ಸಮುದ್ರದಡದಲ್ಲಿ ‘ಗಬ್ಬರ್ ಸಿಂಗ್’ ವೇಣುಗಾನ – ಅಭಿಮಾನಿಗಳು ಫಿದಾ

Public TV
1 Min Read

ತಿರುವನಂತಪುರಂ: ಟೀಂ ಇಂಡಿಯಾ ಸ್ಫೋಟಕ ಆಟಗಾರ ಶಿಖರ್ ಧವನ್ ಸಮುದ್ರದ ಬಳಿಯ ಎತ್ತರದ ಸ್ಥಳದಲ್ಲಿ ನಿಂತು ಕೊಳಲನ್ನು ನುಡಿಸುತ್ತಿರುವ ವಿಡಿಯೋವನ್ನು ತಮ್ಮ ಇನ್‍ಸ್ಟಾದಲ್ಲಿ ಪೋಸ್ಟ್ ಮಾಡಿದ್ದು, ‘ಗಬ್ಬರ್ ಸಿಂಗ್’ ಈ ವಿಡಿಯೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಶಿಖರ್ ಧವನ್‍ರ ವೇಣುಗಾನದಿಂದ ಅವರಲ್ಲಿನ ಹೊಸ ಪ್ರತಿಭೆ ಕೂಡ ತಿಳಿದು ಬಂದಿದ್ದು, ದೇವರ ನಾಡು ಎಂದೇ ಕರೆಯಲ್ಪಡುವ ಕೇರಳದ ಸಮುದ್ರ ತೀರದಲ್ಲಿ ತನ್ಮಯತೆಯಿಂದ ಧವನ್ ಕೊಳಲನ್ನು ನುಡಿಸಿದ್ದಾರೆ. ತಮ್ಮ ಗುರು ವೇಣುಗೋಪಾಲ ಸ್ವಾಮಿ ಅವರ ಬಳಿ ಕಳೆದ ಮೂರು ವರ್ಷಗಳಿಂದ ತಾವು ಕೊಳಲು ನುಡಿಸುತ್ತಿರುವುದನ್ನು ಕಲಿಯುತ್ತಿರುವುದಾಗಿ ಧವನ್ ಟ್ವಿಟ್ಟರ್ ಪೋಸ್ಟಿನಲ್ಲಿ ಈ ಹಿಂದೆ ತಿಳಿಸಿದ್ದರು.

‘ಹೊಸ ಆರಂಭ, ಶುದ್ಧ ಗಾಳಿ, ಪಕ್ಕದಲ್ಲೇ ಸಮುದ್ರ. ಸ್ವಲ್ಪ ಸಂಗೀತ, ಮತ್ತು ಸ್ವಲ್ಪ ಆನಂದ’ ಎಂದು ಧವನ್ ತಿಳಿಸಿದ್ದಾರೆ. ಇತ್ತ ಧವನ್‍ರ ವೇಣುಗಾನಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಲ್ಲದೇ ‘ನಿಜವಾಗಲು ಇದು ನೀವೇನಾ?’ ಎಂದು ಪ್ರಶ್ನಿಸಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ನಡೆದ ವೆಸ್ಟ್ ಇಂಡೀಸ್ ಟೂರ್ನಿಯ ಟಿ20 ಹಾಗೂ ಏಕದಿನ ಸರಣಿಯಲ್ಲಿ ಧವನ್ ಕಳಪೆ ಪ್ರದರ್ಶನ ನೀಡಿದ್ದರು. ಪರಿಣಾಮ ಅವರನ್ನು ಟೆಸ್ಟ್ ತಂಡದಿಂದ ಕೈಬಿಡಲಾಗಿತ್ತು. ಸದ್ಯ ಅವರು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಅನಧಿಕೃತ ಏಕದಿನ ಸರಣಿಯ ಅಂತಿಮ 2 ಪಂದ್ಯಗಳಿಗೆ ಟೀಂ ಇಂಡಿಯಾ ‘ಎ’ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಗಾಯದ ಸಮಸ್ಯೆಯಿಂದ ವಿಶ್ವಕಪ್‍ನಿಂದ ಹೊರ ಬಿದ್ದಿದ್ದ ಧವನ್ ಆ ಬಳಿಕ ವೆಸ್ಟ್ ಇಂಡೀಸ್ ಟೂರ್ನಿಯಲ್ಲಿ 5 ಪಂದ್ಯಗಳನ್ನ ಆಡಿದ್ದರು. 2 ಏಕದಿನ ಪಂದ್ಯದಲ್ಲಿ 38 ರನ್, 3 ಟಿ20 ಪಂದ್ಯಗಳಲ್ಲಿ 27 ರನ್ ಗಳಿಸಿದ್ದರು. ಟೀಂ ಇಂಡಿಯಾ ‘ಎ’ ತಂಡದಲ್ಲಿ ಧವನ್ ಸ್ಥಾನ ಪಡೆದಿರುವುದರಿಂದ ಉತ್ತಮ ಪ್ರದರ್ಶನ ನೀಡಿ ಮತ್ತೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ಅವಕಾಶವನ್ನು ಧವನ್ ಪಡೆದಿದ್ದಾರೆ.

https://www.instagram.com/p/B177Yg7nVQX/

Share This Article
Leave a Comment

Leave a Reply

Your email address will not be published. Required fields are marked *