`ಮಹಾ’ ಡಿಸಿಎಂ ʻದೇಶದ್ರೋಹಿʼ ಎಂದ ಕಾಮೆಡಿಯನ್ – ಕುನಾಲ್ ಕಮ್ರಾ ವಿರುದ್ಧ ಎಫ್‌ಐಆರ್‌

Public TV
2 Min Read

ಮುಂಬೈ: ಮಹಾರಾಷ್ಟ್ರದ ಡಿಸಿಎಂ ಏಕನಾಥ್‌ ಶಿಂಧೆ (Eknath Shinde) ವಿರುದ್ಧ ಅವಹೇಳಕಾರಿ ಹೇಳಿಕೆ ನೀಡಿದ ಹಿನ್ನೆಲೆ ಸ್ಟ್ಯಾಂಡ್-ಅಪ್ ಕಾಮೆಡಿಯನ್ ಕುನಾಲ್ ಕಮ್ರಾ (Stand up comedian Kunal Kamra) ವಿರುದ್ಧ ಶಿವಸೇನಾ ಕಾರ್ಯಕರ್ತರು ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ಹೌದು. ಮುಂಬೈನಲ್ಲಿ (Mumbai) ನಡೆದ ಹಾಸ್ಯ ಕಾರ್ಯಕ್ರಮವೊಂದರಲ್ಲಿ ಕಾಮೆಡಿಯನ್‌ ಕಾಮ್ರಾ ಏಕನಾಥ್‌ ಶಿಂಧೆ ಅವರನ್ನು ಅಪಹಾಸ್ಯ ಮಾಡಿದ್ದಾರೆ. ಕಮ್ರಾ ಸ್ವತಃ ಹಂಚಿಕೊಂಡ ಕಾರ್ಯಕ್ರಮದ ಕ್ಲಿಪ್‌ನಲ್ಲಿ ಅವರು ʻಥಾಣೆಯ ನಾಯಕʼ ಎಂದು ಉಲ್ಲೇಖಿಸಿದ್ದರು. ಪಕ್ಷವನ್ನು ವಿಭಜಿಸಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಕ್ಕಾಗಿ ಶಿಂಧೆ ಅವರನ್ನು ಟೀಕಿಸಿದರಲ್ಲದೇ ಏಕನಾಥ್ ಶಿಂಧೆ ಅವರನ್ನ ʻದೇಶದ್ರೋಹಿʼ ಎಂದೂ ಸಹ ಕರೆದಿದ್ದಾರೆ ಎನ್ನಲಾಗಿದೆ.

ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ಶಿವಸೇನೆ ಸಂಸದ ನರೇಶ್ ಮ್ಹಾಸ್ಕೆ ಈ ಬಗ್ಗೆ ಕಾಮಿಡಿಯನ್‌ಗೆ ಎಚ್ಚರಿಕೆ ನೀಡಿದ್ದರು. ಅಲ್ಲದೇ ಕಾರ್ಯಕರ್ತರು ಶಿವಸೇನಾ (ಶಿಂಧೆ ಬಣ) ಕಾರ್ಯಕರ್ತರು (Shiv Sena Worker) ಕುನಾಲ್ ಕಮ್ರಾಗೆ ಬೆದರಿಕೆ ಹಾಕಿ, ಕಾಮ್ರಾ ಪ್ರದರ್ಶನ ನೀಡಿದ ಖಾರ್‌ನ ಹ್ಯಾಬಿಟಾಟ್ ಕಾಮಿಡಿ ಕ್ಲಬ್‌ಗೆ ಹಾನಿ ಮಾಡಿದ್ದರು. ಈ ಬೆನ್ನಲ್ಲೇ ಶಾಸಕ ಮುರ್ಜಿ ಪಟೇಲ್‌ ಅವರು ಕಾಮ್ರಾ ವಿರುದ್ಧ ಎಂಐಡಿಸಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ. ಇದು ಭಾರೀ ರಾಜಕೀಯ ವಿವಾದಕ್ಕೂ ಕಾರಣವಾಗಿದೆ.

