ಶ್ರಾವಣ ಮಾಸ ಬಂತೆಂದರೆ ಸಾಲುಸಾಲು ಹಬ್ಬಗಳು ಶುರುವಾಗುತ್ತದೆ. ಶ್ರಾವಣದಲ್ಲಿ ಬರುವ ಮೊದಲ ಹಬ್ಬವೇ ನಾಗರ ಪಂಚಮಿ. ನಾಗರ ಪಂಚಮಿ ದಿನ ನಾಗನಿಗೆ ಹಾಲೆರೆದು, ವಿವಿಧ ಸಿಹಿ ತಿನಿಸುಗಳನ್ನು ನೈವೇದ್ಯ ಮಾಡಿ ಪೂಜಿಸಲಾಗುತ್ತದೆ. ಆದ್ರೆ ಇಲ್ಲೊಂದು ಗ್ರಾಮದಲ್ಲಿ ಜನರ ಮನೆಯೇ ಹಾವುಗಳ ವಾಸಸ್ಥಾನವಾಗಿದೆ. ಅರೇ ಇದೇನಿದು ಹಾವುಗಳನ್ನು ನೋಡಿದ್ರೆನೇ ಭಯವಾಗುತ್ತೆ. ಅಂಥದ್ರಲ್ಲಿ ಮನುಷ್ಯರು ಹಾವುಗಳೊಂದಿಗೆ ವಾಸಿಸಲು ಸಾಧ್ಯನಾ ಎಂದು ಯೋಚಿಸುತ್ತಿದ್ದೀರಾ? ಹೌದು, ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಶೆಟ್ಪಾಲ್ ಗ್ರಾಮದಲ್ಲಿ ಜನರು ಹಾವುಗಳೊಂದಿಗೆ ವಾಸಿಸುವುದಲ್ಲದೇ, ಅವುಗಳನ್ನು ಮನೆಯ ಸದಸ್ಯರಂತೆ ಕಾಣುತ್ತಾರೆ. ಹಾಗಿದ್ರೆ ಇಲ್ಲಿನ ಜನರು ಹಾವುಗಳೊಂದಿಗೆ ವಾಸಿಸುವುದೇಕೆ ಎಂಬ ಮಾಹಿತಿ ತಿಳಿದುಕೊಳ್ಳಲು ಮುಂದೆ ಓದಿ.
ಹಾವಿಗೆ ನಮ್ಮ ದೇಶದಲ್ಲಿ ಮಹೋನ್ನತ ಸ್ಥಾನವಿದೆ. ನಾಗರಹಾವನ್ನು ದೇವರ ಸ್ಥಾನದಲ್ಲಿ ನಾವು ನೋಡುತ್ತೇವೆ. ನಾಗರಾಜನಿಗೆ ಹಾಲೆರೆದು ಭಕ್ತಿಯಿಂದ ನಮಿಸುವ ಸಂಪ್ರದಾಯ ಇರುವ ದೇಶ ನಮ್ಮದು. ಅದೇ ಕಾರಣಕ್ಕೆ ನಮ್ಮಲ್ಲಿ ನಾಗರಪಂಚಮಿಗೆ ಬಹಳ ಮಹತ್ವವಿದೆ. ಹಾವುಗಳನ್ನು ದೇವರೆಂದು ಪೂಜಿಸುವ ಊರುಗಳ ಪೈಕಿ ಶೆಟ್ಪಾಲ್ ಕೂಡ ಒಂದು. ಇಲ್ಲಿ ನಾಗರ ಪಂಚಮಿಗೆ ಮಾತ್ರವಲ್ಲದೇ ಪ್ರತಿದಿನ ಹಾವುಗಳನ್ನು ಪೂಜಿಸಲಾಗುತ್ತದೆ. ಅಲ್ಲದೇ ಹಾವುಗಳೊಂದಿಗಿನ ಜನರ ನಂಟು ಕೂಡ ಮಹತ್ವವಾದದ್ದು.

