ಮಾಧ್ಯಮಕ್ಕೆ ಹೋಗದ ರೀತಿಯಲ್ಲಿ ನೆರೆಪರಿಹಾರದ ಕರ್ತವ್ಯ ಮಾಡಿದ್ದೇವೆ – ರಾಘವೇಂದ್ರ

Public TV
2 Min Read

– ಬೆಂಗ್ಳೂರಲ್ಲಿ ಕೇಂದ್ರದ ವಿರುದ್ಧ ಪ್ರತಿಭಟನೆ

ಶಿವಮೊಗ್ಗ/ಬೆಂಗಳೂರು: ನೆರೆ ಪರಿಹಾರವನ್ನು ಎಲ್ಲಿ, ಯಾವ ರೀತಿ ಮಾಡಿದ್ದೇವೆ ಎಂಬುದರ ಬಗ್ಗೆ ಮಾಧ್ಯಮದ ಮುಂದೆ ಹೋಗದ ರೀತಿಯಲ್ಲಿ ಎಲ್ಲ ಸಂಸದರು ತಮ್ಮ ಕರ್ತವ್ಯವನ್ನು ಮಾಡಿದ್ದೇವೆ ಎಂದು ಸಂಸದ ಬಿ.ವೈ ರಾಘವೇಂದ್ರ ಅವರು ಹೇಳಿದ್ದಾರೆ.

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆ ಸಂತ್ರಸ್ತರ ಪರಿಹಾರದ ನೆರವಿಗೆ ನಮ್ಮ ಕರ್ತವ್ಯ ಯಾವ ರೀತಿ, ಎಲ್ಲಿ ಮಾಡಬೇಕೋ ಆ ರೀತಿ ರಾಜ್ಯದ ಸಂಸದರು ಮಾಡಿದ್ದೇವೆ. ಆದರೆ ಮಾಧ್ಯಮದ ಮುಂದೆ ಹೋಗಿಲ್ಲ ಅಷ್ಟೇ ಎಂದರು.

ಇಡೀ ದೇಶದಲ್ಲಿ 16 ರಾಜ್ಯಗಳಲ್ಲಿ ಪ್ರವಾಹ ಬಂದು ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ಇನ್ನೆರಡು ಮೂರು ದಿನದಲ್ಲಿ ಪರಿಹಾರ ಬಿಡುಗಡೆಯಾಗುತ್ತದೆ ಎಂದು ಸಿಎಂ ಅವರು ಕೂಡ ಹೇಳಿದ್ದಾರೆ. ಹೀಗಾಗಿ ಆದಷ್ಟು ಬೇಗ ಪರಿಹಾರ ಬಿಡುಗಡೆ ಆಗುತ್ತದೆ ಎಂಬ ವಿಶ್ವಾಸ ಇದೆ ಎಂದರು.

ಇತ್ತ ರಾಜ್ಯದ ನೆರೆ ಪರಿಹಾರದ ವಿಚಾರದಲ್ಲಿ ಕೇಂದ್ರದ ಮಲತಾಯಿ ಧೋರಣೆ ಖಂಡಿಸಿ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆ ವತಿಯಿಂದ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯುತ್ತಿದೆ. ರಾಮಮಂದಿರ ಗ್ರೌಂಡ್ ನಿಂದ ಫ್ರೀಡಂ ಪಾರ್ಕ್ ವರೆಗೆ ರ‍್ಯಾಲಿಗೆ ನಿವೃತ್ತ ಪೋಲಿಸ್ ಮಹಾನಿರ್ದೇಶಕ ಶಂಕರಿ ಬಿದರಿ ಚಾಲನೆ ನೀಡಿದ್ದಾರೆ.

ಪ್ರತಿಭಟನೆ ವೇಳೆ ಮಹಾ ಸಂಘದ ಅಧ್ಯಕ್ಷ ಶಿವಕುಮಾರ್ ಮೇಟಿ ಎಚ್ಚರಿಕೆ ನೀಡಿದ್ದಾರೆ. ನಮ್ಮ ಭಾಗದ ಸಂಸದರು ಶಾಸಕರು, ಸಚಿವರು, ಡಿಸಿಎಂ, ಮಾಜಿ ಸಿಎಂ ಅನ್ನು ಕ್ಷೇತ್ರದಲ್ಲೇ ಕಟ್ಟಿ ಹಾಕುತ್ತೇವೆ ಎಂದಿದ್ದಾರೆ. ಅಲ್ಲದೆ ಸಂಸದ ತೇಜಸ್ವಿ ಸೂರ್ಯ ಯಾಕೆ ದುಡ್ಡು ಅಂತ ಕೇಳ್ತಾರೆ. ಸಾಯುವ ಜನರಿಗೆ ಪರಿಹಾರ ಸಿಗಬೇಕಿದೆ. ದಸರಾ ಒಳಗೆ ಪರಿಹಾರ ಕೊಡದಿದ್ರೆ ಖಂಡಿತಾ ನಿಮ್ಮ ದಾರಿ ನಿಮಗೆ ನಮ್ಮ ದಾರಿ ನಮಗೆ ಎಂದು ಖಡಕ್ಕಾಗಿ ನುಡಿದಿದ್ದಾರೆ.

ಇದೇ ವೇಳೆ ಶಂಕರ್ ಬಿದರಿ ಮಾತನಾಡಿ, ಕಳೆದ 70 ವರ್ಷಗಳ ಕಾಲದಲ್ಲಿ ಈ ರೀತಿಯ ಪ್ರವಾಹ ಯಾವತ್ತೂ ಆಗಿಲ್ಲ. ನಮ್ಮ ಉತ್ತರ ಕರ್ನಾಟಕದ ಜನ ಪ್ರವಾಹದಿಂದ ನಲುಗಿಹೋಗಿದ್ದಾರೆ. ಪ್ರವಾಹವಾಗಿ 60 ದಿನಗಳು ಆದರೂ ಕೇಂದ್ರದಿಂದ ಯಾವುದೇ ಪರಿಹಾರ ಬಂದಿಲ್ಲ. ನಮ್ಮ ಕೇಂದ್ರ ಸರ್ಕಾರ, ಸಂಸದರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ನಮ್ಮ ಉತ್ತರ ಕರ್ನಾಟಕದ ಜನ ಮುಗ್ಧರು, ದೈವ ಭಕ್ತರು. ಯಾವುದೇ ಸಹಾಯ ಮಾಡದ ಸಂಸದರನ್ನ ಆಯ್ಕೆ ಮಾಡಿದ್ದು ನಮ್ಮ ತಪ್ಪು. ಇಂಥವರನ್ನು ಆಯ್ಕೆ ಮಾಡಿದ ನಮಗೆ ನಾವೇ ಚಪ್ಪಲಿಯಲ್ಲಿ ಹೊಡೆದುಕೊಳ್ಳಬೇಕು. ಜನರಲ್ಲಿ ಪ್ರಜಾಪ್ರಭುತ್ವ ಜಾಗೃತಿ ಆಗೋ ಕೆಲಸವಾಗಬೇಕು ಎಂದರು.

Share This Article
Leave a Comment

Leave a Reply

Your email address will not be published. Required fields are marked *