ಲಾಕಪ್ ಡೆತ್: ಕೇಸ್ ಯಶಸ್ವಿಯಾಗಿ ಮುಚ್ಚಿಹಾಕಿದ್ರಾ ಶಿವಮೊಗ್ಗ ಪೊಲೀಸರು?

Public TV
2 Min Read

ಶಿವಮೊಗ್ಗ: ಪೊಲೀಸ್ ವಶದಲ್ಲಿ ವ್ಯಕ್ತಿಯ ಸಾವಿನ ಪ್ರಕರಣವನ್ನು ಶಿವಮೊಗ್ಗ ಪೊಲೀಸರು ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ. ಈ ಪ್ರಕರಣದಲ್ಲಿ ಸ್ವತಃ ಜಿಲ್ಲಾ ರಕ್ಷಣಾಧಿಕಾರಿ ಡಾ.ಅಶ್ವಿನಿ ಅವರೇ ಮುಖ್ಯಪಾತ್ರವಹಿಸಿರುವುದು ಆತಂಕಕಾರಿಯಾಗಿದೆ.

ಓಸಿ-ಮಟ್ಕಾ ದಂಧೆ ಮಾಡುತ್ತಿದ್ದಾರೆ ಎಂದು ಹೊಳೆಹೊನ್ನೂರು ಠಾಣೆ ಪೊಲೀಸರು ನಿನ್ನೆ ಆಗರದಹಳ್ಳಿಯ ಬಾಲೇಶ್ ಎಂಬವರನ್ನು ಕರೆದುಕೊಂಡು ಬಂದಿದ್ದರು. ಹೊಳೆಹೊನ್ನೂರಿನಿಂದ ಶಿವಮೊಗ್ಗ ಡಿಆರ್ ಮೈದಾನದಲ್ಲಿರುವ ಪೊಲೀಸ್ ಸಭಾ ಭವನಕ್ಕೆ ಕರೆದುಕೊಂಡು ಬಂದಿದ್ದರು. ಇಲ್ಲಿರುವ ಸಭಾ ಭವನದಲ್ಲಿ ಎಸ್‍ಪಿ ಡಾ.ಅಶ್ವಿನಿ ಅವರ ಸಮ್ಮುಖದಲ್ಲೇ ಬಾಲೇಶ್ ಹಾಗೂ ಇನ್ನಿತರರನ್ನು ಒಟ್ಟಿಗೆ ಸೇರಿಸಿ ಹಿಗ್ಗಾಮುಗ್ಗ ಥಳಿಸಿದ್ದರು. ಈ ಸಂದರ್ಭದಲ್ಲಿ ಬಾಲೇಶ್ ಮೃತಪಟ್ಟಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ತಕ್ಷಣವೇ ಪೊಲೀಸ್ ಜೀಪಿನಲ್ಲೇ ಬಾಲೇಶ್ ಶವನ್ನು ಮೆಗಾನ್ ಆಸ್ಪತ್ರೆಗೆ ಸಾಗಿಸಿದ್ದರು. ಬಳಿಕ ಮೃತನ ಕುಟುಂಬಸ್ಥರಿಗೆ ಕರೆ ಮಾಡಿ ಆಸ್ಪತ್ರೆಗೆ ಬರಲು ಸೂಚಿಸಿದ್ದರು. ರಾತ್ರಿ ಪೊಲೀಸರ ದೌರ್ಜನ್ಯದಿಂದಲೇ ಬಾಲೇಶ್ ಮೃತಪಟ್ಟಿದ್ದಾರೆ ಎಂದು ಸಂಬಂಧಿಗಳು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

ತಡ ರಾತ್ರಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಅವರ ಸಂಬಂಧಿಗಳ ಮನವೊಲಿಸಿ, ಇದು ಹೃದಯಾಘಾತದಿಂದ ಆದ ಸಾವು ಎಂದು ಬಿಂಬಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕಾಗಿ ಬಾಲೇಶ್ ಕುಟುಂಬದವರಿಗೆ ಅಪಾರ ಪ್ರಮಾಣದ ಹಣ ನೀಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಈ ಬಗ್ಗೆ ಮೊದಲು ಮಾಹಿತಿ ನೀಡಲು ನಿರಾಕರಿಸಿದ ಎಸ್‍ಪಿ ಅಶ್ವಿನಿ, ನಂತರ ಪೂರ್ವ ವಲಯ ಐಜಿ ಅವರಿಗೆ ದೂರು ಹೋದ ನಂತರ ಮಾಧ್ಯಮಗಳ ಮುಂದೆ ಬಂದರು. ಆದರೆ, ಮಾಧ್ಯಮಗಳ ಯಾವುದೇ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದೆ ಚುಟುಕಾಗಿ ಸುದ್ದಿಗೋಷ್ಠಿ ಮುಗಿಸಿದ್ದಾರೆ.

ಉತ್ತರ ಸಿಗದ ಪ್ರಶ್ನೆಗಳು
1) ಬಾಲೇಶ್ ಶವವನ್ನು ಪೊಲೀಸ್ ಜೀಪಿನಲ್ಲೇ ಮೆಗಾನ್ ಆಸ್ಪತ್ರೆಗೆ ತಂದಿದ್ದು ಹೇಗೆ?
2) ಕೈಮರ ಗ್ರಾಮದ ಬಳಿ ಹೃದಯಾಘಾತದಿಂದ ಕುಸಿದಿದ್ದಾರೆ ಎಂದು ಎಸ್ಪಿ ಹೇಳಿದ್ದಾರೆ, ಅಲ್ಲಿಂದ ಇಲ್ಲಿಗೆ ಪೊಲೀಸ್ ಜೀಪಿನಲ್ಲಿ ತಂದಿದ್ದು ಹೇಗೆ?
3) ಬಾಲೇಶ್ ಅವರ ಜೊತೆಯಲ್ಲಿ ಕರೆತಂದಿದ್ದ ಇನ್ನೂ ಐವರು ಯಾರು? ಅವರು ಎಲ್ಲಿದ್ದಾರೆ?
4) ಈ ವಿಷಯವಾಗಿ ವಿಚಾರಣೆ ನಡೆಸುವುದಾಗಿ ಎಸ್ಪಿ ಹೇಳಿದ್ದಾರೆ. ಎಸ್ಪಿ ಸಮ್ಮುಖದಲ್ಲೇ ನಡೆದಿರುವ ಘಟನೆಗೆ ವಿಚಾರಣೆಯನ್ನು ಯಾವ ಹಂತದ ಅಧಿಕಾರಿ ನಡೆಸುತ್ತಾರೆ?

Share This Article
Leave a Comment

Leave a Reply

Your email address will not be published. Required fields are marked *