ಮುಸ್ಲಿಂ ಸಮುದಾಯದ ಕುರಿತು ಪ್ರಚೋದನಕಾರಿ ಹೇಳಿಕೆ – ಈಶ್ವರಪ್ಪ ವಿರುದ್ಧ ಸುಮೋಟೋ ಕೇಸ್

Public TV
1 Min Read

ಶಿವಮೊಗ್ಗ: ಸುದ್ದಿಗೋಷ್ಠಿಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ (K.S Eshwarappa) ವಿರುದ್ಧ ಜಯನಗರ ಪೊಲೀಸ್ (Police) ಠಾಣೆಯಲ್ಲಿ ಸುಮೋಟೋ ಕೇಸ್ (ಸ್ವಯಂಪ್ರೇರಿತ ಪ್ರಕರಣ) ದಾಖಲಾಗಿದೆ.

ರೈತರಿಗೆ ವಕ್ಫ್ ಬೋರ್ಡ್ (Waqf Board) ನೋಟಿಸ್ ನೀಡಿದ್ದ ವಿವಾದದ ಬಗ್ಗೆ ನಗರದಲ್ಲಿ (Shivamogga) ನ.13 ರಂದು ಅವರು ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ, ಮುಸ್ಲಿಮರ ವಿರುದ್ಧ ಅವರು ತೀವ್ರ ವಾಗ್ದಾಳಿ ನಡೆಸಿದ್ದರು. ಸಾಧು ಸಂತರ ನೇತೃತ್ವದಲ್ಲಿ ದಂಗೆ ಏಳಬೇಕಾಗುತ್ತದೆ. ಹೇಗೆ ಆದರೆ ಮುಸಲ್ಮಾನರಿಗೆ ರಸ್ತೆಯಲ್ಲಿ ಹುಡುಕಿ ಹುಡುಕಿ ಹೊಡೆಯುತ್ತಾರೆ. ಮುಸ್ಲಿಮರನ್ನು ಕೊಲ್ಲುವಂತಹ ದಿನ ಬರುತ್ತದೆ ಎಂದು ಹೇಳಿದ್ದರು.

ಇದೇ ವೇಳೆ, ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಮೀಸಲಾತಿ ವಿಚಾರವಾಗಿ ಮಾತನಾಡಿ, ಮೀಸಲಾತಿ ಕೊಡುತ್ತೇವೆ ಎನ್ನುತ್ತಾರೆ. ಹಿಂದೂಸ್ಥಾನ ಏನು ಪಾಕಿಸ್ತಾನ ಮಾಡಲು ಹೊರಟ್ಟಿದ್ದೀರಾ? ಸಾಧು ಸಂತರ ನೇತೃತ್ವದಲ್ಲಿ ದಂಗೆ ಏಳುತ್ತಾರೆ. ಬಾಂಗ್ಲಾದೇಶದಲ್ಲಿ ಹಲ್ಲೆ, ಕೊಲೆ ಆಯ್ತು. ಬಾಂಗ್ಲಾದೇಶದ ಪ್ರಧಾನಿಗೆ ಭಾರತದಲ್ಲಿ ರಕ್ಷಣೆ ಕೊಟ್ಟು ಇಟ್ಟಿದ್ದೇವೆ. ಪಾಕಿಸ್ತಾನದಲ್ಲಿ ಹಿಂದೂಗಳ ಹತ್ಯೆಯಾಯ್ತು. ಭಾರತದಲ್ಲಿಯೂ ಮುಸ್ಲಿಮರು ಈ ರೀತಿ ಮಾಡಲು ಹೊರಟ್ಟಿದ್ದಾರೆ ಎಂದು ಕಿಡಿಕಾರಿದ್ದರು.

ಕಾಂಗ್ರೆಸ್‍ನವರು ವೋಟಿಗಾಗಿ ಭಾರತವನ್ನೇ ಮತಾಂತರ ಮಾಡಲು ಹೊರಟ್ಟಿದ್ದಾರೆ. ನೇರಾ ನೇರ ಖಂಡನೆ ಮಾಡಬೇಕು. ಹಿಂದೂಗಳಿಗೆ ಅಪಮಾನ ಮಾಡುತ್ತಿದ್ದಾರೆ. ಅವರ ಮೀಸಲಾತಿ ಕಿತ್ತುಕೊಳ್ಳಲು ಹೊರಟ್ಟಿದ್ದಾರೆ. ಹಿಂದೂ ಸಮಾಜ ದಂಗೆ ಎದ್ದರೆ ಈ ಸರ್ಕಾರ, ನೀವೇ ಕಾರಣರಾಗುತ್ತೀರಿ ಎಂದು ಎಚ್ಚರಿಕೆ ನೀಡಿದ್ದರು.

ಅವರ ಈ ಹೇಳಿಕೆಯಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುತ್ತದೆ ಎಂಬ ಕಾರಣದಿಂದ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದಾರೆ.

Share This Article