ಶಿವಮೊಗ್ಗ: ಒಂದೆಡೆ ದೇಶವ್ಯಾಪಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ಲಾಕ್ ಡೌನ್ ಘೋಷಣೆ ಮಾಡಿದ್ದರೆ, ಇನ್ನೊಂದೆಡೆ ಮಲೆನಾಡಿನಲ್ಲಿ ರಕ್ತದ ಕಲೆ ಬಿದ್ದಿದೆ. ಅನ್ಯ ಕೋಮಿನವರು ಯುವಕರಿಬ್ಬರಿಗೆ ಚೂರಿಯಿಂದ ಇರಿದಿರುವ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಮಂಕಳಲೆ ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ ಹರೀಶ್ ಹಾಗೂ ಅಶೋಕ್ ಎಂಬವರಿಗೆ ಗಾಯವಾಗಿದ್ದು, ಅಶೋಕ್ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡ ಅಶೋಕ್ ನನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಮತ್ತೊಬ್ಬ ಯುವಕನಿಗೆ ಸಾಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮಂಕಳಲೆ ಗ್ರಾಮಸ್ಥರು ಬೇರೆ ಯಾರಿಗೂ ಗ್ರಾಮಕ್ಕೆ ಪ್ರವೇಶವಿಲ್ಲ ಎಂಬ ಬೋರ್ಡ್ ಹಾಕಿ ಬೇಲಿ ಹಾಕಿದ್ದರು. ಕೆಲವು ಕಿಡಿಗೇಡಿಗಳು ಬೇಲಿಯನ್ನು ತೆರವುಗೊಳಿಸಿ ಗ್ರಾಮದ ಸಮೀಪ ಖಾಸಗಿ ಜಾಗದಲ್ಲಿ ಸುಮಾರು 15 ಮಂದಿ ತಂಡ ಇಸ್ಪೀಟು ಆಡುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಗದರಿಸಿ ಕಳಿಸಿದ್ದರು. ನಂತರ ತೆರವುಗೊಳಿಸಿದ್ದ ಬೇಲಿಯನ್ನು ಗ್ರಾಮದ ಯುವಕರು ಸರಿಪಡಿಸುತ್ತಿದ್ದರು. ಈ ವೇಳೆ ವಾಪಸ್ ಆಗಮಿಸಿದ ಕಿಡಿಗೇಡಿಗಳು ಅದೇ ಗ್ರಾಮದ ಇಬ್ಬರು ಯುವಕರಿಗೆ ಚೂರಿ ಇರಿದು ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಓರ್ವನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.