ಹಾವುಗಳೊಂದಿಗೆ ಜನರ ನಂಟು:
ಶೆಟ್ಪಾಲ್ ಗ್ರಾಮವನ್ನು ʼಭಾರತದ ಹಾವಿನ ಗ್ರಾಮʼ ಎಂದು ಕರೆಯಲಾಗುತ್ತದೆ. ಈ ಗ್ರಾಮದ ಮನೆಗಳಲ್ಲಿ ಹಾವುಗಳು ಸರಾಗವಾಗಿ ಓಡಾಡಿಕೊಂಡಿರುತ್ತವೆ.ಈ ಹಳ್ಳಿಯಲ್ಲಿ ಹಾವುಗಳನ್ನು ತಮ್ಮ ಕುಟುಂಬದ ಸದಸ್ಯರಂತೆ ಉಪಚರಿಸಲಾಗುತ್ತದೆ. ಅಲ್ಲಿನ ಸ್ಥಳೀಯರ ಪ್ರಕಾರ, ಹಾವುಗಳಿಗೆ ಸಹ ಮನೆಯಲ್ಲಿ ವಿಶೇಷವಾದ ಜಾಗವನ್ನು ನೀಡಲಾಗುತ್ತದೆ. ಅವುಗಳು ಮನೆಯಲ್ಲಿ ಎಲ್ಲಿ ಬೇಕಾದರೂ ವಾಸಿಸುವ ಸ್ವಾತಂತ್ರ್ಯವನ್ನು ನೀಡಲಾಗುತ್ತದೆ. ಇಲ್ಲಿ ಹಾವುಗಳಿಗೆ ಯಾವುದೇ ರೀತಿಯ ನಿರ್ಬಂಧಗಳಿಲ್ಲ. ಹಳ್ಳಿಯ ಜನರು ಈ ಹಾವುಗಳಿಗೆ ಮುಕ್ತವಾಗಿ ತಿರುಗಾಡಲು ಅವಕಾಶ ಮಾಡಿಕೊಡುತ್ತಾರೆ.
ಹಾವುಗಳಿಗೆಂದೇ ವಿಶೇಷ ಮಂದಿರ:
ಹಾವು ಮತ್ತು ಆಧ್ಯಾತ್ಮ ಒಟ್ಟಿಗೆ ಸಾಗುತ್ತದೆ ಎಂಬುದು ಈ ಗ್ರಾಮದ ಜನರ ನಂಬಿಕೆ. ಅವರು ಹಾವುಗಳನ್ನು ಪೂಜಿಸುವುದು ಮಾತ್ರವಲ್ಲ, ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಇಲ್ಲಿ ಪ್ರತಿ ಮನೆಯಲ್ಲೂ ಹಾವುಗಳಿಗೆ ವಿಶೇಷ ಸ್ಥಾನವನ್ನು ಕಲ್ಪಿಸಲಾಗಿದೆ. ಹಾವುಗಳಿಗೆ ಮುಡಿಪಾದ ಆಲಯವು ಕೂಡ ಇದೆ. ಈ ವಿಶೇಷ ಸ್ಥಳವನ್ನು ‘ಮಂದಿರ’ ಎಂದು ಕರೆಯಲಾಗುತ್ತದೆ. ಜನರು ಹೊಸ ಮನೆಯನ್ನು ಕಟ್ಟುವಾಗ ಹಾವಿಗೆ ವಿಶೇಷ ಸ್ಥಳವನ್ನು ನಿರ್ಮಿಸಲು ಮರೆಯುವುದಿಲ್ಲ.
ಈ ಊರಿನಲ್ಲಿ ಪ್ರತಿಯೊಬ್ಬರ ಹೃದಯದಲ್ಲೂ ನಾಗರಹಾವಿನ ಬಗ್ಗೆ ಶ್ರದ್ಧೆಯಿದೆ, ಭಕ್ತಿ ಇದೆ. ಹೀಗಾಗಿ, ಪ್ರತಿಯೊಬ್ಬರು, ಪ್ರತಿ ಮನೆಯಲ್ಲೂ ಮನೆಗೆ ಬರುವ ಹಾವಿಗೆ ಪೂಜೆ ಸಲ್ಲಿಸುತ್ತಾರೆ. ತಂಪನ್ನರಸಿ ಹಾವುಗಳು ಬಂದರೆ ಅವುಗಳಿಗೆ ಹಾಯಾಗಿ ಮಲಗಲು ಸಹಾಯವಾಗಲಿ ಎಂದು ಮಂದಿರಗಳನ್ನು ನಿರ್ಮಿಸಲಾಗುತ್ತದೆ.
ಗ್ರಾಮಸ್ಥರು ನಾಗರ ಹಾವುಗಳನ್ನು ಶಿವನ ದ್ಯೋತಕವೆಂದು ಪರಿಗಣಿಸುತ್ತಾರೆ. ಅವುಗಳನ್ನು ಬಹಳ ಘನತೆ ಮತ್ತು ಗೌರವದಿಂದ ಪರಿಗಣಿಸಲಾಗುತ್ತದೆ. ಹಾವುಗಳಿಗಾಗಿ ಈ ಗ್ರಾಮದಲ್ಲಿ ವಿಶೇಷ ಪೂಜೆ ಮತ್ತು ಆಚರಣೆಗಳನ್ನು ನಡೆಸಲಾಗುತ್ತದೆ. ಈ ಗ್ರಾಮದಲ್ಲಿ ಹಾವುಗಳ ಸಂಖ್ಯೆ ಮನುಷ್ಯರ ಜನಸಂಖ್ಯೆಯನ್ನು ಮೀರಿದೆ. ಗ್ರಾಮಸ್ಥರೇ ಹಾವುಗಳಿಗೆ ಆಹಾರ ನೀಡುತ್ತಾರೆ ಎಂಬುದು ಇಲ್ಲಿನ ವಿಶೇಷ.
ಈ ಗ್ರಾಮದ ಮಕ್ಕಳಿಗೆ ಹಾವಿನ ಭಯವೇ ಇಲ್ಲ. ಏಕೆಂದರೆ ಜನಸಾಮಾನ್ಯರಲ್ಲಿ ಹಾವುಗಳು ಬೆಳೆಯುತ್ತಿವೆ. ಮಕ್ಕಳು ಕೂಡ ಹಾವು ಕೊರಳಲ್ಲಿ ಹಾಕಿಕೊಂಡು ಓಡಾಡುತ್ತಾರೆ. ಈ ಊರಿಗೆ ಹೋದರೆ ಹಾವು ಕಚ್ಚುತ್ತದೆ ಎಂಬ ಭಯ ಹಲವರದ್ದು. ಆದರೆ ಅಂತಹ ಸಂಗತಿಗಳು ಇಲ್ಲಿ ನಡೆಯುವುದಿಲ್ಲ. ಇದುವರೆಗೂ ಈ ಊರಲ್ಲಿ ಒಂದೇ ಒಂದು ಹಾವು ಕಚ್ಚಿದ ಪ್ರಕರಣ ವರದಿಯಾಗಿಲ್ಲ.ಇಲ್ಲಿ ಕೇವಲ ನಾಗರ ಹಾವು ಮಾತ್ರವಲ್ಲದೇ ನಾನಾರೀತಿಯ ಹಾವುಗಳು ವಾಸಿಸುತ್ತವೆ.
ಈ ಊರಿನಲ್ಲಿ ಸುಮಾರು 2,600ಕ್ಕೂ ಅಧಿಕ ಗ್ರಾಮಸ್ಥರಿದ್ದಾರೆ. ಆದರೂ ಹಾವುಗಳ ಸಂಚಾರಕ್ಕೆ ಇಲ್ಲಿ ಎಂದೂ ಅಡ್ಡಿ ಎದುರಾಗಿದ್ದೇ ಇಲ್ಲ. ಜನರು ಯಾರೂ ಹಾವುಗಳಿಗೆ ತೊಂದರೆ ಮಾಡಿದ್ದೇ ಇಲ್ಲ. ವಿಶೇಷ ಅಂದರೆ ಹಾವುಗಳು ಮನೆಗೆ ಬಂದರೆ ಇಲ್ಲಿನ ಜನ ಓಡಿ ಹೋಗುವುದಿಲ್ಲ. ಬದಲಾಗಿ ತಮ್ಮ ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಾರೆ. ಹಾವುಗಳಾಗಲಿ, ಜನರಾಗಲಿ ಇಲ್ಲಿ ಭಯವಿಲ್ಲದೆ ಜೀವನ ನಡೆಸುತ್ತಿದ್ದಾರೆ. ಅದೂ ಅಲ್ಲದೆ, ಇದುವರೆಗೆ ಇಲ್ಲಿ ಹಾವು ಕಚ್ಚಿ ಅಥವಾ ಹಾವಿನಿಂದ ಏನಾದರೂ ತೊಂದರೆ ಆದ ಒಂದೇ ಒಂದು ಉದಾಹರಣೆ ಇಲ್ಲ ಎನ್ನುತ್ತಾರೆ ಜನ. ಇದನ್ನು ಕೇಳುವಾಗಲೇ ಮೈ ರೋಮಾಂಚನವಾಗುತ್ತದೆ. ಈ ಊರಿನಲ್ಲಿ ಸಿದ್ದೇಶ್ವರ ದೇಗುಲ ಇದೆ. ಒಂದೊಮ್ಮೆ ಬೇರೆ ಊರಿನಲ್ಲಿ ಯಾರಿಗಾದರೂ ಹಾವು ಕಚ್ಚಿದರೆ ಅವರನ್ನು ಇಲ್ಲಿಗೆ ಕರೆತಂದರೆ ರೋಗಿ ತಕ್ಷಣ ಗುಣಮುಖರಾಗುತ್ತಾರೆ ಎಂಬ ನಂಬಿಕೆಯೂ ಇಲ್ಲಿನ ಜನರಿಗಿದೆ.
ಈ ಗ್ರಾಮದಲ್ಲಿ ಈ ರೀತಿಯ ಸಂಪ್ರದಾಯ ಯಾವಾಗ ಶುರುವಾಯಿತು ಎಂದು ಯಾರಿಗೂ ತಿಳಿದಿಲ್ಲ. ಹಲವಾರು ವರ್ಷಗಳಿಂದ ಜನ ಈ ಊರಲ್ಲಿ ಹಾವುಗಳೊಂದಿಗೆ ವಾಸಿಸುತ್ತಿದ್ದಾರೆ. ಆದರೆ ಯಾವ ಕಾರಣಕ್ಕಾಗಿ ಇಲ್ಲಿನ ಜನರು ಹಾವುಗಳನ್ನು ಮನೆ ಸದಸ್ಯರಂತೆ ನೋಡುತ್ತಾರೆ ಎಂಬುದು ಇಂದಿಗೂ ನಿಗೂಢವಾಗಿದೆ.
ಶೆಟ್ಪಾಲ್ ಎಲ್ಲಿದೆ?
ಶೆಟ್ಪಾಲ್ ಪುಣೆಯಿಂದ 200 ಕಿಮೀ ಮತ್ತು ಮುಂಬೈನಿಂದ 350 ಕಿಮೀ ದೂರದಲ್ಲಿದೆ. ಮೊಡ್ನಿಂಬ್ ರೈಲು ನಿಲ್ದಾಣ ಹತ್ತಿರದ ನಿಲ್ದಾಣವಾಗಿದೆ.