ಕುನಾಲ್‌ ಕಾಮ್ರಾ ಹೇಳಿದ್ದೇನು?
ಮುಂಬೈನ ಹ್ಯಾಬಿಟಾಟ್ ಕಾಮಿಡಿ ಕ್ಲಬ್‌ನಲ್ಲಿ ಕಾರ್ಯಕ್ರಮ ನೀಡುವಾಗ ಮಹಾರಾಷ್ಟ್ರದ ರಾಜಕೀಯ ವಿಭಜನೆಯ ಬಗ್ಗೆ ಮಾತನಾಡಿದ್ದರು. ಏಕನಾಥ್‌ ಶಿಂಧೆ – ಉದ್ದವ್ ಠಾಕ್ರೆ ನಡುವಿನ ರಾಜಕೀಯ ಉಲ್ಲೇಖಿಸುತ್ತಾ ಮೊದಲು ಶಿವಸೇನಾ ಬಿಜೆಪಿಯಿಂದ ಹೊರಬಂದಿತು, ನಂತರ ಶಿವಸೇನಾ ಶಿವಸೇನಾದಿಂದಲೇ ಹೊರಬಂದಿತು. ಎನ್‌ಸಿಪಿಯಿಂದ ಎನ್‌ಸಿಪಿ ಹೊರಬಂದಿತು. ಇವರೆಲ್ಲಾ ಒಂದು ಮತದಾರನಿಗೆ 9 ಬಟನ್‌ಗಳನ್ನು ನೀಡಿದ್ದಾರೆ. ಥಾಣೆಯು ರಾಜಕೀಯ ಭದ್ರಕೋಟೆಯಾಗಿದ್ದು, ಗದ್ದಾರ್‌ (ದ್ರೋಹಿ) ಆಳ್ವಿಕೆ ಎಂದು ಪರೋಕ್ಷವಾಗಿ ಹಾಡು ಹೇಳುತ್ತಾ ಟೀಕಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕಾಮ್ರಾಗೆ ಉದ್ಧವ್‌ ಠಾಕ್ರೆ ಬಣ ಬೆಂಬಲ
ಶಿವಸೇನಾ (ಉದ್ಧವ್‌ ಠಾಕ್ರೆ ಬಣ) ಸಂಸದ ಸಂಜಯ್ ರಾವುತ್ ಅವರು ಕಾಮ್ರಾ ಅವರ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಟ್ವೀಟರ್‌ನಲ್ಲಿ ʻಕುನಾಲ್ ಕಿ ಕಮಾಲ್, ಜೈ ಮಹಾರಾಷ್ಟ್ರʼ ಎಂದು ಬರೆದಿದ್ದಾರೆ. ಮತ್ತೊಬ್ಬ ಸಂಸದರಾದ ಪ್ರಿಯಾಂಕಾ ಚತುರ್ವೇದಿ ಕೂಡ ಕಾಮ್ರಾಗೆ ಬೆಂಬಲ ನೀಡಿದ್ದು, ʻಪ್ರಿಯ ಕುನಾಲ್, ಧೈರ್ಯವಾಗಿರು. ನೀವು ಬಹಿರಂಗಪಡಿಸಿದ ವ್ಯಕ್ತಿ ಮತ್ತು ತಂಡ ನಿಮ್ಮನ್ನು ಬೆನ್ನಟ್ಟುತ್ತಾರೆ. ನಿಮ್ಮ ಮನಸ್ಸಿನ ಮಾತನ್ನು ಹೇಳುವ ಹಕ್ಕನ್ನು ನಾನು ಸಾಯುವವರೆಗೂ ಸಮರ್ಥಿಸಿಕೊಳ್ಳುತ್ತೇನೆʼ ಎಂದು ಎಂದಿದ್ದಾರೆ.

Share This Article