ಶಿರೂರು ಗುಡ್ಡ ಕುಸಿತ ದುರಂತ: ಐಆರ್‌ಬಿ ಕಂಪನಿ ವಿರುದ್ಧ ಪ್ರಕರಣ ದಾಖಲಿಸಲು ನ್ಯಾಯಾಲಯ ಆದೇಶ

Public TV
1 Min Read

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಶಿರೂರಿನಲ್ಲಿ ಜು.16 ರಂದು 11 ಜನರ ಸಾವಿಗೆ ಕಾರಣವಾಗಿದ್ದ ಗುಡ್ಡ ಕುಸಿತ ದುರಂತಕ್ಕೆ ಸಂಬಂಧಿಸಿದಂತೆ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಐಆರ್‌ಬಿ ಕಂಪನಿಯ 8 ನಿರ್ದೇಶಕರ ವಿರುದ್ಧ ಎಫ್‌ಐಆರ್ ದಾಖಲಿಸಲು ಅಂಕೋಲಾ ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ.

ಶಿರೂರು ದುರಂತಕ್ಕೆ ಅವೈಜ್ಞಾನಿಕ ಕಾಮಗಾರಿ ನಡೆಸಿದ್ದ ಕಂಪನಿಯೇ ಹೊಣೆ, ಅವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಪೀಠಾಧಿಪತಿ ಪ್ರಣವಾನಂದ ಸ್ವಾಮೀಜಿ ದೂರು ದಾಖಲಿಸಿದ್ದರು.

ಅವೈಜ್ಞಾನಿಕ ರೀತಿಯಲ್ಲಿ ಗುಡ್ಡ ಕೊರೆದಿದ್ದರಿಂದ ಅವಘಡ ಸಂಭವಿಸಿದೆ. ಅವಘಡ ನಡೆಯಬಹುದು ಎಂಬ ಅರಿವಿದ್ದರೂ ಸುರಕ್ಷತಾ ಕ್ರಮ ಕೈಗೊಳ್ಳದೆ ನಿರ್ಲಕ್ಷ ತೋರಿದ್ದಕ್ಕೆ ಕಂಪನಿ ವಿರುದ್ಧ ಪ್ರಕರಣ ದಾಖಲಿಸುವಂತೆ ವಾದ ಮಂಡಿಸಲಾಗಿತ್ತು. ಇದನ್ನು ಪುರಸ್ಕರಿಸಿದ ಕೋರ್ಟ್ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 101ರ ಅಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದೆ.

ಇದೇ ವೇಳೆ ಪ್ರಕರಣ ದಾಖಲಿಸದಂತೆ ಕಂಪನಿ ಹಾಗೂ ಪೊಲೀಸ್ ಇಲಾಖೆ ಸಲ್ಲಿಸಿದ್ದ ಅರ್ಜಿಯನ್ನೂ ವಜಾಗೊಳಿಸಿದೆ ಎಂದು ಅರ್ಜಿದಾರರ ಪರ ವಕೀಲ ಸುಭಾಷ್ ಕೈರನ್ನ ತಿಳಿಸಿದ್ದಾರೆ.

Share This Article