೊಳಿಸಲು ಸಿದ್ಧವಿದ್ದರೂ ಕೂಡ ಪಾಲಿಕೆ ನಿರ್ಲಕ್ಷತೆಯಿಂದಾಗಿ ತ್ರಿಶಂಕು ಪರಿಸ್ಥಿತಿಯಲ್ಲಿದ್ದಾರೆ. ಯಾಕೆಂದರೆ ಕಟ್ಟಡವಾಗಲಿ ಮನೆಯಾಗಲಿ ತೆರವುಗೊಳಿಸದೇ ಪರಿಹಾರದ ಧನ ಸಿಗೋದಿಲ್ಲ. ಅಕಸ್ಮಾತ್ ತೆರವುಗೊಳಿಸಿಕೊಂಡರೂ ಕೂಡ ಪರಿಹಾರ ಧನ ಸಿಗುತ್ತೋ ಇಲ್ಲವೋ ಎಂಬ ಗೊಂದಲದಲ್ಲಿ ಇದ್ದೇವೆ ಎಂದು ನಿವಾಸಿಗಳು ಹೇಳುತ್ತಿದ್ದಾರೆ.

ಇಲ್ಲಿನ ಮಿಳ್ಳಘಟ್ಟ ಬಡಾವಣೆಯ ಮುಖ್ಯ ರಸ್ತೆ ರಿಂಗ್ ರಸ್ತೆಗೆ ಸಂಪರ್ಕ ಕಲ್ಪಿಸುವುದಾಗಿದ್ದು ಅಗಲೀಕರಣವಾದರೇ ಒಳ್ಳೆಯದು ಎಂಬ ಆಶಾಭಾವನೆ ಸ್ಥಳೀಯರದ್ದಾಗಿದೆ. ಆದರೆ ಪಾಲಿಕೆ ನಿರಾಸಕ್ತಿಯಿಂದಾಗಿ ಇಲ್ಲಿನ ನಾಗರಿಕರು ತ್ರಿಶಂಕು ಪರಿಸ್ಥಿತಿಯಲ್ಲಿದ್ದಾರೆ. ಅಲ್ಲದೇ ಈ ರಸ್ತೆ ಕಿರಿದಾಗಿದ್ದು ಜನಸಂದಣಿ ಹೆಚ್ಚಾಗಿದೆ. ಈ ರಸ್ತೆಯಲ್ಲಿ ಪ್ರತಿ 2 ನಿಮಿಷಕ್ಕೊಮ್ಮೆ ನಗರ ಸಾರಿಗೆ ಬಸ್‍ಗಳು ಸಂಚರಿಸುತ್ತವೆ. ಹೀಗಾಗಿ ಇಲ್ಲಿನ ನಿವಾಸಿಗಳು ಓಡಾಡಲು ತೊಂದರೆ ಪಡುವಂತಾಗಿದೆ. ಅಲ್ಲದೇ ಈ ರಸ್ತೆ ಪೂರ್ತಿ ಧೂಳಿನಿಂದ ಕೂಡಿದ್ದು ಜನರು ಪರಿತಪಿಸುವಂತಾಗಿದೆ.

ಒಂದು ಸಾವಿರ ಮೀಟರ್ ರಸ್ತೆ ಅಗಲೀಕರಣದ ಪ್ರಸ್ತಾವನೆ ಇದ್ದು, ಇದರಲ್ಲಿ ಮೊದಲ ಹಂತದಲ್ಲಿ 500 ಮೀ. ರಸ್ತೆಯನ್ನು ಅಭಿವೃದ್ಧಿಪಡಿಸಲು ಸೂಚಿಸಲಾಗಿದೆ. ಈ ಸಂಬಂಧ ಈಗಾಗಲೇ ಇಲ್ಲಿನ ಕಟ್ಟಡ ಮಾಲೀಕರಿಗೆ ನೋಟಿಸ್ ನೀಡಿ ಎರಡೂವರೆ ವರ್ಷ ಕಳೆಯುತ್ತಾ ಬಂದಿದ್ದರೂ ಕೂಡ ರಸ್ತೆ ಅಗಲೀಕರಣದ ಕೆಲಸ ಮಾತ್ರ ಆಗುತ್ತಿಲ್ಲ. ಹೀಗಾಗಿ ಸ್ಥಳೀಯರು ಸೇರಿದಂತೆ ವಿವಿಧ ಸಂಘಟನೆ ಸದಸ್ಯರು, ಮಾಜಿ ಶಾಸಕ ಪ್ರಸನ್ನ ಕುಮಾರ್ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಸಿದರು. ಈ ಕೂಡಲೇ ಪಾಲಿಕೆ ಆಯುಕ್ತರು ಈ ಬಗ್ಗೆ ಗಮನ ಹರಿಸಿ ಎಂದು ಮನವಿ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *