ಭಾರತ ಅದ್ಭುತ ದೇಶ, ನನ್ನ ಒಳ್ಳೆಯ ಫ್ರೆಂಡ್‌ – ಪಾಕ್‌ ಪ್ರಧಾನಿ ಎದುರೇ ಮೋದಿಯನ್ನ ಹಾಡಿಹೊಗಳಿದ ಟ್ರಂಪ್‌

Public TV
2 Min Read

– ಈಗ ಭಾರತ -ಪಾಕ್‌ ಚೆನ್ನಾಗಿ ಹೊಂದಿಕೊಳ್ಳುತ್ತವೆ ಅಲ್ಲವೇ? – ಟ್ರಂಪ್‌ ಪ್ರಶ್ನೆ
– ಅಧ್ಯಕ್ಷರ ಮಾತಿಗೆ ಹೌದು ಎನ್ನುತ್ತಾ ತಲೆಯಾಡಿಸಿದ ಶೆಹಬಾಜ್ ಷರೀಫ್

ವಾಷಿಂಗ್ಟನ್‌/ಕೈರೋ: ಭಾರತ ಒಂದು ಅದ್ಭುತ ದೇಶ, ನನ್ನ ಒಳ್ಳೆಯ ಸ್ನೇಹಿತ ಕೂಡ ಹೌದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಎದುರಲ್ಲೇ ಭಾರತ & ಮೋದಿ ಅವರನ್ನ ಹಾಡಿಹೊಗಳಿದ್ದಾರೆ.

ಈಜಿಪ್ಟ್‌ನಲ್ಲಿ ಸೋಮವಾರ ನಡೆದ ಗಾಜಾ ಶಾಂತಿ ಸಮ್ಮೇಳದಲ್ಲಿ ಮಾತನಾಡಿದ ಟ್ರಂಪ್‌, ಭಾರತ ಹಾಗೂ ಪ್ರಧಾನಿ ಮೋದಿ ಅವರನ್ನ ಹೊಗಳಿದ್ರು. ಈಗ ಭಾರತ ಮತ್ತು ಪಾಕಿಸ್ತಾನ ಚೆನ್ನಾಗಿ ಹೊಂದಿಕೊಳ್ಳುತ್ತವೇ ಅಲ್ಲವೇ ಎಂದೂ ಶೆಹಬಾಜ್ ಷರೀಫ್ (Shehbaz Sharif) ಕಡೆಗೆ ತಿರುಗಿ ಕೇಳಿದರು. ಇದಕ್ಕೆ ಪಾಕ್‌ ಪ್ರಧಾನಿ (Pak PM) ಹೌದು ಎನ್ನುತ್ತಲೇ ಸಕಾರಾತ್ಮಕವಾಗಿ ತಲೆಯಾಡಿಸಿದ್ರು. ಈ ವಿಡಿಯೋ ತುಣುಕುಗಳೀಗ ಸೋಷಿಯಲ್‌ ಮೀಡಿಯಾದಲ್ಲೂ ವೈರಲ್‌ ಆಗ್ತಿವೆ.

ಭಾಷಣದ ವೇಳೆ ಮುಗುಳುನಗೆ ಬೀರಿ ಮಾತನಾಡಿದ ಟ್ರಂಪ್‌, ಭಾರತವು (India) ಒಂದು ಅದ್ಭುತ ದೇಶ, ನನ್ನ ಇಳ್ಳೆಯ ಸ್ನೇಹಿತನ ನೇತೃತ್ವದಲ್ಲಿ ಅದ್ಭುತ ಕೆಲಸಗಳನ್ನ ಮಾಡುತ್ತಿದೆ. ಭಾರತ ಮತ್ತು ಪಾಕಿಸ್ತಾನ ತುಂಬಾ ಚೆನ್ನಾಗಿ ಹೊಂದಿಕೊಳ್ಳುತ್ತವೆ ಎಂದು ನಾನು ಭಾವಿಸುತ್ತೇನೆ ಎಂದರು.

ಪಾಕ್‌ ಮಿಲಿಟರಿ ನಾಯಕತ್ವ ಶ್ಲಾಘನೆ
ಇನ್ನೂ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಅವರೊಂದಿಗೆ ಗಾಜಾ ಶಾಂತಿ ಶೃಂಗಸಭೆಯ ಸಹ-ಅಧ್ಯಕ್ಷತೆ ವಹಿಸಿದ್ದ ಟ್ರಂಪ್, ಪಾಕಿಸ್ತಾನದ ಮಿಲಿಟರಿ ನಾಯಕತ್ವವನ್ನು ಶ್ಲಾಘಿಸಿದರು. ಉತ್ತಮ ಸ್ನೇಹಿತರು ಒಟ್ಟಾಗಿ ಕೆಲಸ ಮಾಡುವುದರಿಂದ ಶಾಂತಿ ನೆಲೆಸುತ್ತದೆ ಎಂದು ಭಾರತ-ಪಾಕ್‌ ಒಂದಾಗುವಂತೆ ಪರೋಕ್ಷವಾಗಿ ಹೇಳಿದರು. ಇದೇ ವೇಳೆ ತಮ್ಮ ಹಿಂದೆ ನಿಂತಿದ್ದ ಶಹಬಾಜ್ ಷರೀಫ್ ಅವರನ್ನ ತೋರಿಸುತ್ತಾ, ಇದನ್ನ ಸಾಧ್ಯವಾಗಿಸಲು ಸಹಕರಿಸುತ್ತಾರೆ… ಹೌದಲ್ಲವೇ ಎಂದು ವ್ಯಂಗ್ಯ ಮಾಡಿದರು.

ಇಸ್ರೇಲ್‌ ಸಂಸತ್ತಿನಲ್ಲಿ ಟ್ರಂಪ್‌ ಭಾಷಣ
ಇದಕ್ಕೂ ಮುನ್ನ ಇಸ್ರೇಲ್ (Isreal) ಮತ್ತು ಗಾಜಾದ ಹಮಾಸ್ (Hamas) ಬಂಡುಕೋರರ ನಡುವಿನ ಸುದೀರ್ಘ 2 ವರ್ಷಗಳ ಯುದ್ಧಕ್ಕೆ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಇಸ್ರೇಲ್‌ ಸಂಸತ್ತನ್ನು ಉದ್ದೇಶಿಸಿ ಟ್ರಂಪ್‌ ಮಾತನಾಡಿದ್ದರು. ಹಲವು ವರ್ಷಗಳ ನಿರಂತರ ಯುದ್ಧದ ನಂತರ ಇಂದು ಆಕಾಶವು ಶಾಂತವಾಗಿದೆ. ಬಂದೂಕುಗಳು ಮೌನವಾಗಿವೆ. ಸೈರನ್‌ಗಳು ಶಬ್ಧ ಮಾಡುವುದನ್ನು ನಿಲ್ಲಿಸಿವೆ. ಶಾಂತಿಯಿಂದ ಇರುವ ಪವಿತ್ರ ಭೂಮಿಯ ಮೇಲೆ ಸೂರ್ಯ ಉದಯಿಸುತ್ತಿದ್ದಾನೆ ಎಂದು ಹೇಳಿದರು.

ಒತ್ತೆಯಾಳುಗಳು ಹಿಂತಿರುಗಿದ್ದಾರೆ, ಅದನ್ನು ಹೇಳಲು ತುಂಬಾ ಸಂತೋಷವಾಗುತ್ತಿದೆ. ನಾನು ಕ್ರೂರಿಯಾಗಿ ವರ್ತಿಸುತ್ತೇನೆ ಎಂದು ಎಲ್ಲರೂ ಭಾವಿಸಿದ್ದರು. ನಾನು ಎಲ್ಲರೊಂದಿಗೆ ಯುದ್ಧಕ್ಕೆ ಹೋಗುತ್ತೇನೆ ಎಂದು ಹಿಲರಿ ಕ್ಲಿಂಟನ್ ಹೇಳಿದ್ದು ನನಗೆ ನೆನಪಿದೆ. ಆದರೆ ನಾನು ಯುದ್ಧ ಬಯಸುವ ವ್ಯಕ್ತಿಯಲ್ಲ. ನನ್ನದು ಯುದ್ಧ ನಿಲ್ಲಿಸುವ ವ್ಯಕ್ತಿತ್ವ ತಾವೇ ಬೆನ್ನುತಟ್ಟಿಕೊಂಡರು.

Share This Article